ಮಂಗಳೂರು(ಮೇ 20): ಷರತ್ತುಬದ್ಧ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ದುಬೈನಿಂದ ಬಂದ ಪ್ರಯಾಣಿಕರಲ್ಲಿ ಇಬ್ಬರು, ಮಂಗಳೂರಿನಲ್ಲಿ ನಿಗದಿತ ಕ್ವಾರೆಂಟೈನ್‌ಗೆ ಒಳಪಡಲು ಒಪ್ಪದೆ ಬದಲೀ ಸಂಚಾರಕ್ಕೆ ಬೇಡಿಕೆ ಇಟ್ಟಘಟನೆ ಸೋಮವಾರ ರಾತ್ರಿ ನಡೆದಿದೆ.

ಒಬ್ಬರು ಮಹಾರಾಷ್ಟ್ರಕ್ಕೆ ಸಂಚರಿಸಲು ಬೇಡಿಕೆ ಮುಂದಿಟ್ಟರೆ, ಇನ್ನೊಬ್ಬರು ಬೆಂಗಳೂರಿಗೆ ಕಳುಹಿಸಿಕೊಡಬೇಕು ಎಂದು ಪಟ್ಟು ಹಿಡಿದಿದ್ದರು. ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡದೆ ಇದ್ದಾಗ ಈ ಇಬ್ಬರು ಪ್ರಯಾಣಿಕರು ಉನ್ನತ ಮಟ್ಟದ ಪ್ರಭಾವ ಬಳಸಿ ಜಿಲ್ಲಾಡಳಿತದ ಮೇಲೆ ಒತ್ತಡ ತಂದಿದ್ದಾರೆ.

ಕೊರೋನಾ ಕಾಟ: 'ಬಸ್‌ ಟಿಕೆಟ್‌ ಕೊಡಲು ಆನ್‌ಲೈನ್‌ ವ್ಯವಸ್ಥೆಗೆ ಚಿಂತನೆ'

ಈ ಇಬ್ಬರು ಪ್ರಯಾಣಿಕರಿಗಾಗಿ ಸುಮಾರು ಮುಕ್ಕಾಲು ಗಂಟೆ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಹಾಗೂ ಕೆಲವು ಪ್ರಯಾಣಿಕರು ಹೈರಾಣಾಗಬೇಕಾಯಿತು. ಕೊನೆಗೆ ಬೆಂಗಳೂರಿನ ಪ್ರಯಾಣಿಕರಿಗೆ ತೆರಳಲು ಒಪ್ಪಿಗೆ ನೀಡಲಾಗಿದ್ದು, ಮಹಾರಾಷ್ಟ್ರಕ್ಕೆ ತೆರಳಲು ಬೇಡಿಕೆ ಇರಿಸಿದ್ದ ಪ್ರಯಾಣಿಕರನ್ನು ಮಂಗಳೂರಿನ ನಿಗದಿತ ಹೊಟೇಲ್‌ನ ಕ್ವಾರೆಂಟೈನ್‌ಗೆ ಕಳುಹಿಸಲಾಯಿತು. ವಿಮಾನ ಬಂದು ಎರಡು ಗಂಟೆಯಲ್ಲಿ ಮುಗಿಯಲಿದ್ದ ಇಡೀ ಪ್ರಕ್ರಿಯೆ ಈ ಇಬ್ಬರಿಂದಾಗಿ ಮುಕ್ಕಾಲು ಗಂಟೆ ತಡವಾಗುವಂತಾಯಿತು.

ಇಂದು 3ನೇ ವಿಮಾನ ಮಂಗಳೂರಿಗೆ:

ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ಇರುವ ಕನ್ನಡಿಗರನ್ನು ಕರೆತರುತ್ತಿರುವ ಕೇಂದ್ರ ಸರ್ಕಾರದ ವಂದೇ ಭಾರತ್‌ ಮಿಷನ್‌ನ 3ನೇ ಕಾರ್ಯಾಚರಣೆ ಮೇ 20ರಂದು ನಡೆಯಲಿದೆ. 178 ಮಂದಿ ಕನ್ನಡಿಗರನ್ನು ಹೊತ್ತ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಮಸ್ಕತ್‌ನಿಂದ ವಯಾ ಬೆಂಗಳೂರು ಮೂಲಕ ಮಂಗಳೂರಿಗೆ ಆಗಮಿಸಲಿದೆ. ಬೆಂಗಳೂರಿನ 115 ಹಾಗೂ ಮಂಗಳೂರಿನ 63 ಮಂದಿ ಪ್ರಯಾಣಿಕರು ಇದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.