ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತ 'ಬುರುಡೆ ಟೀಂ' ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೇ ಮೊದಲ ಬಾರಿಗೆ ಧರ್ಮಸ್ಥಳ ಕ್ಷೇತ್ರವು ಬೆಳ್ತಂಗಡಿ ನ್ಯಾಯಾಲಯದಲ್ಲಿ ವಕಾಲತ್ತು ಸಲ್ಲಿಸಿದೆ. ತಮ್ಮನ್ನು ಸಂತ್ರಸ್ತರು ಎಂದು ಪರಿಗಣಿಸುವಂತೆ ಕೋರಲಾಗಿದೆ.
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತುಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೇ ಮೊದಲ ಬಾರಿಗೆ ಧರ್ಮಸ್ಥಳದ ಪರವಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಕೆಯಾಗಿದೆ. ಬೆಂಗಳೂರಿನ ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್ ಹಾಗೂ ಪುತ್ತೂರಿನ ಮಹೇಶ್ ಕಜೆಯವರು ಧರ್ಮಸ್ಥಳ ಪರ ವಕಾಲತ್ತು ವಹಿಸಿದ್ದು, ಬುಧವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಕ್ಷೇತ್ರದ ಪರವಾಗಿ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಜ.3ಕ್ಕೆ ಮುಂದೂಡಿದೆ.
ಪ್ರಸ್ತುತ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದ್ದು, ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಕೂಡ ಸಲ್ಲಿಕೆಯಾಗಿದೆ. ಆ ವರದಿಯಲ್ಲಿ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರುವ ಬಗ್ಗೆ ಎಸ್ಐಟಿ ಆರು ಮಂದಿಯ ವಿರುದ್ದ ಆರೋಪ ಮಾಡಿದೆ. ಆದರೆ, ಆರೋಪಿಗಳ ವಿರುದ್ದ ಈವರೆಗೂ ಎಸ್ಐಟಿ ಕ್ರಮ ಕೈಗೊಂಡಿಲ್ಲ. ಇದಕ್ಕಾಗಿ ಎಸ್ಐಟಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನೂ ಮುಂದುವರಿದಿದೆ.
ಧರ್ಮಸ್ಥಳ ಪರವಾಗಿ ವಾದ ಮಂಡನೆ
ಇದೀಗ ಇದೇ ಮೊದಲ ಬಾರಿಗೆ ಧರ್ಮಸ್ಥಳದವರು ಈ ಪ್ರಕರಣದಲ್ಲಿ ನೇರವಾಗಿ ಸೇರ್ಪಡೆಯಾಗಿದ್ದು, ಧರ್ಮಸ್ಥಳ ಪರವಾಗಿ ವಾದ ಮಂಡನೆ ನಡೆದಿದೆ. ನ್ಯಾಯಾಲಯದಲ್ಲಿ ವಾದ ಮಂಡಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನ್ಯಾಯವಾದಿ ಮಹೇಶ್ ಕಜೆ, ಸಂತ್ರಸ್ತರು ಎಂಬ ನೆಲೆಯಲ್ಲಿ ಧರ್ಮಸ್ಥಳ ಪರವಾಗಿ ವಕಾಲತ್ತು ಸಲ್ಲಿಸಲಾಗಿದೆ.
ಇಡೀ ಪ್ರಕರಣದಲ್ಲಿ ಧರ್ಮಸ್ಥಳದ ದೇವಸ್ಥಾನವನ್ನು ಉಲ್ಲೇಖ ಮಾಡಲಾಗಿದ್ದು, ಸಂತ್ರಸ್ತರಾಗಿದ್ದ ಅವರಿಗೂ ಈ ಪ್ರಕರಣದಲ್ಲಿ ಸ್ವತಃ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ. ಜ.3ಕ್ಕೆ ಮತ್ತೆ ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಯಾವುದೇ ಆಕ್ಷೇಪ ಸಲ್ಲಿಕೆಯಾಗಿಲ್ಲ.
ಧರ್ಮಸ್ಥಳ ಕೇಸ್ ತನಿಖಾಧಿಕಾರಿ ಜಿತೇಂದ್ರ ಚಿಕ್ಕಮಗಳೂರು ಎಸ್ಪಿ
ಧರ್ಮಸ್ಥಳ ಗ್ರಾಮದ ಅನಧಿಕೃತ ಮೃತದೇಹಗಳ ಅಂತ್ಯಸಂಸ್ಕಾರ ಪ್ರಕರಣದ ಮುಖ್ಯ ತನಿಖಾಧಿಕಾರಿ ಜಿತೇಂದ್ರ ದಯಾಮ ಅವರಿಗೆ ಚಿಕ್ಕಮಗಳೂರು ಜಿಲ್ಲಾ ವರಿಷ್ಠಾಧಿಕಾರಿ ಹುದ್ದೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಧರ್ಮಸ್ಥಳ ವಿವಾದದ ತನಿಖೆ ಹೊಣೆ ಹೊತ್ತಿದ್ದ ಜಿತೇಂದ್ರ ಅವರ ಕೆಲಸಕ್ಕೆ ಸರ್ಕಾರ ಪುರಸ್ಕಾರ ನೀಡಿದಂತಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
2019ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿರುವ ಜಿತೇಂದ್ರ ಅವರು ಈವರೆಗೆ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಸೇರಿ ನಾನ್ ಎಕ್ಸಿಕ್ಯುಟಿವ್ ಹುದ್ದೆಯಲ್ಲೇ ಇದ್ದರು. ಇನ್ನು ಎಎನ್‌ಎಫ್‌ನಲ್ಲಿ ಎಸ್ಪಿಯಾಗಿದ್ದಾಗ ವಿಕ್ರಂಗೌಡ ಎನ್‌ಕೌಂಟರ್‌ನ ಸಾರಥ್ಯ ವಹಿಸಿದ್ದರು. ನಕ್ಸಲರ ಶರಣಾಗತಿಯಲ್ಲಿ ಸಹ ಅವರು ಪ್ರಮುಖ ಪಾತ್ರವಹಿಸಿದ್ದರು.


