ಆನಂದ್ ಎಂ. ಸೌದಿ

ಯಾದಗಿರಿ(ಏ.18): ಒಂದೆಡೆ ಮಗಳಿಗೆ ಡೆಂಘೀ ಉಲ್ಬಣ, ಮತ್ತೊಂದೆಡೆ ಜಿಲ್ಲೆಯಲ್ಲಿ ಕೊರೋನಾ ತಡೆಗಟ್ಟುವ ಡ್ಯೂಟಿ..! ಡೆಂಘೀಯಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ನೀಡಿಸಲು ಅರ್ಧ ದಿನ ರಜೆ ಹಾಕಿದ ವೈದ್ಯರೊಬ್ಬರು, ಕೊರೋನಾದ ಈ ಆತಂಕದ ಸಮಯದಲ್ಲಿ ಮಗಳ ನೆಪದಲ್ಲಿ ಮನೆಯಲ್ಲಿ ಕೂಡುವುದು ಬೇಡ, ಜನರ ಆರೋಗ್ಯವೂ ಮುಖ್ಯ ಎಂದು ನಿರ್ಧರಿಸಿ, ಕೆಲವೇ ಗಂಟೆಗಳಲ್ಲಿ ಡ್ಯೂಟಿಗೆ ವಾಪಸ್ಸಾಗುವ ಮೂಲಕ, ತಮ್ಮ ವೃತ್ತಿ ಧರ್ಮಕ್ಕೆ ಮೆರುಗು ಮೂಡಿಸಿದ್ದಾರೆ.

ಯಾದಗಿರಿ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ. ಪ್ರಕಾಶ ರಾಜಾಪೂರ ಅವರ ಇಂತಹ ದಿಟ್ಟತನ ವೈದ್ಯಲೋಕದ ಹೆಮ್ಮೆಯ ಸಂಗತಿ. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ರಚನೆಯಾದ ಟಾಸ್ಕ್‌ಫೋರ್ಸ್ ತಂಡದಲ್ಲಿ ಡಾ. ಪ್ರಕಾಶ ರಾಜಾಪೂರ ಅವರದ್ದು ಪ್ರಮುಖ ಪಾತ್ರ. ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿಯೂ ಆಗಿರುವ ಡಾ. ಪ್ರಕಾಶ ರಾಜಾಪೂರ, ದಿನನಿತ್ಯ ಹತ್ತಾರು ಹಳ್ಳಿಗಳಿಗೆ ತಿರುಗಾಡಿ ಜನರ ಆರೋಗ್ಯ ತಪಾಸಣೆಯ ಜೊತೆಗೆ ಅರಿವೂ ಮೂಡಿಸುವ ಕೆಲಸವನ್ನೂ ಮಾಡಬೇಕು.

ಸ್ವತಃ ಗರ್ಭಿಣಿಯಾಗಿ ನೂರಾರು ಹೆರಿಗೆ ಮಾಡಿಸಿದ ವೈದ್ಯೆ

ಲಾಕ್ ಡೌನ್ ಈ ಸಂದರ್ಭದಲ್ಲಿ ಗ್ರಾಮಕ್ಕೆ ವಾಪಸ್ಸಾದ ಸಾವಿರಾರು ಜನರನ್ನು ಭೇಟಿಯಾಗಿ ಅವರಿಗೆ ಇಲಾಖೆಯ ವತಿಯಿಂದ ತಿಳಿವಳಿಕೆ ನೀಡುವ, ರೆಡ್ ಕ್ರಾಸ್ ಸಂಸ್ಥೆಯಿಂದ ಬಂದ ಮಾಸ್ಕ್ ಹಾಗೂ ಸ್ಯಾನಿಟೈಜರ್‌ಗಳನ್ನು ಸಾರ್ವಜನಿಕರಿಗೆ ವಿತರಿಸುವ ಜೊತೆಗೆ ರಕ್ತನಿಧಿ (ಬ್ಲಡ್ ಬ್ಯಾಂಕ್)ನಲ್ಲೂ ರಕ್ತದ ಕೊರತೆಯಾಗದಂತೆ ರಕ್ತದಾನಿಗಳಿಗೆ ಮನವಿ ಮಾಡಿ ರಕ್ತದಾನಕ್ಕೆ ಪ್ರೇರಣೆ ನೀಡುವಂತಹ ಜವಾಬ್ದಾರಿಯೂ ಡಾ. ರಾಜಾಪೂರ ಅವರ ಹೆಗಲ ಮೇಲಿತ್ತು.

ಹೀಗಿರುವಾಗ, ನಾಲ್ಕೈದು ದಿನಗಳ ಹಿಂದೆ ಡಾ. ರಾಜಾಪೂರ ಅವರ 15 ವರ್ಷದ ಪುತ್ರಿಗೆ ತೀವ್ರ ಜ್ವರ, ಗಂಟಲು ಬೇನೆ ಕಾಡತೊಡಗಿತು. ಮಗಳ ರಕ್ತದಲ್ಲಿನ ಪ್ಲೇಟ್ಲೇಟ್‌ಗಳ ಸಂಖ್ಯೆ 54 ಸಾವಿರಕ್ಕೆ ಇಳಿದು, ಆಕೆಯ ಮೈ ತುಂಬಾ ಗುಳ್ಳೆಗಳು ಮೂಡತೊಡಗಿದವು. ಕೊರೋನಾ ಆತಂಕ ಇಲ್ಲೂ ಸಹ ಎದುರಾಯ್ತು. ಜನರ ಆರೋಗ್ಯ ತಪಾಸಣೆಗೆಂದು ದಿನಕ್ಕೆ ಸಾವಿರಾರು ಜನರ ಭೇಟಿಯಾಗಿ ಬರುವ ಡಾ. ರಾಜಾಪೂರ ಅವರಿಂದ ಸೋಂಕು ತಗುಲಿದೆಯೋ ಎನ್ನುವ ಆತಂಕ ಮನೆಮಂದಿಯಲ್ಲಿ ಕಾಡತೊಡಗಿತು.

ವೈದ್ಯರ ಸಲಹೆ ಮೇರೆಗೆ ಕೊರೋನಾ ಸೋಂಕು ಪರೀಕ್ಷೆಯೂ ನಡೆದು, ಪ್ರಯೋಗಾಲಯದಲ್ಲಿ ವರದಿ ನೆಗೆಟಿವ್ ಬಂತು. ಮಗಳಿಗೆ ಜ್ವರದ ಬಾಧೆ ಮತ್ತಷ್ಟೂ ಕಾಡತೊಡಗಿದ ಆತಂಕ ಒಂದೆಡೆ, ಇನ್ನೊಂದೆಡೆ ಕೊರೋನಾ ಬಾರದಂತೆ ತಡೆಗಟ್ಟಲು ಜಿಲ್ಲೆಯಲ್ಲಿ ಇಲಾಖೆಯಿಂದ ನಡೆಯುತ್ತಿರುವ ಕೆಲಸಗಳಿಗೂ ಅಡ್ಡಿಯಾಗಬಾರದೆಂದು ನಿರ್ಧರಿಸಿದ ಡಾ. ರಾಜಾಪೂರ, ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿ ಅರ್ಧ ದಿನ ರಜೆ ಹಾಕಿ ಕಲಬುರಗಿಗೆ ತೆರಳಿ ಚಿಕಿತ್ಸೆ ನೀಡಿಸಿದರು.

ಅಂದು ರಾತ್ರಿಯೇ ವಾಪಸ್ಸಾದ ಡಾ. ಮರುದಿನ ಎಂದಿನಂತೆ ಡ್ಯೂಟಿಗೆ ಹಾಜರಾದರು. ಸ್ವತಃ ವೈದ್ಯರೂ ಆಗಿರುವ ಡಾ. ರಾಜಾಪೂರ ಅವರ ಪತ್ನಿಗೆ ಪರಿಸ್ಥಿತಿಯ ಅರಿವಿತ್ತು. ಜಿಲ್ಲೆಯಲ್ಲಿ ಕೊರೋನಾ ಬಾರದಂತೆ ಪತಿಯ ಕರ್ತವ್ಯಕ್ಕೆ ಚ್ಯುತಿ ಬಾರದಿರಲಿ ಎಂಬ ಕಾರಣಕ್ಕೆ ಮಗಳ ಆರೋಗ್ಯದ ಕಾಳಜಿ ತಾವು ವಹಿಸುವುದಾಗಿ ಹೇಳಿದರು. ಕೌಟುಂಬಿಕ ಜವಾಬ್ದಾರಿ ಜೊತೆಗೆ ಸಾಮಾನ್ಯ ಜನರ ಆರೋಗ್ಯ ಕಾಳಜಿಯನ್ನೂ ನಿರ್ಲಕ್ಷಿಸದೆ ಕರ್ತವ್ಯನಿಷ್ಠೆ ತೋರಿದ ಡಾ. ರಾಜಾಪೂರ ಅವರ ಕಾರ್ಯ ಶ್ಲಾಘನೀಯ.