ನಿಫಾ ವೈರಸ್‌ ಬಗ್ಗೆ ಯಾವುದೇ ರೀತಿಯ ಆತಂಕ, ಭಯ ಬೇಡ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಜಿಲ್ಲೆಯ ಜನರಿಗೆ ಮನವಿ

ಮಂಗಳೂರು (ಸೆ.15): ನಿಫಾ ವೈರಸ್‌ ಬಗ್ಗೆ ಯಾವುದೇ ರೀತಿಯ ಆತಂಕ, ಭಯ ಬೇಡ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಜಿಲ್ಲೆಯ ಜನರಿಗೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ನಿಫಾ ಶಂಕೆಯಿಂದ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಈಗಾಗಲೇ ಆಸ್ಪತ್ರೆ ಸೇರಿರುವ ಕಾರವಾರ ಮೂಲದ ವ್ಯಕ್ತಿ ನಿಫಾ ಭೀತಿಗೆ ಒಳಗಾಗಿದ್ದಾರೆ. ಅವರಿಗೆ ಕೌನ್ಸೆಲಿಂಗ್‌ ನೀಡಲಾಗುತ್ತಿದ್ದು, ನಿಗಾದಲ್ಲಿ ಇರಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾರವಾರ ಮೂಲದ, ಗೋವಾದಲ್ಲಿ ಆರ್‌ಟಿಪಿಸಿಆರ್‌ ಕಿಟ್‌ ತಯಾರಿಸುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 25ರ ಹರೆಯದ ವ್ಯಕ್ತಿಗೆ ಜ್ವರ, ಹೃದಯ ಬಡಿತದಲ್ಲಿ ಏರಿಳಿತ ಹಾಗೂ ತಲೆನೋವು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ನಿಫಾದ ಲಕ್ಷಣ ಇರಬಹುದು ಎಂಬ ಶಂಕೆಯಲ್ಲಿ ಆತ ಕಾರವಾರದಲ್ಲಿ ಆಸ್ರತ್ರೆಗೆ ಖುದ್ದು ದಾಖಲಾಗಿದ್ದ. ಬಳಿಕ ಅಲ್ಲಿಂದ ಮಣಿಪಾಲ ಆಸ್ಪತ್ರೆಯಿಂದ ಸದ್ಯ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆ ವ್ಯಕ್ತಿಯಲ್ಲಿ ಯಾವುದೇ ರೀತಿಯ ನಿಫಾ ಲಕ್ಷಣಗಳು ಕಂಡು ಬಂದಿಲ್ಲ. ಹಾಗಿದ್ದರೂ ಆತನ ರಕ್ತ, ಗಂಟಲು ದ್ರವ ಹಾಗೂ ಯೂರಿನ್‌ ಮಾದರಿಯನ್ನು ತಪಾಸಣೆಗಾಗಿ ಬೆಂಗಳೂರಿನಿಂದ ಪುಣೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಕರುನಾಡಿಗೆ ವಕ್ಕರಿಸಿತಾ ಡೆಡ್ಲಿ ನಿಫಾ : ಕಾರವಾರದ ಯುವಕನಲ್ಲಿ ರೋಗ ಲಕ್ಷಣ

ನಿಫಾಕ್ಕೆ ಸಂಬಂಧಿಸಿ ಆ ವ್ಯಕ್ತಿ ಎಲ್ಲಿಯೂ ಯಾರದ್ದೇ ಸಂಪರ್ಕಕ್ಕೆ ಬಂದಿಲ್ಲ. ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಆತ ಹಬ್ಬಕ್ಕಾಗಿ ಕಾರವಾರದಲ್ಲಿ ತನ್ನ ಮನೆಗೆ ಬೈಕ್‌ನಲ್ಲಿ ಬಂದ ವೇಳೆ ಮಳೆಯಲ್ಲಿ ನೆನೆದು ರಾತ್ರಿ ಜ್ವರದ ಬಂದಿತ್ತು. ಈ ಬಗ್ಗೆ ಗೂಗಲ್‌ನಲ್ಲಿ ಆತ ಹುಡುಕಾಡಿದಾಗ ಇದು ನಿಫಾದ ಲಕ್ಷಣವಿರಬಹುದೇನೋ ಎಂಬ ಆತಂಕದಿಂದ ಆಸ್ಪತ್ರೆಗೆ ದಾಖಲಾಗಿದ್ದ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸ್ಪಷ್ಟಪಡಿಸಿದರು.

ಆತನನ್ನು ಆಸ್ಪತ್ರೆಯ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅಲ್ಲದೆ ಆತನಿಗೆ ಕೌನ್ಸೆಲಿಂಗ್‌ ಕೂಡ ನೀಡಲಾಗುತ್ತಿದೆ. ಇದು ಶಂಕಿತ ನಿಫಾ ಕೂಡ ಅಲ್ಲದ ಕಾರಣ ಯಾರೂ ಭೀತಿಪಡಬೇಕಾಗಿಲ್ಲ. ಆತನ ಸ್ಯಾಂಪಲ್‌ ಪರೀಕ್ಷಾ ವರದಿ 48 ಗಂಟೆ ಒಳಗೆ ಕೈಸೇರುವ ನಿರೀಕ್ಷೆ ಇದೆ ಎಂದರು.

ವಾರಾಂತ್ಯ ದೇವಸ್ಥಾನ ನಿರ್ಬಂಧ ತೆರವು-ಈ ವಾರ ತೀರ್ಮಾನ

ವಾರಾಂತ್ಯ ಕರ್ಫ್ಯೂ ಇಲ್ಲದಿದ್ದರೂ ಜಿಲ್ಲೆಯ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಶನಿವಾರ ಮತ್ತು ಭಾನುವಾರ ಸೇವೆ ಹಾಗೂ ದೇವರ ದರ್ಶನಕ್ಕೆ ನಿರ್ಬಂಧ ಮುಂದುವರಿದಿದೆ. ಈ ಬಗ್ಗೆ ದೇವಸ್ಥಾನಗಳ ಆಡಳಿತ ಹಾಗೂ ಧಾರ್ಮಿಕ ಪರಿಷತ್ತಿನ ಪದಾಧಿಕಾರಿಗಳ ಸಭೆಯನ್ನು ಕರೆದು ತೀರ್ಮಾನಿಸಲಾಗುವುದು. ಮುಂದಿನ ದಿನಗಳಲ್ಲಿ ಈ ದೇವಸ್ಥಾನಗಳಲ್ಲಿ ಯಾವ ರೀತಿ ದೇವರ ದರ್ಶನ ಹಾಗೂ ಸೇವೆಗೆ ಅವಕಾಶ ಕಲ್ಪಿಸಬಹುದು ಎಂಬುದನ್ನು ಈ ವಾರಾಂತ್ಯದೊಳಗೆ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ಅಂತಿಮ ಪದವಿ ತರಗತಿ ಆರಂಭಿಸುವ ಕುರಿತಂತೆ ವಿವಿ ಕುಲಪತಿ ಹಾಗೂ ಕಾಲೇಜು ಇಲಾಖೆಯ ಜಂಟಿ ನಿರ್ದೇಶಕರ ಜೊತೆ ಸಮಾಲೋಚನೆ ನಡೆಸಿ ತೀರ್ಮಾನಿಸಲಾಗುವುದು. ಕಾಲೇಜು ವಿದ್ಯಾರ್ಥಿಗಳು ಈಗಾಗಲೇ ಕನಿಷ್ಠ ಮೊದಲ ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವುದರಿಂದ ಹಾಗೂ ಅವರ ಭವಿಷ್ಯದ ದೃಷ್ಟಿಯಿಂದ ಅಂತಿಮ ಪದವಿ ಆರಂಭಿಸುವಂತೆ ಒತ್ತಾಯ ಕೇಳಿಬಂದಿದೆ.

-ಡಾ.ರಾಜೇಂದ್ರ, ಜಿಲ್ಲಾಧಿಕಾರಿ, ದ.ಕ.