ಮಂಗ್ಳೂರಲ್ಲಿ ನೀರಿಗೆ ಹಾಹಾಕಾರ: ಬಳಕೆಗೆ ಮಿತಿ ಹೇರಿಕೆ, ಕೆಲ ಕಾಲೇಜುಗಳೇ ‘ಬಂದ್‌’!

ಕಳೆದ ಎರಡು ತಿಂಗಳಿನಿಂದ ಮಂಗಳೂರು ಉತ್ತರ ಹಾಗೂ ಮಂಗಳೂರು ನಗರ ಭಾಗಕ್ಕೆ ಪ್ರತಿ ದಿನದ ಬದಲು ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಜಿಲ್ಲಾ ವ್ಯಾಪ್ತಿಯ ಇತರ ಪಟ್ಟಣ ಪ್ರದೇಶಗಳಲ್ಲಿ ಈ ಹಿಂದೆ ನಿತ್ಯ ನೀರು ಸರಬರಾಜಾಗುತ್ತಿತ್ತು. ಈಗ 2-3 ದಿನಕ್ಕೊಮ್ಮೆ ನೀರನ್ನು ಪೂರೈಸುವ ಮಿತಿ ಹೇರಿಕೆಯಾಗಿದೆ. 

Drinking Water Problem in Mangaluru grg

ಮಂಗಳೂರು(08):  ಜೂನ್‌ ಮೊದಲ ವಾರ ಕಳೆದರೂ ಕರಾವಳಿಗೆ ಇನ್ನೂ ಮುಂಗಾರು ಮಳೆಯ ಪ್ರವೇಶವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಅಗತ್ಯವಿರುವಷ್ಟುನೀರು ಸಿಗುತ್ತಿಲ್ಲದ ಕಾರಣ ಬುಧವಾರದಿಂದ ಕೆಲವು ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿಯನ್ನು ಬಂದ್‌ ಮಾಡಲಾಗಿದ್ದು, ಆನ್‌ಲೈನ್‌ ಮೂಲಕ ತರಗತಿ ತೆಗೆದುಕೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ಅರ್ಧ ದಿನ ತರಗತಿ ನಡೆಸಲಾಗುತ್ತಿದೆ. ಶೈಕ್ಷಣಿಕ ಸಂಸ್ಥೆಗಳು ಮಾತ್ರವಲ್ಲ ಮನೆ, ಆಸ್ಪತ್ರೆ, ಕಚೇರಿಗಳಿಗೂ ನೀರಿನ ಅಭಾವ ತಟ್ಟಿದೆ.

ಕಳೆದ ಎರಡು ತಿಂಗಳಿನಿಂದ ಮಂಗಳೂರು ಉತ್ತರ ಹಾಗೂ ಮಂಗಳೂರು ನಗರ ಭಾಗಕ್ಕೆ ಪ್ರತಿ ದಿನದ ಬದಲು ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಜಿಲ್ಲಾ ವ್ಯಾಪ್ತಿಯ ಇತರ ಪಟ್ಟಣ ಪ್ರದೇಶಗಳಲ್ಲಿ ಈ ಹಿಂದೆ ನಿತ್ಯ ನೀರು ಸರಬರಾಜಾಗುತ್ತಿತ್ತು. ಈಗ 2-3 ದಿನಕ್ಕೊಮ್ಮೆ ನೀರನ್ನು ಪೂರೈಸುವ ಮಿತಿ ಹೇರಿಕೆಯಾಗಿದೆ. ಕೆಲವು ಕಡೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಯಾಗುತ್ತಿದೆ. ಮಂಗಳೂರು ನಗರಕ್ಕೆ ತುಂಬೆ ಅಣೆಕಟ್ಟೆಯಿಂದ ನೀರು ಪೂರೈಕೆಯಾಗುತ್ತಿದೆ. ಆದರೆ ಮಳೆಯಾಗದ ಕಾರಣ ಅಲ್ಲಿ 4.50 ಮೀಟರ್‌ ಮಾತ್ರ ನೀರಿದ್ದು, ಅದು 15 ದಿನಗಳಿಗಷ್ಟೆಸಾಕಾಗಲಿದೆ.

WILDLIFE: ಉಳೆಪಾಡಿ ಮಿತ್ತಬೆಟ್ಟು ಬಳಿ ಉರುಳಿಗೆ ಸಿಲುಕಿ ಚಿರತೆ ಸಾವು!

ಮಂಗಳೂರಿನ ಹಂಪನಕಟ್ಟೆವಿ.ವಿ.ಕಾಲೇಜಿನಲ್ಲಿ ಸುಮಾರು 1,800 ಪದವಿ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಶೌಚಾಲಯಕ್ಕೂ ನೀರಿನ ಅಭಾವ ತಟ್ಟಿದೆ. ಇನ್ನು ಕೆಲವು ಸಲ ಹಣ ನೀಡಿದರೂ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ, ಬುಧವಾರದಿಂದ ಇಲ್ಲಿ ಆಫ್‌ಲೈನ್‌ ತರಗತಿ ನಿಲ್ಲಿಸಲಾಗಿದ್ದು, ಆನ್‌ಲೈನ್‌ ತರಗತಿ ಆರಂಭಿಸಲಾಗಿದೆ.

ಮಂಗಳೂರಿನ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆಯಲ್ಲಿಯೂ ನೀರಿನ ಕೊರತೆ ಎದುರಾಗಿದೆ. ಇಲ್ಲಿರುವ ಬಾವಿ, ಕೊಳವೆಬಾವಿಗಳಲ್ಲಿ ನೀರು ತಳ ಸೇರಿದ್ದು, ಪಾಲಿಕೆ ಮತ್ತು ಖಾಸಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ರೋಗಿಗಳಾಗಿದ್ದಾರೆ.

ನಗರದ ಕುಂಟಿಕಾನದಲ್ಲಿರುವ ಖಾಸಗಿ ಮೆಡಿಕಲ್‌ ಕಾಲೇಜಿನ ಮೂರು ಹಾಗೂ ನಾಲ್ಕನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೂ ಆಫ್‌ಲೈನ್‌ ತರಗತಿ ರದ್ದು ಮಾಡಲಾಗಿದೆ. ಕಾಲೇಜಿನ ಹಾಸ್ಟೆಲ್‌ ನಡೆಸಲಾಗುತ್ತಿಲ್ಲ. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲೂ ನೀರಿಗೆ ತತ್ವಾರ ಉಂಟಾಗಿದೆ.

ಇದೇ ವೇಳೆ, ನಗರ ಸುತ್ತಮುತ್ತಲಿನ ಬಾವಿಗಳಲ್ಲಿನ ನೀರು ಪಾತಾಳ ಸೇರಿದ್ದು, ಜನ ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ. ದ.ಕ.ಜಿಲ್ಲೆಯಲ್ಲಿ ಸುಮಾರು 111 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಇವುಗಳಿಗೆ ಟ್ಯಾಂಕರ್‌ ಸೇರಿದಂತೆ ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸಲು ಆಯಾ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ.

ಮಂಗ್ಳೂರಲ್ಲಿ ಕೋಮುವಾದ ನಿಗ್ರಹ ದಳ: ಪರಮೇಶ್ವರ್‌

ಕಟೀಲು ದೇಗುಲದಲ್ಲಿ ನೀರಿಗೆ ತೀವ್ರ ಸಮಸ್ಯೆ: ಅನ್ನದಾನಕ್ಕೆ ತಟ್ಟೆ ಇಲ್ಲ, 3 ದಶಕಗಳಲ್ಲಿ ಇದೇ ಮೊದಲು

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 1992ರ ಬಳಿಕ ಇದೇ ಮೊದಲ ಬಾರಿಗೆ ಜಲಕ್ಷಾಮ ಕಂಡು ಬಂದಿದೆ. ಇಲ್ಲಿಗೆ ಪ್ರತಿದಿನ ಸುಮಾರು 15,000ಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ. ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ಗಂಜಿ ಊಟ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತಿದೆ. ನೀರಿನ ಸಮಸ್ಯೆಯಿಂದಾಗಿ ತಟ್ಟೆಯಲ್ಲಿ ಅನ್ನದಾನದ ಬದಲಿಗೆ ಯೂಸ್‌ ಆ್ಯಂಡ್‌ ತ್ರೋ ಹಾಳೆ ತಟ್ಟೆಯನ್ನು ಉಪಯೋಗಿಸಲಾಗುತ್ತಿದೆ. ದೇವಸ್ಥಾನಕ್ಕೆ ಸಮೀಪದ ನಂದಿನಿ ನದಿಯಲ್ಲಿ ನೀರು ಬತ್ತಿ ಹೋಗಿದೆ. ದೇವಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ಅನ್ನದಾನ ನೀಡಲು ಸಾಧ್ಯವಾಗದ ಕಾರಣ ಮಧ್ಯಾಹ್ನದ ಬಳಿಕ ರಜೆ ನೀಡಲಾಗುತ್ತಿದೆ.

15 ದಿನ ಕಳೆದರೆ ಪರಿಸ್ಥಿತಿ ವಿಕೋಪಕ್ಕೆ

- ಮಂಗಳೂರಿಗೆ ತುಂಬೆ ಡ್ಯಾಂನಿಂದ ನೀರು ಪೂರೈಕೆ. ಮಳೆಯಾಗದ ಕಾರಣ ನೀರು ಖಾಲಿ
- ಇನ್ನು 15 ದಿನಕ್ಕಾಗುವಷ್ಟು ಮಾತ್ರ ಡ್ಯಾಂನಲ್ಲಿ ನೀರು. ಹೀಗಾಗಿ ನೀರು ಪೂರೈಕೆಯಲ್ಲಿ ಕಡಿತ
- ಮಂಗಳೂರಿನ ಬಾವಿ, ಕೊಳವೆಬಾವಿಗಳೂ ಬತ್ತಿ ಹೋಗಿರುವುದರಿಂದ ನೀರು ಸಮಸ್ಯೆ ಹೆಚ್ಚಳ
- ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಇರುವಷ್ಟುನೀರು ಸರಬರಾಜು ಆಗುತ್ತಿಲ್ಲ
- ಮಕ್ಕಳ ಶೌಚಾಲಯಕ್ಕೂ ನೀರಿನ ಕೊರತೆ ಕಾರಣ ಶಿಕ್ಷಣ ಸಂಸ್ಥೆಗಳಲ್ಲಿ ಆಫ್‌ಲೈನ್‌ ಕ್ಲಾಸ್‌ ಸ್ಥಗಿತ
- 1000 ಮಂದಿ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಟ್ಯಾಂಕರ್‌ನಲ್ಲಿ ನೀರು

Latest Videos
Follow Us:
Download App:
  • android
  • ios