Asianet Suvarna News Asianet Suvarna News

ಮಂಗಳೂರು: ಗ್ರಾಪಂಗೆ ವೈದ್ಯನಿಂದ ಉಚಿತ ಇಸಿಜಿ ಯಂತ್ರ..!

* ಪ್ರತಿ ಯಂತ್ರದ ಬೆಲೆ 33 ಸಾವಿರ
* ಗ್ರಾಮಸ್ಥರೇ ಇದನ್ನು ನಿರ್ವಹಿಸುವುದು ವಿಶೇಷ
* 25 ಜಿಲ್ಲೆಗಳ ಆಸ್ಪತ್ರೆಗಳಿಗೆ ಈಗಾಗಲೇ 380 ಇಸಿಜಿ ನೀಡಿರುವ ಕಾಮತ್‌
 

Dr Padmanabh Kamat Donate Free ECG to Grama Panchayats in Dakshina Kannada grg
Author
Bengaluru, First Published Jun 20, 2021, 11:49 AM IST

ಆತ್ಮಭೂಷಣ್‌

ಮಂಗಳೂರು(ಜೂ.20):  ಕುಗ್ರಾಮ ಹಂತಕ್ಕೆ ಇಸಿಜಿ ಯಂತ್ರ ಕೊಡುಗೆ ಮೂಲಕ ಜನಸಾಮಾನ್ಯರ ಜೀವ ಉಳಿಸುವಲ್ಲಿ ಹೊಸ ಆಲೋಚನೆ ಮಾಡಿದ ಕಾರಣಕ್ಕೆ ಪ್ರಧಾನ ಮಂತ್ರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಮಂಗಳೂರಿನ ಪ್ರಸಿದ್ಧ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ ಅವರು ಈಗ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿಗೆ ಉಚಿತ ಇಸಿಜಿ ಯಂತ್ರ ಕೊಡುಗೆ ಆರಂಭಿಸಿದ್ದಾರೆ.

ಜಿಲ್ಲೆಯಲ್ಲಿ 234 ಗ್ರಾಮ ಪಂಚಾಯ್ತಿಗಳಿದ್ದು, ಇಸಿಜಿ ಯಂತ್ರವನ್ನು ಆಪರೇಟ್‌ ಮಾಡುವುದು ಗ್ರಾಮಸ್ಥರೇ ಎನ್ನುವುದು ವಿಶೇಷ. ಈ ಮೂಲಕ ಹಳ್ಳಿಯ ರೋಗಿಗಳು ಮತ್ತು ಪಟ್ಟಣದ ವೈದ್ಯರ ನಡುವಿನ ಅಂತರ ಕಡಿಮೆಗೊಳಿಸುವ ಉದ್ದೇಶವನ್ನು ಕಾಮತ್‌ ಹೊಂದಿದ್ದಾರೆ. ‘ಕ್ಯಾಡ್‌-ಗ್ಯಾಪ್‌’(ಗ್ರಾಮ ಪಂಚಾಯ್ತಿ ಅಂಗನವಾಡಿ ಪ್ರಾಜೆಕ್ಟ್) ಹೆಸರಿನಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ.

ಡಾ.ಪದ್ಮನಾಭ ಕಾಮತ್‌ ಅವರು ರಾಜ್ಯದ 25 ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಿಗೆ 380ಕ್ಕೂ ಅಧಿಕ ಉಚಿತ ಇಸಿಜಿ ಕೊಡುಗೆಯನ್ನು ಇದುವರೆಗೆ ನೀಡಿದ್ದಾರೆ. ಒಂದು ಇಸಿಜಿ ಯಂತ್ರಕ್ಕೆ 33 ಸಾವಿರ ರು. ಬೆಲೆ ಇದೆ. ಸ್ವಂತ ಹಣ, ದಾನಿಗಳ ನೆರವಿನಿಂದ ಈ ವೆಚ್ಚವನ್ನು ಕಾಮತ್‌ ಭರಿಸುತ್ತಿದ್ದಾರೆ.

ಮಂಗಳೂರು ವೈದ್ಯ ಪದ್ಮನಾಭ ಕಾಮತ್‌ ಶ್ಲಾಘಿಸಿದ ಪ್ರಧಾನಿ ಮೋದಿ

ಕೆಲವೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ, ಇದ್ದರೂ ಬೇರೆ ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜವಾಬ್ದಾರಿ ಹೊತ್ತಿದ್ದಾರೆ. ಕೊರೋನಾ ವೇಳೆ ಮುಂಚೂಣಿ ವಾರಿಯರ್ಸ್‌ ಆಗಿರುವ ವೈದ್ಯರಿಗೆ ಬಿಡುವಿಲ್ಲದ ಕೆಲಸ. ಹೀಗಾಗಿ ಹೃದ್ರೋಗದ ಪ್ರಾಥಮಿಕ ತಪಾಸಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಂದರೂ ಯಾರೂ ಸಿಗದ ಪರಿಸ್ಥಿತಿ. ಕೊರೋನಾದಂತಹ ರೋಗ ಮುಂದೆಯೂ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ದೂರಗಾಮಿ ಯೋಚನೆಯಾಗಿ ಡಾ.ಪದ್ಮನಾಭ ಕಾಮತ್‌ ಅವರು ಕಂಡುಕೊಂಡ ಪರಿಹಾರ ಗ್ರಾಮ ಪಂಚಾಯ್ತಿಗಳಿಗೆ ಇಸಿಜಿ ಯಂತ್ರ ನೀಡುವುದು.

ಗ್ರಾಮ ಪಂಚಾಯ್ತಿಗೆ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಿದರೆ, ಹೆಚ್ಚಿನ ಹಳ್ಳಿ ಜನತೆಯನ್ನು ತಲುಪಲು ಸಾಧ್ಯ. ಅದಕ್ಕೆಂದೇ ಗ್ರಾಮ ಪಂಚಾಯ್ತಿಯಲ್ಲಿ ಇಬ್ಬರು ಗ್ರಾಮಸ್ಥರನ್ನು ಆಪರೇಟರ್‌ಗಳನ್ನು ಉಚಿತವಾಗಿ ನಿಯೋಜಿಸಿದರೆ ಸಾಕು. ಅವರಿಗೆ ಇಸಿಜಿ ಆಪರೇಟ್‌ ಮಾಡುವ ತರಬೇತಿ ನೀಡಲಾಗುತ್ತದೆ. ಯಾವುದೇ ಸಮಯದಲ್ಲಿ ತುರ್ತು ಇಸಿಜಿಗೆ ಗ್ರಾಮಸ್ಥರನ್ನು ಸಂಪರ್ಕಿಸಲು ಸುಲಭ. ಈಗಾಗಲೇ ದ.ಕ. ಜಿಲ್ಲೆಯ ಐದು ಗ್ರಾಮ ಪಂಚಾಯ್ತಿಗಳಲ್ಲಿ ಇಸಿಜಿ ಯಂತ್ರವನ್ನು ಅಳವಡಿಸಲಾಗಿದ್ದು, ಶೀಘ್ರವೇ ಇನ್ನೂ 11 ಗ್ರಾ. ಪಂ.ಗಳಲ್ಲಿ ಅಳವಡಿಸಲಿದ್ದಾರೆ. ಮುಂದಿನ ಹಂತದಲ್ಲಿ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಅನುಷ್ಠಾನಗೊಳ್ಳಲಿದೆ.

ಫೋನ್‌ ಮೂಲಕ ಚಿಕಿತ್ಸೆ

ಗ್ರಾಮ ಪಂಚಾಯ್ತಿಗಳಲ್ಲಿ ಇಸಿಜಿ ಮಾಡಿಸಿದ ಬಳಿಕ ಅದರ ವರದಿಯನ್ನು ಮೊಬೈಲ್‌ಗೆ ಅಪ್‌ಲೋಡ್‌ ಮಾಡಿ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಕಳುಹಿಸಿದರೆ ಸಾಕು. ಡಾ.ಪದ್ಮನಾಭ ಕಾಮತ್‌ ಅದನ್ನು ಪರಿಶೀಲಿಸಿ ಪರಿಹಾರ ಸೂಚಿಸುತ್ತಾರೆ. ತುರ್ತು ಸನ್ನಿವೇಶವಾದರೆ, ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಟೆಲಿಮೆಡಿಸಿನ್‌ನ ಈ ವೈದ್ಯಕೀಯ ಸೇವೆ ಜನಪ್ರಿಯಗೊಳ್ಳಲಿದೆ ಮಾತ್ರವಲ್ಲ ಅನಿವಾರ್ಯವೂ ಆಗಲಿದೆ ಎನ್ನುತ್ತಾರೆ ಡಾ.ಪದ್ಮನಾಭ ಕಾಮತ್‌. 

ಈ ಯೋಜನೆ ನನ್ನ ಅಚ್ಚುಮೆಚ್ಚಿನದ್ದು. ಗ್ರಾಮಾಂತರ ಪ್ರದೇಶದ ಜನರ ಬಗ್ಗೆ ಅಪಾರ ಒಲವಿರುವ ನನಗೆ ಅವರ ಬಗ್ಗೆ ಆರೋಗ್ಯದ ದೃಷ್ಟಿಯಲ್ಲಿ ಏನಾದರೂ ಮಾಡಬೇಕು ಎಂಬ ಮಹದಾಸೆ ಇತ್ತು. ಇದೊಂದು ದೂರದೃಷ್ಟಿಯ ಯೋಜನೆ. ನಾವು ಸಫಲರಾದರೆ ಇತಿಹಾಸ ಪುಟದಲ್ಲಿ ಈ ಯೋಜನೆ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದು ಮಂಗಳೂರು ಹೃದ್ರೋಗತಜ್ಞ ಡಾ.ಪದ್ಮನಾಭ ಕಾಮತ್‌ ತಿಳಿಸಿದ್ದಾರೆ. 

ಸಿದ್ಧವಾಗುತ್ತಿದೆ ಹೃತ್ಕುಕ್ಷಿ ಆ್ಯಪ್‌!

ಇಸಿಜಿ ಮಾಡಿಸಿ, ಅದರ ವರದಿಯನ್ನು ಅಪ್‌ಲೋಡ್‌ ಮಾಡಿ ನೇರವಾಗಿ ಸಂವಹನ ನಡೆಸಲು ಅನುಕೂಲವಾಗುವಂತೆ ಹೃತ್ಕುಕ್ಷಿ ಎಂಬ ಆ್ಯಪ್‌ ಸಹ ಸಿದ್ಧವಾಗುತ್ತಿದೆ. ಈ ಆ್ಯಪ್‌ ಮೂಲಕ ರೋಗಿ ವಿಡಿಯೋ ಕರೆ ಅಥವಾ ಆಡಿಯೋ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಬಹುದು. ಹೃದಯ ಸಂಬಂಧಿಸಿ ಕಾಯಿಲೆಗಳಿಗೆ ತಕ್ಷಣಕ್ಕೆ ಏನು ಮಾಡಬೇಕು ಎಂದು ಸಲಹೆ ನೀಡಲು ಸಾಧ್ಯವಾಗಲಿದೆ. ಅಲ್ಲದೆ ಹೃದ್ರೋಗಿಯ ಎಲ್ಲ ವಿವರಗಳು, ಪ್ರಮುಖ ಮಾಹಿತಿಗಳು ಆ್ಯಪ್‌ನಲ್ಲಿ ಅಡಕವಾಗಲಿದೆ.
 

Follow Us:
Download App:
  • android
  • ios