Asianet Suvarna News Asianet Suvarna News

Gadag| ಹಾಲಕೆರೆಯ ಡಾ. ಅಭಿನವ ಅನ್ನದಾನೇಶ್ವರ ಶ್ರೀಗಳು ಲಿಂಗೈಕ್ಯ

*  ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಶ್ರೀಗಳು ಲಿಂಗೈಕ್ಯ
*  ಇತ್ತೀಚೆಗಷ್ಟೇ ಪೀಠ ಪರಂಪರೆಗೆ ನೂತನ ಪೀಠಾಧಿಪತಿಗಳನ್ನ ನೇಮಕ ಮಾಡಿದ್ದ ಸ್ವಾಮೀಜಿ
*  ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದ ಭಕ್ತರು 
 

Dr Abhinava Annadaneshwara Swamiji Passed Away in Bengaluru grg
Author
Bengaluru, First Published Nov 22, 2021, 9:15 AM IST

ಗದಗ(ನ.22): ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೆರೆಯ ಡಾ.ಅಭಿನವ ಅನ್ನದಾನ ಶ್ರೀಗಳು(Dr Abhinava Annadaneshwara Swamiji) ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಂದು(ಸೋಮವಾರ) ಲಿಂಗೈಕ್ಯರಾಗಿದ್ದಾರೆ. 

ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಶ್ರೀಗಳು ಬೆಂಗಳೂರಿನ(Bengaluru) ಅಪೋಲೋ ಆಸ್ಪತ್ರೆಗೆ(Apollo Hospital) ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಇಂದು ಲಿಂಗೈಕ್ಯರಾಗಿದ್ದಾರೆ(Passed Away) ಎಂದು ತಿಳಿದು ಬಂದಿದೆ.

ಇದೇ ತಿಂಗಳಲ್ಲಿ ಗುರುವಂದನೆ ಹಾಗೂ ತಮ್ಮ ಪೀಠ ಪರಂಪರೆಗೆ ನೂತನ ಪೀಠಾಧಿಪತಿಗಳನ್ನ ನೇಮಕ ಮಾಡಿದ್ದರು ಶ್ರೀಗಳು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಆದಿಯಾಗಿ ನಾಡಿನ 250 ಕ್ಕೂ ಹೆಚ್ಚಿನ ಮಠಾಧೀಶರು ಭಾಗಿಯಾಗಿದ್ದರು. ಡಾ.ಅಭಿನವ ಅನ್ನದಾನ ಶ್ರೀಗಳು ಹಾಲಕೆರೆ ಮಠದ 12 ನೇ ಪೀಠಾಧಿಪತಿಗಳು ಹಾಗೂ ನಾಡಿನ ಐತಿಹಾಸಿಕ ಪ್ರಸಿದ್ಧ ಶಿವಯೋಗ ಮಂದಿರದ(Shivayoga Mandira) ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Heart Attack| ಕನ್ನಡಪ್ರಭ ಕೋಲಾರ ಜಿಲ್ಲಾ ವರದಿಗಾರ ಸತ್ಯರಾಜ್‌ ನಿಧನ

ಲಿಂಗೈಕ್ಯ ಡಾ.ಅಭಿನವ ಅನ್ನದಾನ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿದೆ. ಇಂದು ಬೆಳಗ್ಗೆ ಹೊಸಪೇಟೆ(Hosapete) ಭಾಗದ ಭಕ್ತರ(Devotees) ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಂಜೆಯ ವೇಳೆಗೆ ಗಜೇಂದ್ರಗಡ ತಾಲೂಕಿನ ಹಾಲಕೆರೆ ಗ್ರಾಮಕ್ಕೆ ಶ್ರೀಗಳ ಪಾರ್ಥೀವ ಶರೀರ ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 

ಇಂದು ಸಂಜೆಯಿಂದ ನಾಳೆ ಬೆಳಗಿನ ಜಾವದವರೆಗೆ ಹಾಲಕೆರೆ ಮಠದ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗುವುದು. ನಾಳೆ ಮಧ್ಯಾಹ್ನ 2 ಕ್ಕೆ ಹಾಲಕೆರೆಯ ಮಠದ ಆವರಣದಲ್ಲಿ ಶ್ರೀಗಳ ಅಂತ್ಯಕ್ರಿಯೆ(Funeral) ನೆರವೇರಿಸಲಾಗುವುದು ಎಂದು ಶ್ರೀ ಮಠದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ತ್ರಿವಿಧ ದಾಸೋಹಿ ಸಹ ಆಗಿದ್ದ ಅನ್ನದಾನೇಶ್ವರ ಶ್ರೀಗಳು ನಿಧನಕ್ಕೆ ಭಕ್ತರು ಕಂಬನಿ ಮಿಡಿದಿದ್ದಾರೆ. 

ಶ್ರೀಗಳ ನಿಧನಕ್ಕೆ ಕಾರಜೋಳ ಸಂತಾಪ

ಡಾ. ಅಭಿನವ ಅನ್ನದಾನೇಶ್ವರ ಶ್ರೀಗಳ ನಿಧನಕ್ಕೆ ಸಚಿವ ಗೋವಿಂದ ಕಾರಜೋಳ(Govind Karjol) ಅವರು ಸಂತಾಪ ಸೂಚಿಸಿದ್ದಾರೆ. ಶ್ರೀಗಳು ಕಾಯಕ ಮತ್ತು ದಾಸೋಹದಲ್ಲಿ ಸೇವೆ ಮಾಡಿದ್ದರು. ಅವರ ನಿಧನದಿಂದ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ಬಸವಣ್ಣನವರ ತತ್ವಗಳನ್ನ ಶ್ರೀಗಳು ಪಾಲಿಸುತ್ತಿದ್ದರು. ಅವರ ಅತ್ಮಕೆ ಚಿರಶಾಂತಿ ಸಿಗಲಿ ಎಂದು ಭಯಸುತ್ತೇನೆ. ಶ್ರೀಗಳ ಅಂತಿಮ ದರ್ಶನ ಪಡೆದುಕೊಂಡು ಬರುತ್ತೇನೆ ಅಂತ ತಿಳಿಸಿದ್ದಾರೆ. 

ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದ ಸಿಎಂ ಬೊಮ್ಮಾಯಿ

Dr Abhinava Annadaneshwara Swamiji Passed Away in Bengaluru grg

ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಡಾ. ಸಂಗನಬಸವ ಮಹಾಸ್ವಾಮಿಗಳ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತೀವ್ರ ಸಂತಾಪ ಸೂಚಿಸಿದ್ದಾರೆ. 
ಹೊಸಪೇಟೆ, ಬಳ್ಳಾರಿಯ ಕೊಟ್ಟೂರು ಸ್ವಾಮಿಮಠ, ಶ್ರೀಠದ ಶಿವಯೋಗ ಮಂದಿರದ ಅಧ್ಯಕ್ಷರಾಗಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಕಳೆದ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಹಲವು ದಶಕಗಳ ಕಾಲ ಅವರು ಕನ್ನಡ ನಾಡು, ನುಡಿ, ಲಿಂಗಾಯತ ಧರ್ಮಕ್ಕೆ ಸಲ್ಲಿಸಿದ ಸೇವೆ ಅಪಾರ. ಅವರ ನಿಧನದಿಂದ ಅಪಾರ ಭಕ್ತ ಸಮೂಹ ಅನಾಥವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಅವರ ಭಕ್ತ ಸಮೂಹಕ್ಕೆ ನೀಡಲಿ ಎಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ. 

ಇತ್ತೀಚೆಗಷ್ಟೇ, ಕೆಲವೇ ದಿನಗಳ ಹಿಂದೆ ಹಾಲಕೆರೆ ಮಠದ ಸಮಾರಂಭದಲ್ಲಿ ಭಾಗವಹಿಸಿದ್ದೆ. ಶ್ರೀಗಳ ಆಶೀರ್ವಾದ ಪಡೆದಿದ್ದೆ. ಆದರೆ ಇಷ್ಟು ಬೇಗ ಅವರನ್ನು ಕಳೆದುಕೊಳ್ಳುತ್ತೇವೆ ಎಂಬ ಕಲ್ಪನೆ ಇರಲಿಲ್ಲ. ಅವರ ನಿಧನ ನನಗೆ ವೈಯಕ್ತಿಕವಾಗಿ ಬಹಳ ದುಃಖ ತರಿಸಿದೆ ಎಂದು ಸಿಎಂ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.

ಶ್ರೀಗಳ ಆತ್ಮಕ್ಕೆ ಪರಮಾತ್ಮನು ಶಾಂತಿ ಕರುಣಿಸಲಿ

ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಮುಖ್ಯಸ್ಥರಾಗಿದ್ದ ಡಾ.ಸಂಗನಬಸವ ಮಹಾಸ್ವಾಮಿಗಳ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಕಂಬನಿ ಮಿಡಿದಿದ್ದಾರೆ.
`ದಾಸೋಹ, ಶಿಕ್ಷಣ, ದಮನಿತ ಸಮುದಾಯಗಳ ಶ್ರೇಯೋಭಿವೃದ್ಧಿಗಳನ್ನು ತ್ರಿಕರಣಪೂರ್ವಕವಾಗಿ ಮಾಡುತ್ತಿದ್ದ ಸ್ವಾಮೀಜಿಗಳ ಅಗಲುವಿಕೆಯಿಂದ ಸಮಾಜವು ಸೇವಾ ಮನೋಭಾವದ ಸಂತರೊಬ್ಬರನ್ನು ಕಳೆದುಕೊಂಡಂತಾಗಿದೆ,’ ಎಂದು ಅವರು ತಮ್ಮ ಶೋಕಸಂದೇಶದಲ್ಲಿ ದುಃಖಿಸಿದ್ದಾರೆ.

`ಪೂಜ್ಯರು ನಾಡು, ನುಡಿ ಮತ್ತು ಸಮಾಜದ ಸರ್ವತೋಮುಖ ಏಳ್ಗೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ವ್ಯಕ್ತಿತ್ವವು ಮಾದರಿಯಾಗಿದ್ದು, ದೊಡ್ಡ ಮೇಲ್ಪಂಕ್ತಿಯನ್ನು ಹಾಕಿಕೊಟ್ಟು ಹೋಗಿದ್ದಾರೆ. ಅವರು ತೋರಿಸಿಕೊಟ್ಟ ಹಾದಿಯಲ್ಲಿ ಸಮಾಜವು ಮುನ್ನಡೆಯಬೇಕು,’ ಎಂದು ಸಚಿವರು ಹೇಳಿದ್ದಾರೆ.  ಲಿಂಗೈಕ್ಯ ಸ್ವಾಮೀಜಿಗಳ ಆತ್ಮಕ್ಕೆ ಪರಮಾತ್ಮನು ಶಾಂತಿ ಕರುಣಿಸಿ, ನೋವಿನಲ್ಲಿರುವ ಭಕ್ತರು ಮತ್ತು ಅನುಯಾಯಿಗಳಿಗೆ ಸಮಾಧಾನವನ್ನು ಅನುಗ್ರಹಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Follow Us:
Download App:
  • android
  • ios