ಬೆಂಗಳೂರಿನ ಸಾಯ್ ಕೇಂದ್ರದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೊಸ ಹೈ ಪರ್ಫಾರ್ಮೆನ್ಸ್‌ ಸೆಂಟರ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. NIPER ಸ್ಥಾಪನೆಗೆ ಕೇಂದ್ರಕ್ಕೆ ಮನವಿ 

ನವದೆಹಲಿ: ಬೆಂಗಳೂರಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ದ ಕೇಂದ್ರದಲ್ಲಿ ನೂತನ ಹೈ ಪರ್ಫಾರ್ಮೆನ್ಸ್‌ ಸೆಂಟರ್‌ಗೆ ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸೆಂಟರನ್ನು 75 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಎಚ್‌ಎಎಲ್‌ ಸಂಸ್ಥೆಯು ತನ್ನ ಸಿಎಸ್‌ಆರ್‌ ನಿಧಿಯಿಂದ 60 ಕೋಟಿ ರು. ದೇಣಿಗೆ ನೀಡುತ್ತಿದೆ. ಮುಂದಿನ 12 ತಿಂಗಳಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ತಿಳಿದುಬಂದಿದೆ.

ಏನೇನಿರಲಿದೆ?

ಹೊಸ ಹೈ ಪರ್ಫಾರ್ಮೆನ್ಸ್‌ ಸೆಂಟರ್‌ನಲ್ಲಿ ಆಧುನಿಕ ಕ್ರೀಡಾ ವಿಜ್ಞಾನ ವ್ಯವಸ್ಥೆ, ಕ್ರೀಡಾಪಟುಗಳ ಪುನಶ್ಚೇತನಕ್ಕೆ ಅಗತ್ಯ ಸೌಲಭ್ಯ, ಬಯೋಮೆಕಾನಿಕ್ಸ್‌, ಮಾನಸಿಕ ಹಾಗೂ ದೈಹಿಕ ಕ್ಷಮತೆ ಮಾಪನ, ಪೌಷ್ಠಿಕಾಂಶ, ಪ್ರದರ್ಶನ ವಿಶ್ಲೇಷಣೆ, ಹೈಡ್ರೋಥೆರಪಿ ಸೇರಿ ಇನ್ನೂ ಹಲವು ಸೌಲಭ್ಯಗಳು ಲಭ್ಯವಿರಲಿದೆ.

ರಾಜ್ಯದಲ್ಲಿ ಎನ್‌ಐಪಿಇಆರ್‌ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಎಂಬಿಪಾ ಮನವಿ

ವಿಜ್ಞಾನ ಮತ್ತು ಔಷಧ ವಿಜ್ಞಾನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಎನ್‌ಐಪಿಇಆರ್‌) ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಮನವಿ ಮಾಡಿದ್ದಾರೆ.

ಈ ಕುರಿತು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ಹಿಂದೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ಎನ್‌ಐಪಿಇಆರ್‌ ಆರಂಭಕ್ಕೆ ಚಿಂತನೆ ನಡೆಸಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಕರ್ನಾಟಕವು ಔಷಧ ವಿಜ್ಞಾನ, ಬಿಟಿ, ಆರೋಗ್ಯ ಸೇವೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಬೆಂಗಳೂರಿನಲ್ಲೇ 400ಕ್ಕೂ ಹೆಚ್ಚಿನ ಬಿಟಿ ಸಂಸ್ಥೆಗಳಿವೆ. ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರ, ಬಯೋ ಇನ್ಫಾರ್ಮ್ಯಾಟಿಕ್ಸ್‌ ಮತ್ತು ಅಪ್ಲೈಡ್‌ ಬಯೋಟೆಕ್ನಾಲಜಿ ಸೇರಿ ಇನ್ನಿತರ ಪ್ರತಿಷ್ಠಿತ ಸಂಸ್ಥೆಗಳಿವೆ. ಅದರ ಜತೆಗೆ ರಾಜ್ಯ ಸರ್ಕಾರ ಬಯೋ ಇನ್ನೋವೇಶನ್‌ ಕೇಂದ್ರ ಮತ್ತು ರಚನಾತ್ಮಕ ಬಿಟಿ ನೀತಿಯನ್ನು ಅನುಷ್ಠಾನಗೊಳಿಸಿದ್ದು, ಅದರ ಮೂಲಕ ನವೋದ್ಯಮಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಔಷಧ ರಫ್ತಿನಲ್ಲಿ ರಾಜ್ಯದ ಪಾಲು ಶೇ. 12

ದೇಶದ ಬಿಟಿ ಕಂಪನಿಗಳ ಪೈಕಿ ಶೇ. 60ರಷ್ಟು ರಾಜ್ಯದಲ್ಲಿದ್ದು, ದೇಶದ ಒಟ್ಟು ಔಷಧ ರಫ್ತಿನಲ್ಲಿ ರಾಜ್ಯದ ಪಾಲು ಶೇ. 12ರಷ್ಟಿದೆ. ಕ್ಲಿನಿಕಲ್‌ ಸಂಶೋಧನೆ, ವೈದ್ಯಕೀಯ ಸಾಧನ ಸಲಕರಣೆಗಳ ಉತ್ಪಾದನೆ ಮತ್ತು ಎಪಿಐ ಉತ್ಪಾದನೆಯ ಕಾರ್ಯಜಾಲ ನಮ್ಮಲ್ಲಿದೆ. ಈ ಎಲ್ಲವನ್ನು ಪರಿಗಣಿಸಿ ಕೇಂದ್ರ ಸರ್ಕಾರ ಎನ್‌ಐಪಿಇಆರ್‌ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಸಹಕಾರ ನೀಡಿದರೆ ಎನ್‌ಐಪಿಇಆರ್‌ ಆರಂಭಕ್ಕೆ ಅಗತ್ಯವಿರುವ ಭೂಮಿ, ಮೂಲಸೌಕರ್ಯ, ಸಹಭಾಗಿತ್ವ ಸೇರಿದಂತೆ ಎಲ್ಲ ರೀತಿಯ ನೆರವನ್ನೂ ರಾಜ್ಯ ಸರ್ಕಾರ ಕ್ಷಿಪ್ರಗತಿಯಲ್ಲಿ ಒದಗಿಸಲಿದೆ. ಹೀಗಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮನವಿಯನ್ನು ಪುರಸ್ಕರಿಸಬೇಕು ಎಂದು ಪತ್ರದಲ್ಲಿ ಸಚಿವರು ಕೋರಿದ್ದಾರೆ.