ಬೆಂಗಳೂರು [ಆ.16] :  ಪಾನಮತ್ತರಾಗಿ ಅಡ್ಡಾದಿಡ್ಡಿ ಬೈಕ್‌ ಚಲಾಯಿಸುತ್ತಿದ್ದಾಗ ಅಡ್ಡಗಟ್ಟಲು ಮುಂದಾದ ಗಸ್ತು ಸಿಬ್ಬಂದಿಗೆ ಗುದ್ದಿತಪ್ಪಿಸಿಕೊಳ್ಳಲು ಯತ್ನಿಸಿದ ಸ್ವಿಗಿ ಕಂಪನಿಯ ಉದ್ಯೋಗಿಯಾದ ಯುವತಿಯೋರ್ವಳು ಸೇರಿದಂತೆ ಐವರನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ತಿಪ್ಪಸಂದ್ರದ ನಿವಾಸಿಯಾದ ಯುವತಿ ಹೊಲಿಹ ಫ್ಯಾಂಗ್‌ ಸೆಫೋರಹ, ಮುನಾವರ್‌, ಅರ್ಜುನ್‌ ಹಾಗೂ ಸೌರವ್‌ ದಾಸ್‌ ಬಂಧಿತರು. ಎರಡು ದಿನಗಳ ಹಿಂದೆ ಐಟಿಐ ಲೇಔಟ್‌ನಲ್ಲಿ ಬಳಿ ಆರೋಪಿಗಳು ಮದ್ಯ ಸೇವಿಸಿ ಅತಿವೇಗವಾಗಿ ಬೈಕ್‌ ಚಲಾಯಿಸಿಕೊಂಡು ಹೋಗುತ್ತಿದ್ದರು. ಆಗ ಅವರನ್ನು ಅಡ್ಡಗಟ್ಟಿತಪಾಸಣೆಗೆ ಪೊಲೀಸರು ಮುಂದಾಗ ಈ ಘಟನೆ ನಡೆದಿದೆ.

ಫ್ಯಾಂಗ್‌ ಸೆಫೋರಹ ಮೂಲತಃ ಕೇರಳದರಾಗಿದ್ದು, ತಿಪ್ಪಸಂದ್ರದಲ್ಲಿ ನೆಲೆಸಿದ್ದಾರೆ. ಈ ಐವರು ಸ್ವಿಗ್ಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಆ.13ರಂದು ರಾತ್ರಿ ಪಾರ್ಟಿ ಮಾಡಿದ ಈ ಗೆಳೆಯರು, ನಸುಕಿನ 3.30ರಲ್ಲಿ ಐಟಿಐ ಲೇಔಟ್‌ನಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್‌ ಓಡಿಸಿಕೊಂಡು ಹೋಗುತ್ತಿದ್ದರು. ಆಗ ರಾತ್ರಿ ಗಸ್ತಿನಲ್ಲಿದ್ದ ಬಂಡೇಪಾಳ್ಯ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಶಿವಲಿಂಗ ಹಾಗೂ ಕಾನ್‌ಸ್ಟೇಬಲ್‌ ಪ್ರದೀಪ್‌ ಅವರು, ಅತಿವೇಗವಾಗಿ ಬೈಕ್‌ ಓಡಿಸುತ್ತಿದ್ದ ಯುವತಿಯನ್ನು ನೋಡಿ ಅಡ್ಡಗಟ್ಟಲು ಮುಂದಾಗಿದ್ದಾರೆ. 

ಈ ಹಂತದಲ್ಲಿ ಪೊಲೀಸರಿಗೆ ಬೈಕ್‌ನಿಂದ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾಳೆ. ಕೂಡಲೇ ಬೆನ್ನಟ್ಟಿದ ಗಸ್ತು ಸಿಬ್ಬಂದಿ, ಮಂಗಮ್ಮನಪಾಳ್ಯದ ರಸ್ತೆಯಲ್ಲಿ ಬೈಕ್‌ ತಡೆದಿದ್ದಾರೆ. ಬಳಿಕ ಮಹಿಳಾ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿ ತಪಾಸಣೆ ನಡೆಸಿದ್ದಾರೆ. ಮದ್ಯಸೇವಿಸಿರುವುದು ಪತ್ತೆಯಾಗಿದೆ. ಆಗ ಸ್ನೇಹಿತೆಯ ನೆರವಿಗೆ ಬಂದ ಇನ್ನುಳಿದ ಆರೋಪಿಗಳು, ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ ಅವರನ್ನು ಬಂಧಿಸಲಾಗಿದೆ.