ಬಳ್ಳಾರಿ(ಏ.02): ನಗರದ ಡಾ. ರಾಜ್‌ಕುಮಾರ್‌ ಕುಟುಂಬದ ಅಭಿಮಾನಿ ಗೋಪಾಲ್‌ ಹಾಗೂ ಗೆಳೆಯರು ಸೇರಿ ಬಡವರೊಬ್ಬರಿಗೆ ಸೂರು ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

‘ಮುತ್ತುರಾಜ್‌ ಅಭಿಮಾನಿಗಳ ಸಂಘ’ದ ಅಧ್ಯಕ್ಷ, ವೃತ್ತಿಯಲ್ಲಿ ಲಾರಿ ಡ್ರೈವರ್‌ ಆಗಿರುವ ಗೋಪಾಲ್‌ ಹಾಗೂ ಈತನ ಗೆಳೆಯರು ಸೇರಿ ತಿಲಕ್‌ನಗರದ ಗುಡಿಸಲು ವಾಸಿ ಮಾರಪ್ಪ ಎಂಬಾತನಿಗೆ ಸುಮಾರು ಎರಡು ಲಕ್ಷ ರು. ವ್ಯಯಿಸಿ ಪುಟ್ಟದೊಂದು ಮನೆ ನಿರ್ಮಿಸಿಕೊಟ್ಟಿದ್ದಾರೆ. ಈ ಮನೆಯನ್ನು ಅವರು ಒಂದೂವರೆ ವರ್ಷದ ಹಿಂದೆಯೇ ಮಾರಪ್ಪ ಅವರಿಗೆ ಹಸ್ತಾಂತರಿಸಿದ್ದಾರೆ.

ಬಳ್ಳಾರಿಯಲ್ಲಿ ಕೊರೋನಾ 2ನೇ ಅಲೆಗೆ ಮೊದಲ ಬಲಿ: ಮತ್ತೆ ಸೀಲ್‌ಡೌನ್‌, ಆತಂಕದಲ್ಲಿ ಜನತೆ

ಕೂಲಿ ಕೆಲಸ ಮಾಡಿಕೊಂಡಿರುವ ಮಾರಪ್ಪ ಅವರು ಸಹ ಡಾ. ರಾಜ್‌ಕುಮಾರ್‌ ಅಭಿಮಾನಿ. ಹೀಗಾಗಿ ಪರಸ್ಪರ ಪರಿಚಯವಾಗಿದೆ. ಅವರ ಗುಡಿಸಲು ಮಳೆಗೆ ಸೋರುತ್ತಿತ್ತು. ಸಂಕಷ್ಟದಲ್ಲಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಎಲ್ಲ ಗೆಳೆಯರು ಸೇರಿ ಕೈಲಾದಷ್ಟುಹಣ ಕೂಡಿಸಿ ಸೂರು ಕಲ್ಪಿಸಿಕೊಡುವ ನಿರ್ಧಾರಕ್ಕೆ ಬಂದಿದ್ದಾರೆ. ಸುಮಾರು ಎರಡು ಲಕ್ಷ ರು.ಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಸ್ಟಾರ್‌ ನಟರ ಚಿತ್ರ ಬಿಡುಗಡೆ ವೇಳೆ ಹಾಲಿನ ಅಭಿಷೇಕ ಮಾಡುವ ಅಭಿಮಾನಿಗಳ ನಡುವೆ ಬಡವರಿಗೆ ಸಹಾಯ ಮಾಡುವ ಮೂಲಕ ಮುತ್ತುರಾಜ್‌ ಅಭಿಮಾನಿಗಳ ಸಂಘದ ಸದಸ್ಯರು ಮಾನವೀಯ ಕಾರ್ಯ ಮಾಡಿ ಗಮನ ಸೆಳೆದಿದ್ದಾರೆ.
ನಮಗೆ ಪರಿಚಿತನಾಗಿದ್ದ ಮಾರಪ್ಪನವರ ಮನೆ ಸೋರುತ್ತಿದೆ ಎಂದು ಗೊತ್ತಾಯಿತು. ಎಲ್ಲರೂ ಸೇರಿ ಹಣ ಕೂಡಿಸಿ ಎರಡು ಲಕ್ಷ ರು. ವೆಚ್ಚದಲ್ಲಿ ನಾಲ್ಕು ಗೋಡೆ, ಮೇಲೆ ತಗಡಿನ ಶೀಟ್‌ ಹಾಕಿ ಸೂರು ಕಲ್ಪಿಸಿಕೊಟ್ಟಿದ್ದೇವೆ ಎಂದು ಡಾ. ರಾಜ್‌ಕುಮಾರ್‌ ಕುಟುಂಬದ ಅಭಿಮಾನಿ ಗೋಪಾಲ್‌ ತಿಳಿಸಿದ್ದಾರೆ.