ಬೆಳಗಾವಿ(ಡಿ.27):  ಕೋವ್ಯಾಕ್ಸಿನ್‌ ಲಸಿಕೆಯನ್ನು ಮೂರನೇ ಹಂತದಲ್ಲಿ 1200 ಜನರಿಗೆ ನೀಡಲಾಗಿದ್ದು, ಇದರಲ್ಲಿ ರಾಜಕಾರಣಿಗಳು, ಎಂಜಿನಿಯರ್‌ ಸೇರಿ ಗಣ್ಯರೂ ಇದ್ದಾರೆ ಎಂದು ಕೋವ್ಯಾಕ್ಸಿನ್‌ ಕ್ಲಿನಿಕಲ್‌ ಟ್ರಯಲ್‌ ಮಾಡುತ್ತಿರುವ ಬೆಳಗಾವಿಯ ಜೀವನರೇಖಾ ಆಸ್ಪತ್ರೆಯ ವೈದ್ಯ ಡಾ. ಅಮಿತ ಭಾತೆ ತಿಳಿಸಿದ್ದಾರೆ.

ಮೊದಲ, ಎರಡನೇ ಹಂತದ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಪ್ರತಿಕಾಯ ಶಕ್ತಿ ಹೆಚ್ಚು ಕಂಡುಬಂದಿದೆ. ಪ್ರೋಟೋಕಾಲ್‌ ಪ್ರಕಾರ ನಾವು ಲಸಿಕೆ ನೀಡಿದವರ ಹೆಸರು ಬಹಿರಂಗಪಡಿಸುವಂತಿಲ್ಲ. ನಮ್ಮಲ್ಲಿ ಲಸಿಕೆ ಪಡೆದ ಯಾರಿಗೂ ಅಡ್ಡಪರಿಣಾಮಗಳು ಬೀರಿಲ್ಲ. ಮತ್ತಷ್ಟು ಲಸಿಕೆಗಳನ್ನು ತರಿಸಲಾಗಿದ್ದು, ಈ ಮಾಸಾಂತ್ಯಕ್ಕೆ ಲಸಿಕೆ ನೀಡಲಾಗುತ್ತದೆ. ಕೋವ್ಯಾಕ್ಸಿನ್‌ ಲಸಿಕೆ ರೂಪಾಂತರಗೊಂಡ ವೈರಸ್‌ ಮೇಲೆ ಪರಿಣಾಮ ಬೀರಬಹುದಾಗಿದೆ. ಇನ್ನು ಒಂದು ತಿಂಗಳಲ್ಲಿ ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ ಪೂರ್ಣಗೊಳ್ಳಲಿದೆ. ಮೂರ್ನಾಲ್ಕು ತಿಂಗಳಲ್ಲಿ ಜನರಿಗೆ ಈ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿವೆ ಎಂದರು.

ಕೋವಿಶೀಲ್ಡ್‌ ಭಾರತದ ಮೊದಲ ಕೊರೋನಾ ಲಸಿಕೆ?

ತಿಂಗಳಿಗೊಮ್ಮೆ ಕೋವ್ಯಾಕ್ಸಿನ್‌ ಮೊದಲ ಎರಡು ಹಂತದಲ್ಲಿ ಲಸಿಕೆ ಪಡೆದವರ ರಕ್ತದ ಮಾದರಿ ಪರೀಕ್ಷೆ ಮಾಡಲಾಗುತ್ತಿತ್ತು. ಈಗ ದೂರವಾಣಿ ಮೂಲಕ ಅವರ ಮೇಲೆ ನಿಗಾ ಇಡಲಾಗಿದೆ. ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಕೋವ್ಯಾಕ್ಸಿನ್‌ ಡೆಟಾ ಪಬ್ಲಿಶ್‌ ಆಗುವ ಸಾಧ್ಯತೆಯಿದೆ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.