ಯಾದಗಿರಿ(ಏ.14): ರೋಗಿಗಳ ಶುಶ್ರೂಷೆಗೆ ಮುಂದಾದ ವೈದ್ಯರನ್ನೂ ಕೊರೋನಾ ಸೋಂಕು ಕಾಡಿದೆ. ಸೋಂಕು ಭೀತಿಯಿಂದಾಗಿ ವೈದ್ಯರನೇಕರು ಸೇವೆ ಸಲ್ಲಿಸಲು ಹಿಂದೇಟು ಹಾಕಿದ್ದ ಪ್ರಕರಣಗಳೂ ಇವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ವೈದ್ಯೆಯೊಬ್ಬರ ಕರ್ತವ್ಯ ನಿಷ್ಠೆ ಶ್ಲಾಘನೀಯಕ್ಕೆ ಪಾತ್ರವಾಗಿದೆ.

ಆರುತಿಂಗಳಗರ್ಭಿಣಿಯಾಗಿದ್ದೂ ಸಹ, ತಮ್ಮ ಹಾಗೂ ಶಿಶುವಿನ ಪ್ರಾಣವನ್ನೇ ಪಣಕ್ಕಿಟ್ಟು, ನೂರಾರು ಹೆರಿಗೆಗಳ ಮಾಡಿಸುವಲ್ಲಿ ವೈದ್ಯ ವೃತ್ತಿಪರತೆ ಮೆರೆದ ಅನೆಸ್ತೆಟಿಸ್ಟ್ ಡಾ. ವೃಂದಾ ಅವರ ಸೇವೆ ನಿಜಕ್ಕೂ ‘ವೈದ್ಯೋ ನಾರಾಯಣ ಹರಿ..’ ಮಾತಿಗೆ ಸಾಕ್ಷಿಯಾದಂತಿದೆ. ಪತಿ ಡಾ. ರಾಮನಗೌಡರದ್ದು ಇಲ್ಲಿನ ಕೋವಿಡ್-೧೯ ವಿಶೇಷ ಆಸ್ಪತ್ರೆಯ ಮೇಲುಸ್ತುವಾರಿ. ಈ ಕ್ಲಿಷ್ಟಕರ ಸಂದರ್ಭದಲ್ಲಿ ವೈದ್ಯ ದಂಪತಿಯ ಮಾದರಿಯೂ ಆಗಿದೆ.

ಲಾಕ್‌ಡೌನ್‌ನಿಂದ ದೇಶಕ್ಕೆ 8 ಲಕ್ಷ ಕೋಟಿ ರು. ನಷ್ಟ!

ಕೋವಿಡ್-೧೯ ಈ ಸಂದರ್ಭದಲ್ಲಿ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ಬರುವವರಿಗೆ ಸೋಂಕು ತಗುಲಿದೆಯೋ ಅಥವಾ ಇಲ್ಲವೋ ಎನ್ನುವ ಯಾವುದೇ ಖಾತರಿ ಇರುವುದಿಲ್ಲ. ಹೀಗಾಗಿ, ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಇಲ್ಲಿ ರಿಸ್ಕೇ ಹೆಚ್ಚು. ಇಂತಹ ಸಮಯದಲ್ಲಿ, ಗರ್ಭದಲ್ಲಿನ ಶಿಶು ಹಾಗೂ ತಮ್ಮ ಆರೋಗ್ಯದ ದೃಷ್ಟಿಯಿಂದ ಡಾ. ವೃಂದಾ ರಜೆ ಪಡೆದು ಮನೆಯಲ್ಲಿ ಆರಾಮವಾಗಿರಬಹುದಾಗಿತ್ತು. ಆದರೆ, ಇಂತಹ ಕ್ಲಿಷ್ಟ ಸಮಯದಲ್ಲೇ ವೈದ್ಯರ ಕೊರತೆಯಿಂದ ರೋಗಿಗಳಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಕರ್ತವ್ಯದ ಕರೆಗೆ ಓಗೊಟ್ಟಿದ್ದಾರೆ.

ಒಂದೆಡೆ ಪತಿ ಡಾ. ರಾಮನಗೌಡ ಕೋವಿಡ್-19 ವಿಶೇಷ ಆಸ್ಪತ್ರೆಯ ನಿಗಾ ವಹಿಸಿದರೆ, ಧೃತಿಗೆಡದ ಡಾ. ವೃಂದಾ ಜಿಲ್ಲಾಸ್ಪತ್ರೆಯಲ್ಲಿ ಎಂದಿನಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.

ಮಾ.೨೪ ರ ಲಾಕ್ ಡೌನ್ ನಂತರ, ಯಾದಗಿರಿ ಜಿಲ್ಲಾಸ್ರತ್ರೆಯಲ್ಲಿ ಈವರೆಗೆ (ಮಾ.26ರಿಂದ ಏ.13) 225ಕ್ಕೂ ಹೆಚ್ಚು ಹೆರಿಗೆಗಳು (ಸಹಜ ಹಾಗೂ ಶಸ್ತ್ರಚಿಕಿತ್ಸೆಯನ್ನೊಳಗೊಂಡ) ಆಗಿವೆ. ಜಿಲ್ಲೆಯ ಶಹಾಪುರ ಹಾಗೂ ಸುರಪುರದಿಂದಲೂ ಹೆರಿಗೆಗಾಗಿ ಜಿಲ್ಲಾಸ್ಪತ್ರೆ ಕದ ತಟ್ಟಿದ ಗರ್ಭಿಣಿಯರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ದಿನವೊಂದಕ್ಕೆ ಏನಿಲ್ಲವೆಂದರೂ 9ರಿಂದ 11 ಹೆರಿಗೆಗಳು ಇಲ್ಲಾಗುತ್ತಿವೆ.
 
ಸರ್ಕಾರಿ ಸೇವೆಯಿಂದ ನಿವೃತ್ತರಾದರೂ ಮತ್ತೇ ಸ್ಟೆತೋಸ್ಕೋಪ್ ಹಿಡಿದಿರುವ 76ವಯಸ್ಸಿನ ಡಾ. ನರಸಮ್ಮ ಅವರ ಸಲಹೆ, ಡಾ. ಪ್ರೀತಿ, ಡಾ. ವೀಣಾ, ಡಾ. ನಾಗಶ್ರೀ, ಸಿಬ್ಬಂದಿಗಳಾದ ಸರೋಜಾ ಅಡಕಿ, ಸಲೋಮಿ, ಸುಜಾತಾ, ಅನಿತಾ, ಸರಸ್ವತಿ, ರೂಬಿನಾ ಬೇಗಂ, ಸಾವಿತ್ರಿ, ದೀನಾ ಬೆಳ್ಳಿ,  ಪದ್ಮಾ, ಮೋನಮ್ಮ, ಸುವರ್ಣ ಸೇರಿದಂತೆ ಡಾ. ವೃಂದಾರಂತಹ ವೈದ್ಯರ ಅವಿರತ ಶ್ರಮ ನೂರಾರು ಜೀವಗಳುಳಿಸಿದೆ.

-ಆನಂದ್ ಎಂ. ಸೌದಿ