ಹುಬ್ಬಳ್ಳಿ(ಏ.18): ‘ಕೊರೋನಾ ಸೋಂಕು ತಗುಲಿದವರೆಲ್ಲ ಸಾಯಲ್ಲ, ಜಾಗೃತೆ ಇದ್ದರೆ ಸಾಕು. ಹತ್ತಾರು ವೈರಸ್‌ಗಳಂತೆ ಇದೂ ಒಂದು ಅಷ್ಟೇ. ಸಾಮಾಜಿಕ ಅಂತರ, ಸ್ವಚ್ಛತೆ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡರೆ ಸಾಕು. ಗಾಬರಿಪಡುವ ಪ್ರಮೆಯ ಬೇಡ...’

ಜಗತ್ತಿನ ಅತಿ ದೊಡ್ಡ ಮತ್ತು ಸುಸಜ್ಜಿತ ಆರೋಗ್ಯ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಲಂಡನ್‌ನ ‘ನ್ಯಾಷನಲ್‌ ಹಾಸ್ಪಿಟಲ್‌ ಸರ್ವೀಸ್‌ನಲ್ಲಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹುಬ್ಬಳ್ಳಿಯವರಾದ ಕನ್ನಡಿಗ ಡಾ.ವಿಶ್ವನಾಥ ವಿದ್ವಾನ್‌ ಅವರು ‘ಕನ್ನಡಪ್ರಭ’ ಜತೆ ಹೀಗೆ ತಮ್ಮ ಅನುಭವ ಹಂಚಿಕೊಂಡರು.

ಹುಬ್ಬಳ್ಳಿ ಸೋಂಕಿತನ ಬೆಚ್ಚಿಬೀಳಿಸುವ ಟ್ರಾವೆಲ್ ಹಿಸ್ಟರಿ, ಯಲ್ಲಾಪುರದಲ್ಲಿಯೂ ಆತಂಕ

ಲಂಡನ್‌ನಲ್ಲಿ ಕಳೆದ ಡಿಸೆಂಬರ್‌ನಲ್ಲೇ ಕೊರೋನಾ ವೈರಸ್‌ ಕಾಣಿಸಿಕೊಂಡಿದೆ. ನಾಲ್ಕಾರು ಕೋವಿಡ್‌-19 ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಈ ಆಸ್ಪತ್ರೆ ಲಂಡನ್‌ ರಕ್ಷಣೆಗೆ ನಿಂತಿದ್ದು, ತನ್ನ ಇಡೀ ಆಸ್ಪತ್ರೆಯನ್ನು ಕೋವಿಡ್‌-19 ಆಸ್ಪತ್ರೆಯನ್ನಾಗಿ ಪರಿವರ್ತಿಸಿದೆ. ಇಂಥ ಬೇರೆಡೆಯ ನಾಲ್ಕಾರು ಆಸ್ಪತ್ರೆಗಳನ್ನೂ ಪರಿವರ್ತಿಸಿದೆ. ಅದು ಸಾಲದೆಂಬಂತೆ ಅಲ್ಲಿನ ಇಂಡೋರ್‌ ಸ್ಟೇಡಿಯಂ ಅನ್ನು 4000 ಬೆಡ್‌ಗಳ ಕೋವಿಡ್‌-19 ಆಸ್ಪತ್ರೆಯಾಗಿ ರೂಪಾಂತರಿಸುವ ಮೂಲಕ ಎಂಥದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧ ಎನ್ನುವ ಸಂದೇಶ ರವಾನಿದ್ದರಿಂದ ಲಂಡನ್‌ ಜನತೆ ಕೊರೋನಾ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಡಾ.ವಿಶ್ವನಾಥ.

ಗುಣಮಟ್ಟದ ಆರೋಗ್ಯ ಸೇವೆಯ ಜತೆಗೆ ಕಳೆದ ನಾಲ್ಕು ವಾರಗಳಿಂದ ಇಲ್ಲಿನ ಸರ್ಕಾರ ಲಾಕ್‌ಡೌನ್‌ ಘೋಷಿಸಿದೆ. ಮೊದಲಿನಿಂದಲೂ ಶಿಸ್ತು, ಸ್ವಚ್ಛತೆ, ಸಂಯಮಕ್ಕೆ ಬೆಲೆಕೊಡುವ ಇಲ್ಲಿನ ಜನತೆ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಕಾಪಾಡುತ್ತಿದ್ದಾರೆ. ಎಲ್ಲೂ ಜನಜಂಗುಳಿ ಆಗುವುದಿಲ್ಲ. ಹಾಗಂತ ಇಡೀ ಲಂಡನ್‌ ಬಂದ್‌ ಆಗಿಲ್ಲ. ನಾಗರೀಕರು ತಮ್ಮ ಕಾರುಗಳಲ್ಲಿ ಅಗತ್ಯವಿದ್ದಕಡೆ ಹೋಗಿಬರುತ್ತಾರೆ. ತರಕಾರಿ, ದಿನಸಿ, ಹಾಲು, ಔಷಧಿ, ಪೇಪರ್‌ ಎಲ್ಲವೂ ಎಂದಿನಂತೆ ಲಭಿಸುತ್ತಿವೆ. ವರ್ಕ್ ಅಟ್‌ ಹೋಮ್‌ನಲ್ಲಿ ಅವರವರು ಬೀಜಿ ಇರುವುದರಿಂದ ಲಾಕ್‌ಡೌನ್‌ ಶಿಕ್ಷೆ ಅನಿಸಿಲ್ಲ ಎಂದರು.

60 ಕೊರೋನಾ ಪ್ರಕರಣ:

ಆಸ್ಪತ್ರೆ ತುಂಬಾ ದೊಡ್ಡದಿರುವುದರಿಂದ ಶಂಕಿತರು, ಸೋಂಕಿತರು, ಕೋರೈಂಟನ್‌ ಆದವರಿಗೂ ಆಶ್ರಯ ಕಲ್ಪಿಸಲಾಗಿತ್ತು. 60 ಜನ ಸೋಂಕಿತರು ಸುಮಾರು ದಿನಗಳ ಕಾಲ ಇಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಆದಾಗ್ಯೂ ಇಲ್ಲಿನ ವೈದ್ಯರು, ಸಿಬ್ಬಂದಿ, ತುರ್ತು ಚಿಕಿತ್ಸೆಗೆ ಬಂದವರು ನಿರಾಳವಾಗಿ ಇದ್ದರು. ಇದಕ್ಕೆಲ್ಲ ಕಾರಣ ಇಲ್ಲಿನ ಸರ್ಕಾರ ಮತ್ತು ಆಸ್ಪತ್ರೆ ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿತು. ಹಾಗಾಗಿ ಯಾರೂ ಭಯಪಡಲಿಲ್ಲ, ಜಾಗೃತೆಯಿಂದ ಇದ್ದೇವೆ ಎನ್ನುತ್ತಾರೆ ಡಾ.ವಿಶ್ವನಾಥ.

ಬಹಳಷ್ಟು ವೈರಸ್‌ಗಳು ಈ ಭೂಮಿಯ ಮೇಲಿವೆ. ಅವು ಆಗಾಗ ಮಾನವ ಸೇರಿದಂತೆ ಪ್ರಾಣಿಗಳ ದೇಹ ಪ್ರವೇಶಿಸುತ್ತವೆ. ಆಗ ರೋಗನಿರೋಧಕ ಶಕ್ತಿಗೂ ಆ ವೈರಸ್‌ಗೂ ಘರ್ಷನೆ ನಡೆದು ಅನಾರೋಗ್ಯವಂತರಿಗೆ ಕಿರಿಕಿರಿಯಾಗುತ್ತದೆ. ಅಂಥದೇ ವೈರಸ್‌ ಈ ಕೊರೋನಾ. ಶಿಸ್ತಿನ ಜೀವನ, ದೇಹದಲ್ಲಿ ರೋಗನಿರೋಧಕ ಶಕ್ತಿ ಕುಂದದಂತೆ ನೋಡಿಕೋಂಡೆ ನಿರಾಳರಾಗಿ ಇರಬಹುದು. ವ್ಯತಿರಿಕ್ತ ಅಭಿಪ್ರಾಯ, ತಪ್ಪು ತಿಳುವಳಿಕೆಯಿಂದ ಮನುಷ್ಯ ವೈರಸ್‌ಗಿಂತ ಹೆಚ್ಚಾಗಿ ಭಯದಿಂದ ಅಸುನೀಗುತ್ತಾನೆ. ಹಾಗಾಗಿ ನಾವು ಎಚ್ಚರಿಕೆಯ ಹೆಜ್ಜೆ ಇಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಶಿಕ್ಷಕಿ ವೃತ್ತಿಯಲ್ಲಿರುವ ಪತ್ನಿ ವೀಣಾ, ಪುತ್ರ ಯಶವಂತ, ಪುತ್ರಿ ಸಂಹಿತಾರೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಇವರಂತೆ ಲಂಡನ್‌ನಲ್ಲಿ 2 ಸಾವಿರ ಕನ್ನಡಿಗ ಕುಟುಂಬಗಳಿವೆ. ಈ ಕರೋನಾ ಮಹಾಮಾರಿಯನ್ನು ಇವರೆಲ್ಲ ಧೈರ್ಯದಿಂದ ಎದುರಿಸಿದ್ದಾರೆ ಎನ್ನುತ್ತಾರೆ ವಿಶ್ವನಾಥ.