ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ, ಮದುವೆಯಾಗಿ 9 ತಿಂಗಳಾಗಿದ್ದ ಎರಡು ತಿಂಗಳ ಗರ್ಭಿಣಿ ಸುನೀತಾ ದೊಡ್ಡಮನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವರದಕ್ಷಿಣೆಗಾಗಿ ಪತಿ ಮತ್ತು ಆತನ ಮನೆಯವರು ನಿರಂತರ ಕಿರುಕುಳ ನೀಡುತ್ತಿದ್ದು, ಇದು ಕೊಲೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮದುವೆಯಾದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಸುನೀತಾ ದೊಡ್ಡಮನಿ (35) ಎಂದು ಗುರುತಿಸಲಾಗಿದ್ದು, ಮದುವೆಯಾಗಿ ಕೇವಲ 9 ತಿಂಗಳು ಅಷ್ಟೇ ಆಗಿದ್ದು, ಇನ್ನೂ ಆತಂಕಕಾರಿಯಾದ ವಿಷಯವೆಂದರೆ, ಸುನೀತಾ ಅವರು ಎರಡು ತಿಂಗಳ ಗರ್ಭಿಣಿಯಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ..
ವರದಕ್ಷಿಣೆಗಾಗಿ ನಿರಂತರ ಕಿರುಕುಳ ಆರೋಪ
ಮೃತ ಸುನೀತಾ ಅವರ ಕುಟುಂಬದವರ ಆರೋಪದ ಪ್ರಕಾರ, ಮದುವೆಯಾದ ದಿನದಿಂದಲೇ ಗಂಡನ ಮನೆವರು ವರದಕ್ಷಿಣೆ ತರುವಂತೆ ಪದೇಪದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ವಿಶೇಷವಾಗಿ ಪತಿ ಗಿರೀಶ ದೊಡ್ಡಮನಿ ಅವರಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದಳು ಎಂದು ಕುಟುಂಬದವರು ದೂರಿದ್ದಾರೆ. ಕಿರುಕುಳ ತಾಳಲಾರದೆ ಸುನೀತಾ ಸಂಕಷ್ಟದಲ್ಲಿದ್ದಳು ಎಂದು ಸಂಬಂಧಿಕರು ಹೇಳಿಕೊಂಡಿದ್ದಾರೆ.
ಕೊಲೆ ಮಾಡಿ ನೇಣು ಹಾಕಿರುವ ಶಂಕೆ
ಸುನೀತಾ ಅವರ ಸಾವು ಸಹಜವಲ್ಲ, ಅವರನ್ನು ಕೊಲೆ ಮಾಡಿ ಬಳಿಕ ನೇಣು ಹಾಕಲಾಗಿದೆ ಎಂಬ ಗಂಭೀರ ಆರೋಪವನ್ನು ಮೃತಳ ಕುಟುಂಬದವರು ಮಾಡಿದ್ದಾರೆ. ಗಂಡನ ಮನೆಯಲ್ಲಿ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ವರದಕ್ಷಿಣೆ ಕಿರುಕುಳವೇ ಈ ಸಾವಿಗೆ ಕಾರಣ ಎಂದು ತನಿಖೆಗೆ ಕುಟುಂಬದವರು ಪಟ್ಟು ಹಿಡಿದಿದ್ದಾರೆ. ಮಾತ್ರವಲ್ಲ ಆಕೆಯ ಕುತ್ತಿಗೆ ಭಾಗದಲ್ಲಿ ಅನುಮಾನ ಬರುವ ಗುರುತುಗಳು ಕಾಣಿಸಿಕೊಂಡಿದೆ.
ಪೊಲೀಸ್ ಠಾಣೆ ಮುಂದೆ ಧರಣಿ
ಈ ಘಟನೆಗೆ ಸಂಬಂಧಿಸಿ ನ್ಯಾಯಕ್ಕಾಗಿ ಆಗ್ರಹಿಸಿ ಮೃತಳ ಕುಟುಂಬದವರು ಶಿಗ್ಗಾವಿ ಪೊಲೀಸ್ ಠಾಣೆ ಎದುರು ಧರಣಿ ಕುಳಿತರು. ಆರೋಪಿಗಳನ್ನೆಲ್ಲ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸರನ್ನು ಒತ್ತಾಯಿಸಿದರು. ಧರಣಿಯ ವೇಳೆ ಶಿಗ್ಗಾವಿಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸ್ ಕ್ರಮ
ಘಟನೆಗೆ ಸಂಬಂಧಿಸಿ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪ, ಗರ್ಭಿಣಿ ಮಹಿಳೆಯ ಸಾವು ಮತ್ತು ಕುಟುಂಬದವರ ಗಂಭೀರ ಆರೋಪಗಳು ಪ್ರಕರಣಕ್ಕೆ ತೀವ್ರತೆ ತಂದಿದ್ದು, ತನಿಖೆಯ ಫಲಿತಾಂಶದತ್ತ ಸಾರ್ವಜನಿಕರ ಗಮನ ನೆಟ್ಟಿದೆ. ವರದಕ್ಷಿಣೆ ಕಿರುಕುಳ ಎಂಬ ಸಾಮಾಜಿಕ ಅನಿಷ್ಟದ ವಿರುದ್ಧ ಕಠಿಣ ಕ್ರಮಗಳ ಅಗತ್ಯವಿದೆ.


