ಬಾಗಲಕೋಟೆಯ ನವನಗರದಲ್ಲಿ ಮುಖ್ಯ ಚರಂಡಿ ಸಮಸ್ಯೆ: ಸಾರ್ವಜನಿಕರಿಂದ ಹಿಡಿಶಾಪ
ಆಲಮಟ್ಟಿ ಹಿನ್ನೀರು ವ್ಯಾಪ್ತಿಯಲ್ಲಿ ಬರುವ ಮುಳುಗಡೆ ನಗರಿ ಎಂದೇ ಖ್ಯಾತಿಯನ್ನ ಹೊಂದಿರೋ ಬಾಗಲಕೋಟೆಯಲ್ಲಿ ಇದೀಗ ಮುಖ್ಯ ಚರಂಡಿ ಸಮಸ್ಯೆ ಎದುರಾಗಿದೆ
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜೂ.04): ಆಲಮಟ್ಟಿ ಹಿನ್ನೀರು ವ್ಯಾಪ್ತಿಯಲ್ಲಿ ಬರುವ ಮುಳುಗಡೆ ನಗರಿ ಎಂದೇ ಖ್ಯಾತಿಯನ್ನ ಹೊಂದಿರೋ ಬಾಗಲಕೋಟೆಯಲ್ಲಿ ಇದೀಗ ಮುಖ್ಯ ಚರಂಡಿ ಸಮಸ್ಯೆ ಎದುರಾಗಿದೆ. ಯಾಕಂದ್ರೆ ನವನಗರದಿಂದ ಬರುವ ವೆಟ್ವೆಲ್ ಕೊಳೆ ನೀರನ್ನ ಶುದ್ದಿಕರಣಗೊಳಿಸದೇ ಏಕಾಏಕಿ ಇದೀಗ ಮುಖ್ಯಚರಂಡಿಗೆ ಹರಿಬಿಡುತ್ತಿರೋದ್ರಿಂದ ಕೊಳೆಯು ಕುಡಿಯುವ ನೀರಿನ ಸಂಗ್ರಹಗಾರಕ್ಕೆ ಸೇರುವ ಆತಂಕ ಶುರುವಾಗಿದೆ. ಸಾಲದ್ದಕ್ಕೆ ಜನ್ರು ರಸ್ತೆ ಪಕ್ಕ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡೋ ಪರಿಸ್ಥಿತಿ ಎದುರಾಗಿದೆ.
ಹೌದು! ಬಾಗಲಕೋಟೆಯ ನವನಗರದ ಮುಖ್ಯ ಸಾರ್ವಜನಿಕ ಚರಂಡಿಗೆ ಅಂದರೆ ರಾಜಕಾಲುವೆಗೆ ವೆಟ್ ವೆಲ್‌ನ್ನು ಬಿಡುವ ಮೂಲಕ ಇಡೀ ನವನಗರದ ನೈರ್ಮಲ್ಯವನ್ನು ಕಲುಷಿತಗೊಳಿಸುವ ಜೊತೆಗೆ ಹಳೆಯ ಬಾಗಲಕೋಟೆ ಜನತೆಗೆ ಕುಡಿಯಲು ಕುಡಿಯುವ ನೀರು ಒದಗಿಸುವ ಕ್ವಾರಿ ನೀರಿನ ಸಂಗ್ರಹಕ್ಕೆ ವೆಟ್ ವೆಲ್ ಕೊಳೆ ಸೇರುವ ಅಪಾಯ ಎದುರಾಗಿದೆ. ಇದರಿಂದ ನಗರದ ಜನತೆಯ ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಶ್ರೀಶೈಲದಲ್ಲಿ ಮತ್ತೆ ಕನ್ನಡಿಗನ ಮೇಲೆ ಹಲ್ಲೆ..!
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಂಬಂಧಿಸಿದ ಸಿಬ್ಬಂದಿ ಬೇಜವಾಬ್ದಾರಿ ಪರಿಣಾಮದಿಂದ ನವನಗರದ ಯೂನಿಟ್ ಒಂದರ ವೆಟ್ವೆಲ್ ಕೊಳೆಯನ್ನು ಮುಖ್ಯ ಸಾರ್ವಜನಿಕ ಚರಂಡಿಗೆ ಬಿಡುತ್ತಿರುವ ಪ್ರಾಧಿಕಾರದ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಜನತೆಯ ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ಪ್ರಾಧಿಕಾರದ ವರ್ತನೆಗೆ ಸಹಜವಾಗಿ ಬೇಸರ ಮೂಡಿಸಿದೆ. ಈ ಸಂಬಂಧ ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದೆಂದು ಸ್ಥಳೀಯರು ಎಚ್ಚರಿಸಿದ್ದಾರೆ.
ರಸ್ತೆಯಲ್ಲಿ ಮೂಗುಮುಚ್ಚಿ ಓಡಾಡೋ ಪರಿಸ್ಥಿತಿ, ಹಿಡಿಶಾಪ ಹಾಕುವ ಜನ: ನವನಗರದ ಯಮನೂರಪ್ಪನ ದರ್ಗಾಕ್ಕೆ ಹೊಂದಿಕೊಂಡಿರುವ ವಿದ್ಯಾಗಿರಿಯ ಸಂಪರ್ಕದ ಮಾರ್ಗದಲ್ಲಿ ಪ್ರಾಧಿಕಾರ ನಿರ್ಮಿಸಿರುವ ವೆಟ್ ವೆಲ್ ನಿರ್ವಹಣಾ ಘಟಕದಿಂದ ಮುಖ್ಯ ಚರಂಡಿಗೆ ಯೂನಿಟ್ 1ರ ಎಲ್ಲ ತ್ಯಾಜ್ಯವನ್ನು ಬಿಟ್ಟಿರುವುದರಿಂದ ನವನಗರ ಹಾಗೂ ವಿದ್ಯಾಗಿರಿಯ ಬಹುತೇಕ ಪ್ರದೇಶಗಳಲ್ಲಿ ದುರ್ವಾಸನೆ ಹರಡಿದೆ. ಹೀಗಾಗಿ ಸಾರ್ವಜನಿಕರು ಹೊರಗೆ ಓಡಾಡೋದೇ ಕಷ್ಟವಾಗಿದೆ, ಪ್ರಾಧಿಕಾರದ ನಿರ್ಲಕ್ಷ ಪರಿಣಾಮ ನಗರ ಹಾಗೂ ನಗರದ ಜನತೆಗೆ ಕಲುಷಿತ ಪರಿಸರದಲ್ಲಿ ಬದುಕಬೇಕಾದ ಅನಿವಾರ್ಯತೆ ಒಂದೆಡೆಯಾದರೆ ಮುಖ್ಯ ಚರಂಡಿಯ ಮಾರ್ಗದುದ್ದಕ್ಕೂ ಸಂಚಾರ ಕಷ್ಟಕರವಾಗಿದ್ದು ಅಸಹನೀಯವಾಗಿದೆ.
ಕೈಕೊಟ್ಟ ಪಂಪ್ಗಳು, ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ವೆಟ್ವೆಲ್ ಸಮಸ್ಯೆಗೆ ಮುಖ್ಯವಾಗಿ ಕಾರಣ ಏನು ಅನ್ನೋದನ್ನ ನೋಡಿದಾಗ ಕಂಡು ಬಂದಿದ್ದು, ನಿರ್ವಹಣಾ ಘಟಕದಲ್ಲಿದ್ದ 4 ಪಂಪ್ಗಳು ದುರಸ್ಥಿಯಲ್ಲಿದ್ದದ್ದು. ಹೌದು! ಪ್ರಮುಖವಾಗಿ ಯುನಿಟ್ 1ರಲ್ಲಿನ ವೆಟ್ವೆಲ್ ಕೊಳೆಯ ನಿರ್ವಹಣೆಗೆ ಘಟಕದಲ್ಲಿ ನಾಲ್ಕು ಅತ್ಯಾಧುನಿಕ ಪಂಪುಗಳ ಅವಶ್ಯವಿದ್ದು, ಆದರೆ ನಾಲ್ಕು ಪಂಪುಗಳೂ ಏಕಕಾಲಕ್ಕೆ ದುರಸ್ತಿಗೆ ಬಂದಿದ್ದರಿಂದ ನಿರ್ವಹಣೆ ಕಷ್ಟವಾಗಿದೆ ಎನ್ನಲಾಗುತ್ತಿದೆ.
ಬಾಗಲಕೋಟೆ: ಭೀಕರ ರಸ್ತೆ ಸ್ಥಳದಲ್ಲಿ ನಾಲ್ವರ ದುರ್ಮರಣ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಆದರೆ ಈ ಬಗ್ಗೆ ಮೊದಲೇ ತಿಳಿದಿದ್ದರೂ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರೋದು ಸಾರ್ವಜನಿಕ ವಲಯದಲ್ಲಿ ಇನ್ನಷ್ಟು ಆಕ್ರೋಶ ಮೂಡಿಸುವಂತೆ ಮಾಡಿದ್ದು, ಹೀಗಾಗಿ ಕೂಡಲೇ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಈ ಸಂಬಂಧ ಕ್ರಮ ವಹಿಸಬೇಕು ಇಲ್ಲವಾದಲ್ಲಿ ಜನರು ಬೀದಿಗಿಳಿಯಬೇಕಾಗುತ್ತದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಮುಂಜಾಗ್ರತೆ ವಹಿಸಿ ಕೆಲಸ ಮಾಡಬೇಕಿದ್ದ ಪ್ರಾಧಿಕಾರದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಇದಕ್ಕೆ ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ಸಮರ್ಪಕವಾಗಿ ವೆಟ್ವೆಲ್ ನಿರ್ವಹಣೆ ಮಾಡಿ ಜನರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನ ನಿಯಂತ್ರಿಸಿ ನಿರ್ಮಲ ಪರಿಸರಕ್ಕೆ ಕಾರಣವಾಗ್ತಾರಾ ಅಂತ ಕಾದು ನೋಡಬೇಕಿದೆ.