Asianet Suvarna News Asianet Suvarna News

Tumakur: ಚತುಷ್ಪಥ ರಸ್ತೆ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಕುತ್ತು

ಎನ್‌.ಎಚ್‌. 206 ರಾಷ್ಟ್ರೀಯ ಹೆದ್ದಾರಿಯನ್ನು ತುಮಕೂರು-ಹೊನ್ನಾವರದವರೆಗೆ ಸಾವಿರಾರು ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿಸಲು ನಡೆಸಲಾಗುತ್ತಿರುವ ನಿರ್ಮಾಣ ಕಾಮಗಾರಿಯು ತಾಲೂಕಿನಾದ್ಯಂತ ನಡೆಯುತ್ತಿದ್ದು, ನೂತನ ರಸ್ತೆ ಕಾಮಗಾರಿ ನೆಪದಲ್ಲಿ ಇರುವ ಹಳೆ ರಸ್ತೆಯನ್ನು ಅಗೆದು ಹಾಳು ಮಾಡಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ

Due to four-lane road works, vehicular traffic is affected snr
Author
First Published Dec 12, 2022, 5:33 AM IST

  ಬಿ. ರಂಗಸ್ವಾಮಿ

 ತಿಪಟೂರು (ಡಿ.12): ಎನ್‌.ಎಚ್‌. 206 ರಾಷ್ಟ್ರೀಯ ಹೆದ್ದಾರಿಯನ್ನು ತುಮಕೂರು-ಹೊನ್ನಾವರದವರೆಗೆ ಸಾವಿರಾರು ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿಸಲು ನಡೆಸಲಾಗುತ್ತಿರುವ ನಿರ್ಮಾಣ ಕಾಮಗಾರಿಯು ತಾಲೂಕಿನಾದ್ಯಂತ ನಡೆಯುತ್ತಿದ್ದು, ನೂತನ ರಸ್ತೆ ಕಾಮಗಾರಿ ನೆಪದಲ್ಲಿ ಇರುವ ಹಳೆ ರಸ್ತೆಯನ್ನು ಅಗೆದು ಹಾಳು ಮಾಡಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕೆ.ಬಿ.ಕ್ರಾಸ್‌ ಬಳಿಯಿಂದ ತಿಪಟೂರು ನಗರ, ಮಡೇನೂರು ಅಯ್ಯನಬಾವಿ, ಬಿದರೆಗುಡಿ ಹಾಗೂ ಕೊನೇಹಳ್ಳಿ ಗಡಿವರೆಗೆ ನೂತನ ರಸ್ತೆ ಕಾಮಗಾರಿ ಕಳೆದ 3-4 ವರ್ಷಗಳಿಂದ ಕುಂಟುತ್ತಾ ಸಾಗಿದ್ದು ಇತ್ತ ನೂತನ ರಸ್ತೆ ಕಾಮಗಾರಿಯೂ ಮುಗಿದಿಲ್ಲ. ಅತ್ತ ಹಳೆ ರಸ್ತೆಯನ್ನೂ ಸುಸ್ಥಿತಿಯಲ್ಲಿಟ್ಟಿಲ್ಲವಾದ್ದರಿಂದ ತುಮಕೂರಿನಿಂದ ತಿಪಟೂರು ಗಡಿವರೆಗೆ ನಿತ್ಯ ಸಂಚರಿಸುವ ಸಾವಿರಾರು ವಾಹನಗಳಿಗೆ ತೀವ್ರ ತೊಂದರೆಯಾಗಿದೆ. ಅಧಿಕಾರಿಗಳ ಹಾಗೂ ಗುತ್ತಿಗೆದಾರ ಕಂಪನಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದಿಂದ ಇರುವ ಹಳೇ ರಸ್ತೆಯೂ ಸಂಪೂರ್ಣ ಹಾಳಾಗಿದೆ. ಹೊಸ ರಸ್ತೆ ನಿರ್ಮಿಸುವ ನೆಪದಲ್ಲಿ ಹಳೆ ರಸ್ತೆಯನ್ನು ಮನಸೋ ಇಚ್ಛೆ ಹಾಳು ಮಾಡಲಾಗಿದೆ. ನೂರಾರು ಕಡೆ ಹಳೆ ರಸ್ತೆ ಹಾಗೂ ಹೊಸ ರಸ್ತೆಗಳು ಕೂಡುವ(ಜಾಯಿಂಟ್‌) ಕಡೆ ತಿರುವು ತೆಗೆದುಕೊಳ್ಳಲು ಸರಿಯಾದ ಮಾರ್ಗ ಸೂಚಿ ಫಲಕ, ಮುಂಜಾಗ್ರತಾ ಕ್ರಮಗಳನ್ನು ಸರಿಯಾಗಿ ಅಳವಡಿಸದಿರುವುದರಿಂದ ಸಾಕಷ್ಟುಅಪಘಾತಗಳಾಗಿ ಅಮಾಯಕರ ಜೀವಗಳು ಹೋಗಿವೆಯಲ್ಲದೆ ವಾಹನಗಳು (Vehicle)  ಸಹ ನುಚ್ಚು ನೂರಾಗಿವೆ. ತಿರುವು ತೆಗೆದುಕೊಳ್ಳಬೇಕಾದ ಸ್ಥಳಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸುವುದೇ ಇಲ್ಲವಾಗಿದೆ. ಹಳೆ ರಸ್ತೆಯನ್ನು ಸಂಪರ್ಕಿಸುವ ಸ್ಥಳದಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿದ್ದು ಸ್ವಲ್ಪ ಮಳೆ ಬಂದರೂ ಸಾಕು ನೀರು ಕೆರೆಯಂತೆ ನಿಂತು ಕೊಳ್ಳುವುದರಿಂದ ತೊಂದರೆಯಾಗಿದೆ. ಇನ್ನು ಕೆಲವು ಕಡೆ ವಾಹನಗಳು ದ್ವಿಮುಖವಾಗಿ ಜಾಯಿಂಟ್‌ಗಳನ್ನು ದಾಟುವಾಗ ರಸ್ತೆ (Road)  ಅತ್ಯಂತ ಕಿರುದಾಗಿದ್ದು ತಿರುವು ತೆಗೆದುಕೊಳ್ಳಲು ಹರಸಾಹಸ ಪಡಬೇಕಾಗಿದೆ. ರಾತ್ರಿ ವೇಳೆಯಲ್ಲಂತೂ ಇನ್ನೂ ತೊಂದರೆಯಾಗಿದೆ. ನೂತನ ರಸ್ತೆಗೆ ಹೊಂದಿಕೊಂಡಂತೆ ಸಾಕಷ್ಟುಗ್ರಾಮಗಳ ಮಧ್ಯೆ, ಪಕ್ಕದಲ್ಲಿ ರಸ್ತೆ ಹಾಯ್ದು ಹೋಗುತ್ತಿದ್ದು ಅಲ್ಲಿನ ಜನಸಾಮಾನ್ಯರು ರಸ್ತೆ ದಾಟಲು ಹರಸಾಹಸ ಪಡಬೇಕಲ್ಲದೆ ಮುಂಜಾಗ್ರತಾ ಸೂಚನಾ ಫಲಕಗಳೇ ಇಲ್ಲವಾಗಿದ್ದು ಅಪಘಾತಗಳಾಗುತ್ತಿವೆ.

ಸಾಕಷ್ಟುಕಡೆಗಳಲ್ಲಿ ಮೇಲ್ಸೇತುವೆ ನಿರ್ಮಿಸುತ್ತಿದ್ದು ಅಲ್ಲಿ ನಿತ್ಯವಾಹನಗಳ ಓಡಾಟಕ್ಕೆ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಮೇಲ್ಸೇತುವೆ ಬಳಿ ನಿರ್ಮಿಸಿರುವ ಸವೀರ್‍ಸ್‌ ರಸ್ತೆಗಳ ಮೇಲೆ ಮೇಲ್ಸೇತುವೆ ನಿರ್ಮಾಣಕ್ಕೆ ಬಳಸುವ ವಸ್ತುಗಳು ಕೆಳಗಡೆ ಬಿಳುವುದರಿಂದ ಓಡಾಡುವ ವಾಹನ ಸವಾರರಿಗೆ ಭಯವಾಗುತ್ತಿದೆ. ಸವೀರ್‍ಸ್‌ ರಸ್ತೆಗಳ ಮೇಲೆ ಇಟ್ಟಿಗೆ, ಕಬ್ಬಿಣದ ತುಂಡುಗಳು ಬೀಳುತ್ತಿದ್ದು ವಾಹನ ಓಡಿಸಲು ತೊಂದರೆಯಾಗಿದೆ. ಕಾಮಗಾರಿ ನಡೆಸುವ ಗುತ್ತಿಗೆದಾರರು ಪ್ರಯಾಣಿಕರ ಸುರಕ್ಷತೆ ಬಗ್ಗೆ ಯಾವೊಂದು ನಿಯಮಗಳನ್ನು ಪಾಲಿಸದೆ ಇದ್ದರೂ ಹೈವೇ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು. ಈ ಕೂಡಲೆ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಯವರು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸುರಕ್ಷಿತವಾಗಿ ರಸೆ ಕಾಮಗಾರಿಯನ್ನು ನಡೆಸುವ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

  ಹೊಸದಾಗಿ ನಿರ್ಮಾಣವಾಗಿರುವ ರಸ್ತೆಯ ಡಾಂಬರು ಕಿತ್ತು ಗುಂಡಿಗಳು ಬಿದ್ದಿದ್ದು ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ. ಇದರಿಂದ ಪ್ರತಿನಿತ್ಯ ಒಂದಲ್ಲೊಂದು ಅಪಘಾತಗಳು ನಡೆಯುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಗುತ್ತಿಗೆದಾರರಿಗೆ ರಸ್ತೆ ಕಾಮಗಾರಿ ಮುಗಿಸಲು ನೀಡಿದ್ದ ಅವಧಿ ಮುಗಿದಿದ್ದರೂ ನೂತನ ರಸ್ತೆ ಕೆಲಸ ಮುಗಿದಿಲ್ಲ. ಅಧಿಕಾರಿಗಳು, ಗುತ್ತಿಗೆದಾರರು ನಿತ್ಯ ಓಡಾಡುವ ವಾಹನಗಳ ಸುರಕ್ಷಿತ ಪ್ರಯಾಣಕ್ಕೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಕಾಮಗಾರಿ ನಡೆಯುತ್ತಿದ್ದರೂ ಯಾವುದೇ ಸೂಚನಾ ಫಲಕಗಳಿಲ್ಲ.

ಟೂಡಾ ಶಶಿಧರ್‌, ಕಾಂಗ್ರೆಸ್‌ ಯುವ ಮುಖಂಡರು, ತಿಪಟೂರು.

  ರಾಷ್ಟ್ರೀಯ ಹೆದ್ದಾರಿಯಾಗಿರುವ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ವೇಗವಾಗಿ ಓಡಾಡುವುದರಿಂದ ಸಾಕಷ್ಟುಅಪಘಾತಗಳು ಸಂಭವಿಸುತ್ತಿವೆ. ಅನೇಕ ಕಡೆಗಳಲ್ಲಿ ರಸ್ತೆ ಕಿರಿದಾಗಿದ್ದು ತಿರುವುಗಳು ಸಾಕಷ್ಟುಸಂಖ್ಯೆಯಲ್ಲಿದ್ದು ಮುಂಬರುವ ವಾಹನಗಳೇ ಕಾಣಿಸುವುದಿಲ್ಲ. ದಿಡೀರ್‌ ಕಾಣಿಸಿದರೂ ಸೈಡ್‌ ಕೊಡಲು ಸ್ಥಳಾವಕಾಶವೇ ಇಲ್ಲ. ಅಲ್ಲದೆ ರಸ್ತೆಯ ಹಲವು ಕಡೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ಏಕಾಏಕಿ ವಾಹನಗಳು ಬಂದು ಗುಂಡಿಗೆ ಇಳಿಯುವುದರಿಂದ ಪ್ರತಿನಿತ್ಯ ಅಪಘಾತಗಳುಂಟಾಗಿ ಸಾವುನೋವುಗಳು ಸಂಭವಿಸುತ್ತಿವೆ.

- ಪ್ರಶಾಂತ್‌, ಜೆಡಿಎಸ್‌ ಮುಖಂಡರು ಹಾಗೂ ಉದ್ಯಮಿ,

ಕೋಟನಾಯಕನಹಳ್ಳಿ ತಿಪಟೂರು ತಾ.

Follow Us:
Download App:
  • android
  • ios