ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ, ಮಂಡ್ಯ ಜಿಲ್ಲೆಯಾದ್ಯಂತ ತಮ್ಮ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಅವರು ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಫ್ಲೆಕ್ಸ್ ಹಾಕುವುದು ಸರಿಯಲ್ಲ ಎಂದಿದ್ದಾರೆ.

ಮಂಡ್ಯ (ಮಾ.22): ಯುಗಾದಿ, ರಂಜಾನ್ ಹಬ್ಬಗಳ ಹಿನ್ನೆಲೆ ಅಭಿಮಾನಿಗಳಿಂದ ಜಿಲ್ಲೆಯ ವಿವಿಧೆಡೆ ತಮ್ಮ ಭಾವಚಿತ್ರವಿರುವ ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ರಾರಾಜಿಸುತ್ತಿರುವ ಬೆನ್ನಲ್ಲೇ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಶೋಭಾರಾಣಿ ಅವರು ತಮ್ಮ ಭಾವಚಿತ್ರವಿರುವ ಫ್ಲೆಕ್ಸ್ ಹಾಕದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಮಾಧ್ಯಮಗಳ ವರದಿಗೆ ಎಸ್‌ಪಿ ಸ್ಪಂದನೆ

ಇತ್ತೀಚೆಗೆ ಹಬ್ಬಗಳ ಹಿನ್ನೆಲೆಯಲ್ಲಿ ಎಸ್‌ಪಿ ಶೋಭಾರಾಣಿ ಅವರ ಫೋಟೋ ಬಳಸಿ ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಈ ಕುರಿತು ನಿನ್ನೆಯಷ್ಟೇ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿ ಸಾರ್ವಜನಿಕರ ಚರ್ಚೆಗೆ ಕಾರಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಅವರು ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ.

ಪ್ಲೆಕ್ಸ್ ಹಾಕೋದು ಸರಿಯಲ್ಲ ಎಂದ ಎಸ್‌ಪಿ

ನನ್ನ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಅಳವಡಿಸಿರುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಸುವುದು ಸರಿಯಲ್ಲ. ದಯವಿಟ್ಟು ನನ್ನ ಭಾವಚಿತ್ರವನ್ನು ಯಾವುದೇ ಪ್ಲೆಕ್ಸ್, ಬ್ಯಾನರ್ ಅಥವಾ ಪ್ರಚಾರ ಕಾರ್ಯಗಳಲ್ಲಿ ಬಳಸಬೇಡಿ' ಎಂದು ಡಾ. ಶೋಭಾರಾಣಿ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.

ಕಾನೂನು ಗೌರವಕ್ಕೆ ಆದ್ಯತೆ ನೀಡಿ

ತಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಕೋರಿರುವ ಎಸ್‌ಪಿ ಅವರು, ಕಾನೂನು ಪಾಲನೆ ಮಾಡುವುದು ಮತ್ತು ವೈಯಕ್ತಿಕ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದ್ದರಿಂದ ಇನ್ಮುಂದೆ ಫೋಟೋ ಬಳಸಿಕೊಂಡು ಇಂತಹ ಯಾವುದೇ ಪ್ರಚಾರ ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.