Asianet Suvarna News Asianet Suvarna News

ಬೀದರ್‌ನಲ್ಲಿ ವೈದ್ಯರಿಂದಲೇ ರೆಮ್‌ಡಿಸಿವಿರ್‌ ದುಪ್ಪಟ್ಟು ದರಕ್ಕೆ ಮಾರಾಟ?

ಇಬ್ಬರು ಆರೋಪಿಗಳ ಬಂಧನ| ಬೀದರ್‌ನ ವಿಜಯಾ ಆಸ್ಪತ್ರೆಯಿಂದ ಇಂಜಕ್ಷನ್‌ ತಂದು ದುಪ್ಪಟ್ಟು ದರಕ್ಕೆ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಮಾರಾಟಕ್ಕೆ ಯತ್ನ| ಆಸ್ಪತ್ರೆಯ ಮಾಲೀಕರಿಂದಲೇ ಮಾರಾಟಕ್ಕೆ ಸೂಚನೆ| ದುಪ್ಪಟ್ಟು ದರಕ್ಕೆ ಮಾರಿ ಬಂದು ಲಾಭದ ಹಣವನ್ನು ನೀಡುವಂತೆ ಸೂಚನೆ| ಯಶಸ್ವಿ ಕಾರ್ಯಾಚರಣೆ ಮಾಡಿದ ಪೊಲೀಸರ ತಂಡ| 

Doctors Illegally Sell Remdesivir in Bidar grg
Author
Bengaluru, First Published May 8, 2021, 8:29 AM IST

ಬೀದರ್‌(ಮೇ.08): ಜನರ ಜೀವ ಉಳಿಸುವಂತಹ ಔಷಧಿಯಾದ ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗಳನ್ನು ಕಾಳಸಂತೆಯಲ್ಲಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ವೈದ್ಯರಿಂದಲೇ ರೆಮ್‌ಡಿಸಿವಿರ್‌ ಇಂಜಕ್ಷನ್‌ ಅಕ್ರಮ ಮಾರಾಟಕ್ಕೆ ಕುತಂತ್ರ ನಡೆದಿರುವುದು ಬೆಳಕಿಗೆ ಬಂದಿದೆ.

ಕಾಳದಂಧೆಯನ್ನು ನಿಯಂತ್ರಣಕ್ಕೆ ತರಲು ಎಸ್‌ಪಿ ನಾಗೇಶ್‌ಡಿಎಲ್‌, ಎಎಸ್‌ಪಿ ಗೋಪಾಲ ಬ್ಯಾಕೋಡ್‌, ಡಿವೈಎಸ್ಪಿ ಬಸವೇಶ್ವರ ಹೀರಾ ಮಾರ್ಗದರ್ಶನದಲ್ಲಿ ನಗರ ಠಾಣೆಯ ಸಿಪಿಐ ಡಿ.ಜಿ ರಾಜಣ್ಣ ಅವರ ನೇತೃತ್ವದಲ್ಲಿ ಪಿಎಸ್‌ಐ ಸಂತೋಷ ಎಲ್‌ಟಿ, ವೀರಣ್ಣ ಮಗಿ, ಸಿಬ್ಬಂದಿ ಮೋಹನರಾವ್‌, ಪ್ರಕಾಶ, ವೀರಣ್ಣ ಅವರನ್ನೊಳಗೊಂಡ ಒಂದು ತಂಡವನ್ನು ರಚಿಸಿ ಕಾರ್ಯಾಚರಣೆಗೆ ಇಳಿಯಲಾಗಿತ್ತು.

"

ತಂಡವು ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ 10 ಗಂಟೆಗೆ ಬೀದರ್‌ನ ಸರ್ಕಾರಿ ಆಸ್ಪತ್ರೆ ಬಳಿ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗಳನ್ನು ಕಾಳಸಂತೆಯಲ್ಲಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವುದಾಗಿ ಖಚಿತಪಡಿಸಿಕೊಂಡು ದಾಳಿ ಮಾಡಿ ಬಂಧಿಸಿದ್ದಾರೆ.

ಕಲಬುರಗಿಯ ಶ್ರೀ ಸಿಮೆಂಟ್‌ನಿಂದ ಬೀದರ್‌ಗೆ ಉಚಿತ ಆಕ್ಸಿಜನ್‌

ಗುಂಪಾ ರಸ್ತೆ ವಿಜಯಾ ಆಸ್ಪತ್ರೆಯ ಚಿಕಿತ್ಸಾ ಉಸ್ತುವಾರಿ ಅಭಿಷೇಕ ಮಡಿವಾಳ ಕುಂಬಾರವಾಡ ಮತ್ತು ಸುರಕ್ಷಾ ಆಸ್ಪತ್ರೆಯ ಅಕೌಂಟೆಂಟ್‌ ಆಸಿಫ ಅಹ್ಮದ ಅಜರ ಅಹ್ಮದ ಹಳ್ಳದಕೇರಿ ಇವರನ್ನು ಬಂಧಿಸಿ ವಿಚಾರಿಸಿದಾಗ ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗಳನ್ನು ಗುಂಪಾ ಬಳಿಯ ವಿಜಯಾ ಆಸ್ಪತ್ರೆಯಿಂದ ತೆಗೆದುಕೊಂಡು ಬಂದು ಮಾರುತ್ತಿರುವುದಾಗಿ ತಿಳಿಸಿದ್ದಾರೆ.

ವಜಯಾ ಆಸ್ಪತ್ರೆಯ ಮಾಲೀಕರಾದ ಡಾ.ವಿಜಯಾ ಹತ್ತಿ ಅವರೇ ನಮಗೆ ವಿಜಯಾ ಆಸ್ಪತ್ರೆಗೆ ನಿಗದಿಪಡಿಸಿದ ರೆಮ್‌ಡಿಸಿವಿರ್‌ಗಳನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿಕೊಂಡು ಬಂದು ಲಾಭದ ಹಣವನ್ನು ನೀಡಲು ಸೂಚಿಸಿರುತ್ತಾರೆಂದು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೀದರ್‌ ನಗರದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದರಿಂದ ಸಾಕಷ್ಟುರೋಗಿಗಳ ಸಾವು ನೋವು ಸಂಭವಿಸುತ್ತಿದೆ. ಸದರಿ ವಿಷಯವನ್ನೇ ಬಂಡವಾಳವಾಗಿಟ್ಟುಕೊಂಡು ಕೆಲವರು ಈ ದಂಧೆಗೆ ಇಳಿದಿದ್ದಾರೆ. ಈ ಕುರಿತು ನೂತನ ನಗರ ಪೊಲೀಸ್‌ ಠಾಣೆಯಲ್ಲಿ 3 ಜನರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ಮತ್ತು 409,420 ಜೊತೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆ ಮಾಡಿದ ತಂಡದ ಕಾರ್ಯವೈಖರಿಯನ್ನು ಎಸ್‌ಪಿ ಶ್ಲಾಘಿಸಿ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios