Bengaluru: ಚಲಿಸುತ್ತಿದ್ದ ಕಾರಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ: ವ್ಯಕ್ತಿ ಸಜೀವ ದಹನ!

*ನೈಸ್‌ ರಸ್ತೆಯ ಚನ್ನಸಂದ್ರ ಸೇತುವೆ ಬಳಿ ಶಾರ್ಟ್‌ ಸರ್ಕಿಟ್‌ನಿಂದ ಕಾರಿನ ಎಸಿ ಸಿಸ್ಟಂನಲ್ಲಿ ಬೆಂಕಿ
*ಬಾಗಿಲು ತೆರಯಲಾಗದೇ ಕಾರಲ್ಲೇ ಸಿಲುಕಿಕೊಂಡ ವ್ಯಕ್ತಿ
*ಎಸಿ ಸಿಸ್ಟಂ ಸ್ಫೋಟಿಸಿ ಕಾರಿನಲ್ಲಿದ್ದ ಕಾಲ್‌ಸೆಂಟರ್‌ ಉದ್ಯೋಗಿಗೆ ವ್ಯಾಪಿಸಿದ ಬೆಂಕಿ
*ನೈಸ್‌ ಸಿಬ್ಬಂದಿ ಸ್ಥಳಕ್ಕಾಗಮಿಸಿ ನಂದಿಸುವಷ್ಟರಲ್ಲಿ ಬೆಂಕಿ ಕೆನ್ನಾಲಿಗೆಗೆ ಬಲಿ

Driver charred to death as car catches fire due to short circuit in nice road Bengaluru mnj

ಬೆಂಗಳೂರು (ಮಾ. 14): ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಕಾಲ್‌ಸೆಂಟರ್‌ ಉದ್ಯೋಗಿಯೊಬ್ಬರು ಸಜೀವ ದಹನವಾಗಿರುವ ಘಟನೆ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ನೈಸ್‌ ರಸ್ತೆಯಲ್ಲಿ ನಡೆದಿದೆ. ಉತ್ತರಹಳ್ಳಿ ನಿವಾಸಿ ದರ್ಶನ್‌(40) ಮೃತ ದುರ್ದೈವಿ. ನೈಸ್‌ ರಸ್ತೆಯ ಚನ್ನಸಂದ್ರ ಸೇತುವೆ ಬಳಿ ಶನಿವಾರ ರಾತ್ರಿ 10.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಕೋಲಾರ ಮೂಲದ ದರ್ಶನ್‌ ನಗರದ ಕಾಲ್‌ಸೆಂಟರ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಶನಿವಾರ ರಾತ್ರಿ ತುಮಕೂರು ರಸ್ತೆಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ತಮ್ಮ ಸ್ಯಾಂಟ್ರೋ ಕಾರಿನಲ್ಲಿ ಒಬ್ಬರೇ ಮನೆಗೆ ವಾಪಾಸು ಬರುವಾಗ ಮಾರ್ಗ ಮಧ್ಯೆ ನೈಸ್‌ ರಸ್ತೆಯ ಚೆನ್ನಸಂದ್ರ ಸೇತುವೆ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿಶಾಸಕರ ಕಾರು ಡಿಕ್ಕಿ, 22 ಜನಕ್ಕೆ ಗಾಯ, ಐವರ ಸ್ಥಿತಿ ಗಂಭೀರ!

ಎಸಿ ಸಿಸ್ಟಂನಲ್ಲಿ ಬೆಂಕಿ: ದರ್ಶನ್‌ ಕಾರು ಚಲಾಯಿಸಿಕೊಂಡು ಬರುವಾಗ ಕಾರಿನ ಎಸಿ ಸಿಸ್ಟ್‌ಂನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ದರ್ಶನ್‌ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಕಾರಿನ ಬಾಗಿಲು ತೆರೆಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಅದೇ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು, ದರ್ಶನ್‌ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಕಾರು ನಿಲ್ಲಿಸಿದ್ದಾರೆ. 

ಈ ವೇಳೆ ದರ್ಶನ್‌ ಕಾರಿನ ಬಾಗಿಲು ತೆರೆಯಲು ಸಾಧ್ಯವಾಗದೇ ಹೆಲ್ಪ್‌ ಹೆಲ್ಪ್‌ ಎಂದು ಕೂಗಿದ್ದಾರೆ. ಈ ಸಮಯದಲ್ಲಿ ಮತ್ತೊಂದು ಕಾರಿನ ಚಾಲಕ, ದರ್ಶನ್‌ ಕಾರಿನ ಬಾಗಿಲು ತೆರೆಯಲು ಮುಂದೆ ಬಂದಿದ್ದಾರೆ. ಅಷ್ಟರಲ್ಲಿ ಕಾರಿನ ಎಸಿ ಸಿಸ್ಟಂ ಸ್ಫೋಟಿಸಿದ ಪರಿಣಾಮ ಬೆಂಕಿ ದರ್ಶನ್‌ಗೂ ಹೊತ್ತಿಕೊಂಡಿದೆ. ಅಲ್ಲದೆ, ಮುಂಭಾಗದ ಸೀಟುಗಳಿಗೂ ಬೆಂಕಿ ವ್ಯಾಪಿಸಿದೆ.

ದರ್ಶರ್ನ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸಹಾಯಕ್ಕೆ ಧಾವಿಸಿದ್ದ ವ್ಯಕ್ತಿ ತಕ್ಷಣ ನೈಸ್‌ ರಸ್ತೆ ಟೋಲ್‌ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ನೈಸ್‌ ರಸ್ತೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಈ ವೇಳೆಗೆ ದರ್ಶನ್‌ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸಜೀವ ದಹನವಾಗಿದ್ದರು.

ವಿಷಯ ತಿಳಿದ ರಾಜರಾಜೇಶ್ವರಿನಗರ ಠಾಣೆ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ದೊರೆತ ಕೆಲ ದಾಖಲೆಗಳಿಂದ ದರ್ಶನ್‌ ಬಗ್ಗೆ ಮಾಹಿತಿ ಸಿಕ್ಕಿತು. ಬಳಿಕ ಆತನ ಸ್ನೇಹಿತರನ್ನು ಕರೆ ಮಾಡಿ ವಿಷಯ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದತ್ತಾತ್ರೇಯನ ದರ್ಶನ ಪಡೆದು ವಾಪಸ್​​ ಆಗ್ತಿದ್ದವರು, ನಿಶ್ಚಿತಾರ್ಥಕ್ಕೆ ಹೊರಟಿದ್ದವರು, ಒಟ್ಟು 9 ಜನ ಮಸಣಕ್ಕೆ

ಘಟನೆ ಹಿನ್ನೆಲೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಕೆಲ ಮಾದರಿಗಳನ್ನು ಸಂಗ್ರಹಿಸಿದೆ. ಕಾರಿನ ಎಸಿ ಸಿಸ್ಟ್‌ಂನಲ್ಲಿ ಶಾರ್ಟ್‌ ಸರ್ಕಿಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೆಚ್ಚಿನ ತನಿಖೆಯಿಂದ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೀಣ್ಯ ಫ್ಲೈಓವರ್‌ ಏರಲು ಹೋಗಿ ಎಎಸ್‌ಐಗೆ ಗುದ್ದಿದ ಪಾನಮತ್ತ ಬೈಕ್‌ ಚಾಲಕ:  ಪಾನಮತ್ತ ದ್ವಿಚಕ್ರ ವಾಹನ ಚಾಲಕನೊಬ್ಬ ಪೀಣ್ಯ ಮೇಲ್ಸೇತುವೆ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಗೆ(ಎಎಸ್‌ಐ)ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಪೀಣ್ಯ ನಿವಾಸಿ ಅರ್ಜುನ್‌(32) ಪೊಲೀಸ್‌ಗೆ ಡಿಕ್ಕಿ ಹೊಡೆದ ಆರೋಪಿ. ಯಶವಂತಪುರ ಸಂಚಾರ ಠಾಣೆಯ ಎಎಸ್‌ಐ ರಾಜಶೇಖರಯ್ಯ ಗಾಯಗೊಂಡವರು. ಪೀಣ್ಯ ಮೇಲ್ಸೇತುವೆಯಲ್ಲಿ ರಾತ್ರಿ 12 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಎಲ್ಲ ಮಾದರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. 

ಹೀಗಾಗಿ ಎಎಸ್‌ಐ ರಾಜಶೇಖರಯ್ಯ ಅವರು ಪೀಣ್ಯ ಮೇಲ್ಸೇತುವೆ ಪ್ರವೇಶದ ಬಳಿ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ ವೇಗವಾಗಿ ದ್ವಿಚಕ್ರವಾಹನ ಚಲಾಯಿಸಿಕೊಂಡು ಬಂದಿರುವ ಅರ್ಜುನ್‌ ಫ್ಲೈಓವರ್‌ನಲ್ಲಿ ಹೋಗಲು ಮುಂದಾಗಿದ್ದಾನೆ. ಈ ವೇಳೆ ಎಎಸ್‌ಐ ರಾಜಶೇಖರಯ್ಯ ಆತನನ್ನು ತಡೆಯಲು ಮುಂದಾಗಿದ್ದಾರೆ. ಆದರೂ ಆರೋಪಿ ದ್ವಿಚಕ್ರವಾಹನ ನಿಲ್ಲಿಸದೆ ಎಎಸ್‌ಐ ರಾಜಶೇಖರಯ್ಯ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ರಾಜಶೇಖರಯ್ಯ ಅವರ ಬಲಗೈಗೆ ಗಾಯವಾಗಿದೆ.

ಬಳಿಕ ಸಮೀಪದಲ್ಲೇ ಕರ್ತವ್ಯ ನಿರತ ಪೊಲೀಸರು ರಾಜಶೇಖರಯ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕೆ ಮುಂದಾದ ಅರ್ಜುನ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಆರೋಪಿ ಮದ್ಯಪಾನ ಮಾಡಿ ದ್ವಿಚಕ್ರವಾಹನ ಚಲಾಯಿಸುತ್ತಿರುವುದು ಕಂಡು ಬಂದಿದೆ. ಈ ಸಂಬಂಧ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios