ಬೆಂಗಳೂರು(ಜು.24): ಗುತ್ತಿಗೆ ವೈದ್ಯರ ಬೇಡಿಕೆ ಈಡೇರಿಸಿದ ಬೆನ್ನಲ್ಲೇ ಈಗ ರಾಜ್ಯ ಸರ್ಕಾರಿ ವೈದ್ಯರು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌) ವೇತನ ಶ್ರೇಣಿ ಅಳವಡಿಕೆ ಸೇರಿದಂತೆ ತಮ್ಮ ಆರು ಬೇಡಿಕೆಗಳನ್ನು ಆಗಸ್ಟ್‌ 16ರೊಳಗೆ ಈಡೇರಿಸದಿದ್ದರೆ ಹಂತ ಹಂತವಾಗಿ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಗುರುವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯ 6200 ಮಂಜೂರಾದ ಹುದ್ದೆಗಳ ಪೈಕಿ 4968 ವೈದ್ಯರು ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದಾರೆ.

ಹೊಸ ಕೈಗಾರಿಕಾ ನೀತಿಗೆ ಅಸ್ತು: 5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ

ರಾಜ್ಯದಲ್ಲಿ ಯಶಸ್ವಿಯಾಗಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ, ಜೀವದ ಹಂಗು ತೊರೆದು ಕೊರೋನಾ ವಿಷಯದಲ್ಲಿ ಜೀವರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌) ಮಾದರಿಯ ವೇತನ ಶ್ರೇಣಿಯನ್ನು ಕೂಡಲೇ ಅಳವಡಿಸಬೇಕೆಂದು ಆಗ್ರಹಿಸಿದೆ.

ಬಿಬಿಎಂಪಿಗೆ ವಹಿಸಿರುವ ಆರೋಗ್ಯ ಇಲಾಖೆಯ 63 ಆಸ್ಪತ್ರೆಗಳ ನಿರ್ವಹಣೆಯನ್ನು ವಾಪಸ್‌ ಪಡೆಯಬೇಕು. ಕೋವಿಡ್‌ ನಿಯಂತ್ರಣ ಕರ್ತವ್ಯದಲ್ಲಿದ್ದಾಗ ಮೃತಪಟ್ಟವಿವಿಧ ಜಿಲ್ಲೆಗಳ ವೈದ್ಯಾಧಿಕಾರಿಗಳಾದ ಡಾ.ಅನಿಲ್‌, ಡಾ.ಶಿವಕಿರಣ್‌, ಡಾ.ಬಸವರಾಜ್‌ ಕರಿಗೌಡರ್‌ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು.

ಶೇ.30 ಪಠ್ಯ ಕಡಿತದ ಬಗ್ಗೆ ವಾರದಲ್ಲಿ ಆದೇಶ..!

ಸೇವೆಯಲ್ಲಿರುವ ವೈದ್ಯರಿಗೆ ಸೋಂಕು ತಗುಲಿದರೆ ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಾಯ್ದಿರಿಸಿ ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ಚಿಕಿತ್ಸೆ ಒದಗಿಸಬೇಕು. ವೈದ್ಯರ ಜೊತೆ ಅನುಚಿತವಾಗಿ ವರ್ತಿಸಿದ ಬೀದರ್‌ ಜಿಲ್ಲಾಧಿಕಾರಿ ವರ್ಗಾವಣೆ ಮಾಡಬೇಕು. ಹಾಗೂ ಡಾ. ಬಿ.ಸಿ.ರಾಯ್‌ ಸ್ಮರಣಾರ್ಥವಾಗಿ ಪ್ರತಿ ವರ್ಷದಂತೆ ಈ ವರ್ಷವೂ ವೈದ್ಯರ ದಿನಾಚರಣೆಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಬೇಡಿಕೆಗಳನ್ನು ಆ.16ರೊಳಗೆ ಈಡೇರಿಸದಿದ್ದರೆ ಮೊದಲ ಹಂತವಾಗಿ ಕಪ್ಪು ಪಟ್ಟಿಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತೇವೆ. ನಂತರದ ದಿನಗಳಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುತ್ತೇವೆ. ಸರ್ಕಾರ ಆಗಲೂ ಮಣಿಯದಿದ್ದರೆ ವೈದ್ಯರು ಸಂಪೂರ್ಣ ಆರೋಗ್ಯ ಸೇವೆ ಸ್ಥಗಿತಗೊಳಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ.ಜಿ.ಎ.ಶ್ರೀನಿವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- ಕೇಂದ್ರ ಸರ್ಕಾರದ ವೇತನ ಶ್ರೇಣಿಗೆ ಆಗ್ರಹ

- ವೈದ್ಯರ ಜತೆಗೆ ಅನುಚಿತ ವರ್ತನೆ ನಿಲ್ಲಬೇಕು

- 6 ಬೇಡಿಕೆಗಳ ಈಡೇರಿಕೆಗೆ ಆ.16ರ ಗಡುವು