Asianet Suvarna News Asianet Suvarna News

ಡಾ.ವೀರೇಂದ್ರ ಹೆಗ್ಗಡೆಗೆ ಹುಟ್ಟುಹಬ್ಬದ ಸಂಭ್ರಮ: ಲೋಕಕ್ಕೇ ಮಾದರಿ ಧರ್ಮಾಧಿಕಾರಿ

ಉಳಿದವರಿಗೆ ನಾವು ಒಂದು ಮಾದರಿ ಆಗಿರಬೇಕು ಎಂಬುದೇ ನಮ್ಮ ಕನಸು. ನಮ್ಮದು ನಿಸ್ವಾರ್ಥದ ಸೇವೆ. ಯಾವುದೇ ಆಕಾಂಕ್ಷೆಗಳಿಲ್ಲ. ಅತಿ ಆಸೆಗಳಿಲ್ಲ. ಮಾಡುವ ಸೇವೆ ಭಗವದರ್ಪಿತ, ಸಮಾಜಕ್ಕೆ ಅರ್ಪಿತ ಎಂಬ ಧೈಯದಿಂದ ದುಡಿಯುತ್ತೇವೆ: ಡಾ.ಡಿ. ವೀರೇಂದ್ರ ಹೆಗ್ಗಡೆ 

Dr Veerendra Heggade Celebrates 72 nd Birthday grg
Author
Bengaluru, First Published Nov 25, 2020, 3:08 PM IST

ಡಾ. ವಸಂತಕುಮಾರ ಪೆರ್ಲ

ದಕ್ಷಿಣಕನ್ನಡ(ನ.25): ಧರ್ಮಸ್ಥಳ ಕೇವಲ ಧರ್ಮಕ್ಷೇತ್ರವಷ್ಟೇ ಅಲ್ಲ, ಅದು ವಿದ್ಯಾ ಕ್ಷೇತ್ರ, ಸೇವಾಕ್ಷೇತ್ರಮ ನ್ಯಾಯಕ್ಷೇತ್ರ. ಗ್ರಾಮೀಣ ಅಭಿವೃದ್ಧಿ, ವೃತ್ತಿ ಶಿಕ್ಷಣ, ಜಲಸಂಚಯನ, ಉದ್ಯೋಗ, ಸಹಕಾರ ಸಂಘ, ಆರೋಗ್ಯ,ಕಲೆ ಸಂಗೀತ, ಸಾಹಿತ್ಯ, ಧರ್ಮಸಮ್ಮೇಳನ- ಹೀಗೆ ಬದುಕಿನ ಎಲ್ಲಾ ಆಯಾಮಗಳನ್ನೂ ಸ್ಪರ್ಶಿಸುವ, ಪರಿವರ್ತಿಸುವ ಅಪರೂಪದ ಕ್ಷೇತ್ರ. ಅದನ್ನು ಹೀಗೆ ಸರ್ವತೋಮುಖವಾಗಿ ರೂಪಿಸಿದವರು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ. ಇಂದು ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರ ಕನಸುಗಳ ಕುರಿತ ಮಾತುಕತೆಯ ಆಯ್ದ ಭಾಗ ಇಲ್ಲಿದೆ. ಈ ವಿಚಾರದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಸಂದರ್ಶನ

ಹೊಸಕಾಲದ ಜನರ ಆವಶ್ಯಕತೆ ಮತ್ತು ಬೇಡಿಕೆಗಳಿಗೆ ತಕ್ಕಂತೆ ಹೇಗೆ ಸ್ಪಂದಿಸಿದಿರಿ? ಬದಲಾವಣೆಗಳನ್ನೇನಾದರೂ ಅಳವಡಿಸಿಕೊಂಡಿದ್ದೀರಾ?

ಅಗತ್ಯ ಮತ್ತು ಅವಶ್ಯಕತೆಗನುಸಾರವಾಗಿ ಬದಲಾವಣೆ ನಿರಂತರವಾಗಿ ನಡೆಯುವ ಒಂದು ಪ್ರಕ್ರಿಯೆ. ಒಂದೊಂದು ತಲೆಮಾರಿನ ಅವಧಿಯಲ್ಲೂ ಸಣ್ಣ ಪುಟ್ಟಬದಲಾವಣೆಗಳು ಆಗುತ್ತಲೇ ಇರುತ್ತವೆ. ಕೆಲವು ನಮ್ಮ ಕಣ್ಣಿಗೆ ಕಾಣಿಸುತ್ತವೆ. ಕೆಲವು ಸದ್ದಿಲ್ಲದೆ ಅವುಗಳ ಪಾಡಿಗೆ ಅವು ಆಗುತ್ತಿರುತ್ತವೆ. ನೂರು ವರ್ಷ ಹಿಂದೆ ಇದ್ದ ಹಾಗೆ ಕ್ಷೇತ್ರ ಇಂದು ಇಲ್ಲ. ಬದಲಾವಣೆ ಎಂಬುದು ಕಾಲದ ಅಗತ್ಯ. ಆದರೆ ಮೂಲ ಆಶಯಕ್ಕೆ ಧಕ್ಕೆ ಬರಬಾರದು. ಪ್ರತಿಯೊಂದು ಕ್ರಮ ಆಚರಣೆಯ ಹಿಂದಿನ ಉದ್ದೇಶವನ್ನು ಅರಿತು ಬದಲಾವಣೆ ತಂದಾಗ ಅದಕ್ಕೆ ಅರ್ಥಪೂರ್ಣತೆ ಬರುತ್ತದೆ.

ಧರ್ಮಸ್ಥಳಕ್ಕೆ ಕಿಂಡಿ ಡ್ಯಾಂ: ಸಿಎಂಗೆ ಹೆಗ್ಗಡೆ ಕೃತಜ್ಞತೆ

ಧರ್ಮಸ್ಥಳದ ಒಳಾಡಳಿತದ ಇವತ್ತಿನ ವ್ಯವಸ್ಥೆಗಳ ಕುರಿತು ಹೇಳಬಹುದೇ?

ಸುಮಾರು 650 ವರ್ಷಗಳಿಂದ ಬೆಳೆದುಕೊಂಡು ಬಂದ ಆಡಳಿತ ಪದ್ಧತಿ ಇದು. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲೂ ಇದೇ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಪೂಜಾವರ್ಗ, ಸಿಬ್ಬಂದಿ ವರ್ಗ ಮತ್ತು ಆಡಳಿತ ವರ್ಗ ಎಂಬ ಮೂರು ಸ್ತರಗಳಿರುತ್ತವೆ. ಇವು ಮೂರು ವಿಭಾಗಗಳು ಒಂದಕ್ಕೊಂದು ಪೂರಕವಾಗಿದ್ದಾಗ ದೇವಸ್ಥಾನದ ಕಾರಣಿಕ ವೃದ್ಧಿಯಾಗುತ್ತದೆ. ನಾಡಿಗೆ ಒಳ್ಳೆಯದಾಗುತ್ತದೆ.

ಧರ್ಮಸ್ಥಳದ ಇವತ್ತಿನ ಒಳಾಡಳಿತ ವ್ಯವಸ್ಥೆ ತುಂಬ ಸುಭದ್ರವಾಗಿದೆ. ಒಂದಕ್ಕೊಂದು ಪೂರಕವಾಗಿ ಭಕ್ತಾದಿಗಳಿಗೆ ಒಳ್ಳೆಯ ಸೇವೆ ಲಭ್ಯವಾಗುತ್ತಿದೆ. ಧಾರ್ಮಿಕ ಆಚರಣೆಗಳು, ವಿಧಿವಿಧಾನಗಳು, ಹಬ್ಬ ಹರಿದಿನಗಳು, ಜಾತ್ರೆ ಉತ್ಸವಗಳು ಪ್ರತಿದಿನ ಎಂಬಂತೆ ಹಲವಾರು ಇರುತ್ತವೆ. ಯಾವುದಕ್ಕೂ ಚ್ಯುತಿ ಇಲ್ಲದೆ ಕ್ರಮಬದ್ಧವಾಗಿ, ವೈಭವೋಪೇತವಾಗಿ ನಡೆಯುತ್ತವೆ. ದೈವ ದೇವರುಗಳ ಸಂಗಮದಿಂದಾಗಿ ಕಾರಣಿಕವು ಸೇರಿಕೊಂಡಿದೆ. ಶಿಷ್ಟಾಚಾರ ಹಾಗೂ ಧಾರ್ಮಿಕ ಕ್ರಮ ಸಂಪ್ರದಾಯಗಳಿಗೆ ಅನುಸಾರವಾಗಿ ವ್ಯವಸ್ಥೆಯ ಭಾಗವಾಗಿ ತಾನಾಗಿಯೇ ಬೆಳೆದು ಬಂದ ಆಡಳಿತ ಪದ್ದತಿ ಇದು. ಧಾರ್ಮಿಕ ಕಲಾಪಗಳನ್ನು ನಡೆಸುವ ಅರ್ಚಕ ವರ್ಗ ಮತ್ತು ಅವರಿಗೆ ಪೂರಕವಾಗಿ ಇತರ ಜವಾಬ್ದಾರಿಗಳನ್ನು ನಿರ್ವಹಿಸತಕ್ಕ ಸಿಬ್ಬಂದಿ ವರ್ಗ, ಈ ಎರಡು ವಿಭಾಗಗಳನ್ನು ನಿರ್ವಹಿಸಿಕೊಂಡು ಹೋಗುವ ಹತ್ತು ಸಮಸ್ತರ ಪ್ರತಿನಿಧಿಯಾಗಿರುವ ಆಡಳಿತ ವರ್ಗ, ಲೋಪದೋಷಗಳನ್ನು ಅಲ್ಲಲ್ಲಿಯೇ ನಿವಾರಿಸುತ್ತ, ಕಾಲಕಾಲಕ್ಕೆ ಹೆಚ್ಚು ವ್ಯವಸ್ಥಿತಗೊಳ್ಳುತ್ತ ಸಾಂಪ್ರದಾಯಿಕವಾಗಿ ಬೆಳೆದು ಬಂದ ಆಡಳಿತ ಪದ್ಧತಿ ಇದು. ಇದೊಂದು ಸುವ್ಯವಸ್ಥಿತವಾದ ಕ್ರಮ, ಭ್ರಷ್ಟಾಚಾರಕ್ಕೆ ಎಳ್ಳಷ್ಟೂಎಡೆ ಇಲ್ಲ.

ಒಳಾಡಳಿತದಲ್ಲಿ ಹೊಸತನವನ್ನು ತಂದಿದ್ದೀರಾ?

ಮೂಲಾಂಶಗಳನ್ನು ಉಳಿಸಿಕೊಂಡು ಎಲ್ಲ ಹೆಗ್ಗಡೆಯವರ ಕಾಲದಲ್ಲಿಯೂ ಹೊಸ ಹೊಸ ಅಂಶಗಳು ಸೇರ್ಪಡೆಗೊಳ್ಳುತ್ತಲೇ ಬಂದಿವೆ. ಉದಾಹರಣೆಗೆ, ಮಂಜಯ್ಯ ಹೆಗ್ಗಡೆಯವರ ಕಾಲದಿಂದ ಲೆಕ್ಕಪತ್ರಗಳ ನಿರ್ವಹಣೆ ಹೆಚ್ಚು ಸುವ್ಯವಸ್ಥಿತವಾಯಿತು. ನಮ್ಮ ಕಾಲದಲ್ಲಿ ಕಂಪ್ಯೂಟರ್‌ ಬಂತು. ಸಿ.ಸಿ. ಕ್ಯಾಮೆರಾ ಅಳವಡಿಸಲಾಯಿತು. ಇದರಿಂದಾಗಿ ಆಡಳಿತ ಸಿಬ್ಬಂದಿಯ ಕೆಲಸ ತುಂಬ ಹಗುರ ಆಯಿತು. ಕಣ್ಗಾವಲಿಗೆ ಖಚಿತತೆ ಬಂತು. ಭಕ್ತಾದಿಗಳ ಅನುಕೂಲಕ್ಕಾಗಿ ಸಿಬ್ಬಂದಿಯ ಸಮಯ ಮತ್ತು ಶ್ರಮ ಗರಿಷ್ಠತಮವಾಗಿ ಉಪಯೋಗವಾಗುತ್ತಿರುವುದು ಧರ್ಮಸ್ಥಳದ ವಿಶೇಷತೆಯಾಗಿದೆ.

ನೀರು ಉಳಿಸಲು ವೀರೇಂದ್ರ ಹೆಗ್ಗಡೆ ಹೊಸ ಪ್ಲಾನ್

ಸಿಬ್ಬಂದಿಗಳನ್ನು ಹೇಗೆ ನಿರ್ವಹಿಸುತ್ತೀರಿ? ಅಂದರೆ ತಕರಾರುಗಳನ್ನು ನಿರ್ವಹಿಸುವ ಕ್ರಮ ಹೇಗೆ ಮತ್ತು ಪ್ರತಿಭಾವಂತರನ್ನು, ಸಮರ್ಥರನ್ನು ಗುರುತಿಸುವ ವಿಧಾನ ಹೇಗೆ?

ಇಂತಹ ಕಡೆಗಳಲ್ಲಿ ಆಧುನಿಕ ಪದ್ಧತಿಯನ್ನು ಅನುಸರಿಸುತ್ತೇವೆ . ತಕರಾರುಗಳನ್ನು ಆಯಾ ವಿಭಾಗದ ಮುಖ್ಯಸ್ಥರು ಇತ್ಯರ್ಥ ಪಡಿಸುತ್ತಾರೆ. ಅಂತಿಮವಾಗಿ, ಅಗತ್ಯವಿದ್ದರೆ ಮಾತ್ರ ಅಂಥವು ನಮ್ಮ ಬಳಿಗೆ ಬರುತ್ತವೆ. ಆಗ ತಿಳಿವಳಿಕೆ ನೀಡಿ, ಮಾರ್ಗದರ್ಶನ ಮಾಡಿ ಅಥವಾ ಎಚ್ಚರಿಕೆ ಹೇಳಿ ಸೌಹಾರ್ದಯುತವಾಗಿ ಅವುಗಳನ್ನು ಮುಗಿಸಲಾಗುತ್ತದೆ. ಪ್ರತಿಭಾವಂತರಿಗೆ, ಸಮರ್ಥರಿಗೆ ಇನ್ನಷ್ಟುಜವಾಬ್ದಾರಿಗಳನ್ನು ನೀಡಿ, ಉತ್ತಮ ನಿರ್ವಹಣೆ ತೋರಿಸಬಲ್ಲ ಆಯಕಟ್ಟಿನ ಸ್ಥಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ. ಅದಕ್ಕೆ ಸರಿಹೊಂದುವಂತೆ ಒಳ್ಳೆಯ ವೇತನವನ್ನು ನೀಡಲಾಗುತ್ತದೆ. ಸಿಬ್ಬಂದಿ ನಿರ್ವಹಣೆಯಲ್ಲಿ, ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್‌ ಎಫ್‌. ಕೆನಡಿಯವರ ತತ್ವ ನಮ್ಮದು. ಆಡಳಿತದಲ್ಲಿ ಬೇರೆ ಬೇರೆ ಕೇಡರ್‌ ವ್ಯವಸ್ಥೆ ಇದ್ದರೂ ಎಲ್ಲರೊಂದಿಗೆ ನೇರವಾದ ಸಂಪರ್ಕವನ್ನು ‘ಹೆಗ್ಗಡೆಯವರು’ ಉಳಿಸಿಕೊಂಡಿರುತ್ತಾರೆ. ಅತ್ಯಂತ ತಳಮಟ್ಟದ ಕಾರ್ಯಕರ್ತರೊಂದಿಗೆ ಸಿಬ್ಬಂದಿಯೊಂದಿಗೆ ನೇರ ಸಂಪರ್ಕ ನಡೆಸುವುದರಿಂದ ಎಲ್ಲೆಲ್ಲಿ ಏನೇನು ನಡೆಯುತ್ತಿದೆಯೆಂಬುದು ತಕ್ಷಣ ಅರಿವಿಗೆ ಬರುತ್ತದೆ. ಇದರಿಂದ ಆಡಳಿತವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಂದು, ಅಧಿಕಾರವನ್ನು ಚಲಾಯಿಸುವ ಸಂದರ್ಭದಲ್ಲಿ ಆಯಾ ಕೇಡರ್‌ಗಳ ಮುಖ್ಯಸ್ಥರ ಸಮಕ್ಷಮದಲ್ಲಿ ಮಾಡಲಾಗುತ್ತದೆ. ಸರಕಾರಿ ವ್ಯವಸ್ಥೆಯಲ್ಲಿ ಇರುವಂತೆ, ‘ಮೆಮೊ’ ಕೊಡುವ ಅಗತ್ಯ ಬರುವುದಿಲ್ಲ. ಆ ಕೆಲಸವನ್ನು ಬಾಯಿ ಮಾತಿನ ಎಚ್ಚರಿಕೆ, ತಿಳಿವಳಿಕೆ , ಮಾರ್ಗದರ್ಶನಗಳು ಮಾಡುತ್ತವೆ. ಇನ್ನು ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ವಿಭಾಗಗಳಿಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಅಧಿಕಾರವನ್ನು ಬಳಸಲಾಗುತ್ತದೆ. ಈ ಎಲ್ಲ ಉಪಕ್ರಮಗಳಿಂದ ನಮ್ಮ ಆಡಳಿತ ಪಾರದರ್ಶಕವೂ ಪರಿಣಾಮಕಾರಿಯಾಗಿಯೂ ಉಳಿದುಕೊಂಡಿದೆ.

ನಿಮ್ಮ ಕಾಲದಲ್ಲಿ ಅಳವಡಿಸಿಕೊಂಡ ಮುಖ್ಯ ಅಥವಾ ಹೊಸ ವಿಧಾನಗಳಾವುವು?

ಭಕ್ತಾದಿಗಳು ಹೆಚ್ಚಾಗಿದ್ದಾರೆ, ಕ್ಷೇತ್ರ ವಿಸ್ತಾರವಾಗಿದೆ. ಬೆಳವಣಿಗೆ ಅಗಾಧವಾಗಿದೆ. ಇವುಗಳನ್ನು ಅನುಸರಿಸಿ ನಿರ್ವಹಣೆಯನ್ನು ಸುಗಮಗೊಳಿಸಲಾಗಿದೆ. ಈಗ ನಿರ್ವಹಣೆಯಲ್ಲಿ (ಞa್ಞaಜಛಿಞಛ್ಞಿಠಿ) ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಒಂದೊಂದು ವಿಭಾಗಕ್ಕೆ ಒಬ್ಬೊಬ್ಬ ಮುಖ್ಯಸ್ಥರನ್ನು ನೇಮಿಸಿ ಅವರನ್ನು ಜವಾಬ್ದಾರರನ್ನಾಗಿ ಮಾಡಲಾಗಿದೆ. ಮಾಸಿಕ ವರದಿ ಮತ್ತು ಸಂಸ್ಥೆಗಳ ಒಟ್ಟು ನಿರ್ವಹಣಾ ಫಲಿತಾಂಶಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ. ಆಡಳಿತ ಮುಖ್ಯಸ್ಥ ಅನ್ನುವ ನೆಲೆಯಲ್ಲಿ ‘ಹೆಗ್ಗಡೆಯವರು’ ಇರುತ್ತಾರೆ. ನಿರ್ವಹಣೆಯ ಮುಖ್ಯಸ್ಥರ ನೆಲೆಯಲ್ಲಿ ಡಿ. ಹರ್ಷೇಂದ್ರ ಕುಮಾರ್‌ ಇರುತ್ತಾರೆ. ಅನಂತರದ ಹಂತದಲ್ಲಿ ವಿಭಾಗ ಮುಖ್ಯಸ್ಥರು, ಶಾಖಾ ಮುಖ್ಯಸ್ಥರು ಇರುತ್ತಾರೆ. ಅವರವರ ನೆಲೆಯ ಜವಾಬ್ದಾರಿಗಳನ್ನು ಅವರವರು ನಿರ್ವಹಿಸಬೇಕು. ಜವಾಬ್ದಾರಿಗಳಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ.

ದೈವಭೀತಿ ಮತ್ತು ಸತ್ಯ ಹಾಗೂ ಪ್ರಾಮಾಣಿಕತೆಯ ನೆಲೆಯಲ್ಲಿ ವ್ಯವಸ್ಥೆಗಳು ಸುಗಮವಾಗಿ ನಡೆಯುತ್ತಿವೆ. ಆದರೆ ಹಳತು ಹೊಸತಿನ ಸಂಗಮ ನಡೆಯುತ್ತಿರುವ ಹೊಸ್ತಿಲಲ್ಲಿ ನಿರ್ವಹಣೆಯನ್ನು ಪರಿಶೀಲಿಸುವ ಕ್ರಮ ಹೇಗೆ?

ಹೊಸತು ಎಂಬುದು ಕಾಲದ ಅಗತ್ಯವಾಗಿ ಬರುವುದರಿಂದ ಅದರ ಜೊತೆಜೊತೆಗೆ ನಾವು ಹೆಜ್ಜೆ ಹಾಕುತ್ತಿರುತ್ತೇವೆ. ಪರಿಶೀಲನೆಯ ಕ್ರಮ ಎಂಬುದು ಕೂಡ ಅದರ ಒಳಗೇ ಅಂತರ್ಗತವಾಗಿರುತ್ತದೆ. ಮುಖ್ಯ ಗುಡಿಗಳಿಗೆ ಹಾಗೂ ಕೋಣೆಗಳಿಗೆ ಇಬ್ಬಿಬ್ಬರು ಒಟ್ಟಾಗಿದ್ದು ಬೀಗ ಹಾಕುವ ಕ್ರಮ ಮತ್ತು ಪ್ರದಕ್ಷಿಣೆ ಹಾಗೂ ಅಪ್ರದಕ್ಷಿಣೆಯಾಗಿ ಅವುಗಳನ್ನು ಪರಿಶೀಲಿಸುತ್ತ ಬರುವ ಕ್ರಮ ಅವುಗಳಲ್ಲೊಂದು.

ಯಾರು ದೇವಸ್ಥಾನದ ಒಳಭಾಗವನ್ನು ನಿರ್ವಹಣೆ ಮಾಡುತ್ತಾರೋ ಅವರೇ ರಾತ್ರಿ ಹೊತ್ತು ದೇವಸ್ಥಾನವನ್ನು ಕಾವಲು ಕಾಯುವುದರಿಂದ ಜವಾಬ್ದಾರಿ ಅವರೊಳಗೇ ಇರುತ್ತದೆ. ಇದಕ್ಕಿಂತ ದೊಡ್ಡ ರಕ್ಷಣಾ ವಿಧಾನ ಬೇರೆ ಇರಲಾರದು! ಈಗ ಆಧುನಿಕ ಸಿಸಿ ಕ್ಯಾಮೆರಾ ಬಂದಿರುವುದರಿಂದ ರಕ್ಷಣೆಗೆ ಅತ್ಯುತ್ತಮ ಸಾಧನ ದೊರಕಿದಂತಾಗಿದೆ. ಅದರಲ್ಲಿ ಎಲ್ಲವೂ ದಾಖಲಾಗಿರುವುದರಿಂದ ಪರಿಶೀಲನೆ ಸುಲಭ, ಹಾಗಾಗಿ ಯಾರೂ ಹಾದಿ ತಪ್ಪಿ ನಡೆಯಲು ಅವಕಾಶ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ವಿಶ್ವಾಸದ- ಭರವಸೆಯ ನಡೆನುಡಿಯಿಂದ ಯಾವುದೇ ತೊಂದರೆ ಎದುರಾಗುವುದಿಲ್ಲ. ಹಿತವಾದ, ಬೆಚ್ಚನೆಯ ಪ್ರೀತಿ ತೋರಿದಾಗ ಸಿಬ್ಬಂದಿಯಿಂದ ಪೂರ್ಣ ಪ್ರಮಾಣದ ಪ್ರತಿಫಲ ದೊರೆಯುವುದು. ಅಂತಹ ವಿಶ್ವಾಸವೇ ನಮ್ಮ ಸಂಸ್ಥೆಗಳನ್ನು ಮುನ್ನಡೆಸುತ್ತಿವೆ. ಭಕ್ತಾದಿಗಳ ಪೂರ್ಣತೃಪ್ತಿ ನಮ್ಮ ಧೈಯ. ಅದನ್ನು ನಡೆಸಿಕೊಡಲು ನಮ್ಮ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದು ನಮಗೆ ಸಂತೋಷ ಕೊಡುವ ವಿಷಯ.

ನಿಮ್ಮ ಕನಸು ಏನು?

ಉಳಿದವರಿಗೆ ನಾವು ಒಂದು ಮಾದರಿ ಆಗಿರಬೇಕು ಎಂಬುದೇ ನಮ್ಮ ಕನಸು. ನಮ್ಮದು ನಿಸ್ವಾರ್ಥದ ಸೇವೆ. ಯಾವುದೇ ಆಕಾಂಕ್ಷೆಗಳಿಲ್ಲ. ಅತಿ ಆಸೆಗಳಿಲ್ಲ. ಮಾಡುವ ಸೇವೆ ಭಗವದರ್ಪಿತ, ಸಮಾಜಕ್ಕೆ ಅರ್ಪಿತ ಎಂಬ ಧೈಯದಿಂದ ದುಡಿಯುತ್ತೇವೆ. ನಮ್ಮದು ಅವಿಶ್ರಾಂತವಾದ ದುಡಿಮೆ. ಅತ್ಯಂತ ಶುಚಿಯಾದ ಪಟ್ಟಣ ಎಂದು ಧರ್ಮಸ್ಥಳಕ್ಕೆ ರಾಷ್ಟ್ರ ಪ್ರಶಸ್ತಿ ಬಂತು. ದೇವಸ್ಥಾನಕ್ಕೆ ಬಂದು ಅಂತರಂಗ ಶುದ್ಧವಾದರೆ ಸಾಲದು, ಬಹಿರಂಗವೂ ಶುದ್ಧವಾಗಿರಬೇಕು ಎಂಬುದನ್ನು ಧರ್ಮಸ್ಥಳ ತೋರಿಸಿಕೊಟ್ಟಿತು. ಇಂತಹ ‘ಮಾದರಿ’ ಆಗಿರುವುದರ ಬಗ್ಗೆ ನಮಗೆ ಹೆಮ್ಮೆ ಇದೆ. ಧರ್ಮಸ್ಥಳ ಕ್ಷೇತ್ರಕ್ಕೆ ವೆಬ್‌ಸೈಟ್‌ ಇದೆ. ನಮ್ಮ ಸೇವೆಗಳನ್ನು ಮಾತ್ರವಲ್ಲ, ನಮ್ಮ ಸಾಧನೆಗಳನ್ನು ಇವತ್ತು ಜಗತ್ತು ಗಮನಿಸುತ್ತಿದೆ.

ವೆಬ್‌ಸೈಟ್‌ನಿಂದಾಗಿ ನಮ್ಮ ಎಲ್ಲ ಕೆಲಸಗಳು ಇವತ್ತು ಜಗತ್ತಿನಾದ್ಯಂತ ಪ್ರಸಾರವಾಗುವುದರಿಂದ ನಮ್ಮ ಜವಾಬ್ದಾರಿ ಇಮ್ಮಡಿಗೊಂಡಿದೆ. ಈ ಸವಾಲಿನೊಂದಿಗೆ ಕೆಲಸ ಮಾಡುವುದು ನಮಗೆ ಸಂತಸದ ಸಂಗತಿ. ನಾವು ಶುಭ್ರ ಶ್ವೇತ ವಸನಧಾರಿಗಳು. ನಮ್ಮಲ್ಲಿ ಯಾವುದೇ ಕಳಂಕಗಳಿಲ್ಲ. ಕಳಂಕರಹಿತವಾಗಿ, ನಿಸ್ವಾರ್ಥತೆಯಿಂದ ಜನ ಸಮ್ಮುಖವಾಗಿ ಕೆಲಸ ಮಾಡಬೇಕೆಂಬುದೇ ನಮ್ಮ ಕನಸು. ನಾವು ರೋಲ್‌ ಮಾಡೆಲ್‌ ಆಗಬೇಕೆಂಬುದು ನಮ್ಮ ಕನಸು.
 

Follow Us:
Download App:
  • android
  • ios