ಬೆಂಗಳೂರು(ಜು.24): ಕೇಂದ್ರ ಪಠ್ಯಕ್ರಮದ ಸಿಬಿಎಸ್‌ಇ ಮಾದರಿಯಲ್ಲಿ ರಾಜ್ಯದಲ್ಲಿಯೂ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶೇ.30ರಷ್ಟುಪಠ್ಯವನ್ನು ಕಡಿತ ಮಾಡಿ ಇನ್ನೊಂದು ವಾರದಲ್ಲಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಈ ಬಗೆಗಿನ ತಜ್ಞರ ಸಮಿತಿ ಸೂಚನೆಯಂತೆ ಪುನರಾವರ್ತಿತ ಪಾಠಗಳನ್ನು ಕಡಿತಗೊಳಿಸಿ ‘ಕರ್ನಾಟಕ ಪಠ್ಯಪುಸ್ತಕ ಸಂಘ’ ಶಿಕ್ಷಣ ಇಲಾಖೆಗೆ ಕಳುಹಿಸಿದೆ. ಹತ್ತು ವರ್ಷದ ಕಲಿಕೆಯಲ್ಲಿ ಒಂದು ವಿಷಯವನ್ನು ಒಂದು ಬಾರಿ ಮಾತ್ರ ಕಲಿಯುವ ರೀತಿಯಲ್ಲಿ ಪಾಠಗಳನ್ನು ಕಡಿತ ಮಾಡಲಾಗಿದೆ. ಕಡಿತ ಮಾಡಿರುವ ಪಾಠಗಳ ವಿವರವನ್ನು ವಾರದೊಳಗೆ ಇಲಾಖೆ ಅಧಿಕೃತವಾಗಿ ಪ್ರಕಟಿಸಲಿದೆ ಎಂದು ಮೂಲಗಳು ಹೇಳಿವೆ.

ತನ್ನನ್ನು ಕೊಲ್ಲಲು ಯತ್ನಿಸಿದ ತಂದೆಯನ್ನೇ ಕೊಂದ 15 ವರ್ಷದ ಬಾಲಕಿ..!

ಕೊರೋನಾ ಸೋಂಕಿನ ಪರಿಣಾಮ ಜೂನ್‌ ತಿಂಗಳಿನಲ್ಲಿ ಆರಂಭವಾಗಬೇಕಿರುವ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಈಗಾಗಲೇ ಎರಡು ತಿಂಗಳು ಮುಗಿದಿದ್ದು, ಇನ್ನೂ ಕನಿಷ್ಠ ಎರಡು ತಿಂಗಳು ಶಾಲೆಗಳು ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ ಶೇ.30ರಷ್ಟುಪಾಠಗಳನ್ನು ಕಡಿತ ಮಾಡಲಾಗಿದೆ ಎಂದು ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ತಿಳಿಸಿದ್ದಾರೆ.

ಪಠ್ಯಪುಸ್ತಕ ರಚನೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಣ ತಜ್ಞರು, ಶಿಕ್ಷಕರು ಹಾಗೂ ಪ್ರಾಧ್ಯಾಪಕರು ನೀಡಿರುವ ವರದಿಯನ್ನು ಇಲಾಖೆ ಆಯುಕ್ತರಿಗೆ ಕಳುಹಿಸಲಾಗಿದೆ. ಅಂತಿಮವಾಗಿ ಸರ್ಕಾರವೇ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಮಂಡಳಿ ಕೂಡ ಭಾಗಿ:

ಎಸ್‌ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಪರೀಕ್ಷಾ ಮಂಡಳಿ ಜೊತೆ ಚರ್ಚಿಸಿ ಸಮನ್ವಯ ಸಾಧಿಸಬೇಕಾಗಿದೆ. ಪ್ರಮುಖವಾಗಿ ಪ್ರಶ್ನೆಗಳನ್ನು ಕೇಳುವ ಹಾಗೂ ಕಲಿಯಲೇಬೇಕಿರುವ ವಿಷಯಗಳನ್ನು ಆಧರಿಸಿ ಉಳಿದ ವಿಷಯಗಳಿಗೆ ಕತ್ತರಿ ಬೀಳಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.