Asianet Suvarna News Asianet Suvarna News

ಫ್ಲೆಕ್ಸ್‌, ಬ್ಯಾನರ್‌ ಹಾಕಿದ್ರೆ ಕ್ರಿಮಿನಲ್‌ ಕೇಸ್‌: BBMP Commissioner ಖಡಕ್ ಸೂಚನೆ

ಬಿಬಿಎಂಪಿ ವಲಯದಲ್ಲಿ  ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ನಿಷೇಧಿಸಲಾಗಿದ್ದು, ನಿಯಮ ಮೀರಿ ಅಳವಡಿಕೆ ಮಾಡುವವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ  ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಖಡಕ್‌ ಸೂಚನೆ ನೀಡಿದ್ದಾರೆ.

Criminal case against those who installing banners flexes in  BBMP limits gow
Author
Bengaluru, First Published Jul 23, 2022, 10:09 PM IST

ಬೆಂಗಳೂರು (ಜು.23): ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ನಿಷೇಧಿಸಲಾಗಿದ್ದು, ನಿಯಮ ಮೀರಿ ಅಳವಡಿಕೆ ಮಾಡುವವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ ವಲಯ ಜಂಟಿ ಆಯುಕ್ತರಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಖಡಕ್‌ ಸೂಚನೆ ನೀಡಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರು ಶುಕ್ರವಾರ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಡಿ ದಾಸರಹಳ್ಳಿ ವಲಯ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ಮಾಡಲಾಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ನಗರದ ಸಾರ್ವಜನಿಕ ಸ್ಥಳದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ಮಾಡದಂತೆ ಹೈಕೋರ್ಚ್‌ ನಿರ್ದೇಶಿಸಿದ್ದು, ಯಾವುದೇ ಕಾರಣಕ್ಕೂ ಫ್ಲೆಕ್ಸ್‌ ಬ್ಯಾನರ್‌ ಅಳವಡಿಕೆಗೆ ಅವಕಾಶ ನೀಡಬಾರದು. ನಿಯಮ ಉಲ್ಲಂಘಿಸಿ ಫ್ಲೆಕ್ಸ್‌ ಬ್ಯಾನರ್‌ ಅಳವಡಿಸಿದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಹಾಗೂ ಫ್ಲೆಕ್ಸ್‌ ಬ್ಯಾನರ್‌ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆಯ ಎಂಟು ವಲಯ ಜಂಟಿ ಆಯುಕ್ತರಿಗೆ ಸೂಚಿಸಿದ್ದಾರೆ.

ನಗರದ ಮ್ಯಾನುಯಲ್‌ ಸ್ಕ್ಯಾ‌ವೆಂಜರ್ಸ್‌ಗಳಿಗೆ ಗುರುತಿಸಿ ಚೀಟಿ ನೀಡಲಾಗುತ್ತಿದ್ದು, ಜೀವನೋಪಾಯಕ್ಕೆ ತಲಾ .40 ಸಾವಿರ ಸಾಲ ನೀಡಲಾಗುತ್ತಿದೆ. ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಪಾಲಿಕೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಿಗೆ ಸೂಚಿಸಿದರು.

ಇನ್ನು ಶೆಟ್ಟಹಳ್ಳಿ ವಾರ್ಡ್‌ನ ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಮಾಡಿಸಿ, ಹೆಸರಘಟ್ಟಮುಖ್ಯ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದು ಆಳಾಗಿದೆ. ಶಿವಪುರದಲ್ಲಿ ರಸ್ತೆ ಒತ್ತುವರಿ ತೆರವು ಮಾಡಿ, ರಾಜಕಾಲುವೆಯಿಂದ ತೆಗೆದ ಹೂಳನ್ನು ರಸ್ತೆ ಬದಿ ಬಿಡಲಾಗಿದೆ. ರಾಯಲ್‌ ಎನ್‌ ಕ್ಲೆವ್‌ ಪ್ರದೇಶದಲ್ಲಿ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿ ಸೇರಿದಂತೆ ಮೊದಲಾದ ಮನವಿಗಳನ್ನು ಸಾರ್ವಜನಿಕರು ಮುಖ್ಯ ಆಯುಕ್ತರಿಗೆ ಸಲ್ಲಿಸಿದರು.

ಈ ವೇಳೆ ವಲಯ ಆಯುಕ್ತ ಡಾ. ರಾಮ್‌ ಪ್ರಸಾತ್‌ ಮನೋಹರ್‌, ವಲಯ ಜಂಟಿ ಆಯುಕ್ತ ಜಗದೀಶ್‌, ವಲಯ ಉಪ ಆಯುಕ್ತೆ ರಮಾಮಣಿ, ವಲಯ ಮುಖ್ಯ ಅಭಿಯಂತರ ವಿಶ್ವನಾಥ್‌ ಉಪಸ್ಥಿತರಿದ್ದರು.

ರಸ್ತೆ ಗುಂಡಿ ಪರಿಶೀಲಿಸಿ ಬನ್ನಿ ಹೋಗಿ: ಬಾಗಲಗುಂಟೆ ವಾರ್ಡ್‌ನಲ್ಲಿ ಕೆಲ ದಿನಗಳ ಹಿಂದೆ ಡಾಂಬರೀಕರಣ ಮಾಡಿದ ರಸ್ತೆಯಲ್ಲಿ ಮತ್ತೆ ಗುಂಡಿ ಸೃಷ್ಟಿಯಾಗಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಜಂಟಿ ಆಯುಕ್ತ ಜಗದೀಶ್‌ಗೆ ಕೂಡಲೇ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಮಾಹಿತಿ ನೀಡುವಂತೆ ನಿರ್ದೇಶಿಸಿದರು. ಪರಿಶೀಲಿಸಿ ವಾಪಾಸ್‌ ಆಗಮಿಸಿದ ಜಂಟಿ ಆಯುಕ್ತರು, ಕೆಲವು ಕಡೆ ಗುಂಡಿ ಬಿದ್ದಿರುವುದು ನಿಜ. ದುರಸ್ತಿ ಮಾಡಿಸುವಂತೆ ವಾರ್ಡ್‌ ಎಂಜಿನಿಯರ್‌ಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬ್ಯಾನರ್‌ ಬ್ಯಾನ್‌ಗೆ ಕೈಗೊಂಡ ಕ್ರಮಗಳ ವರದಿ ನೀಡಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ನಗರದ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್‌, ಹೋರ್ಡಿಂಗ್‌ ಹಾಗೂ ಬ್ಯಾನರ್‌ಗಳ ಪ್ರದರ್ಶನಕ್ಕೆ ನಿಷೇಧ ವಿಧಿಸುವ ವಿಚಾರದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಚ್‌ ನಿರ್ದೇಶಿಸಿದೆ.

ನಗರದಲ್ಲಿನ ಅನಧಿಕೃತ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳ ಹಾವಳಿಯನ್ನು ಆಕ್ಷೇಪಿಸಿ ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ನೇತೃತ್ವದ ನ್ಯಾಯಪೀಠ ಈ ಸೂಚನೆ ನೀಡಿತು.

ಅನಧಿಕೃತ ಜಾಹೀರಾತುಗಳ ಪ್ರದರ್ಶನ ಅತ್ಯಂತ ಗಂಭೀರ ವಿಚಾರವಾಗಿದೆ. ಆದರೆ, ಈ ಬಗ್ಗೆ ಬಿಬಿಎಂಪಿ ಸೂಕ್ತ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಅನಧಿಕೃತ ಫ್ಲೆಕ್ಸ್‌, ಹೋರ್ಡಿಂಗ್‌ ಹಾಗೂ ಬ್ಯಾನರ್‌ ಪ್ರದರ್ಶನದ ನಿಷೇಧಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಬಿಬಿಎಂಪಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ನಿರ್ದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್‌.ಮೋಹನ್‌, ಪಾಲಿಕೆ ಎಲ್ಲ ಬಗೆಯ ಜಾಹೀರಾತುಗಳನ್ನು ನಿಷೇಧವಿದೆ. ಆದರೆ, ವಿಧಾನಸೌಧದ ಸುತ್ತಮುತ್ತಾ ಜನಪ್ರತಿನಿಧಿಗಳ ಫ್ಲೆಕ್ಸ್‌, ಬ್ಯಾನರ್‌ ಹಾಕಲಾಗಿದೆ. ಈ ಬಗ್ಗೆ ಬಿಬಿಎಂಪಿ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಬಿಬಿಎಂಪಿ ಪರ ವಕೀಲರು ಉತ್ತರಿಸಿ, ಅನಧಿಕೃತ ಜಾಹೀರಾತು ನಿಷೇಧ ಜಾರಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ವರದಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.b

Follow Us:
Download App:
  • android
  • ios