ಶಿವಮೊಗ್ಗ: ಗರ್ಭನಾಳದಲ್ಲಿ ಬೆಳೆದ ಗರ್ಭ, ಮಹಿಳೆಗೆ ಜೀವದಾನ ಮಾಡಿದ ವೈದ್ಯರು..!
ವಿಜಯನಗರ ಜಿಲ್ಲೆಯ ಕೊಟ್ಟೂರು, ದಾವಣಗೆರೆ ಜಿಲ್ಲೆಯ ಮಾಯಕೊಂಡದಿಂದ ಇಬ್ಬರು ರಕ್ತದಾನಿಗಳು ಹಾಗೂ ಸಂಕಲ್ಪ ಫೌಂಡೇಷನ್ಸ್ ಸಹಾಯದಿಂದ ಮತ್ತೊಂದು ಯುನಿಟ್ ಅನ್ನು ಬೆಂಗಳೂರು ರಕ್ತನಿಧಿ ಕೇಂದ್ರದಿಂದ ಸಂಗ್ರಹಿಸಿ, ಪರೀಕ್ಷಿಸಿ ಗರ್ಭಿಣಿಗೆ ನೀಡಲಾಯಿತು. ಬಳಿಕ ಆಕೆಗೆ 3 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಹೊಟ್ಟೆಯೊಳಗೆ ಸಂಗ್ರಹವಾಗಿದ್ದ ಸುಮಾರು 2.5 ಲೀ.ನಷ್ಟು ರಕ್ತವನ್ನು ಹೊರತೆಗೆದು ಗರ್ಭಿಣಿಯ ಜೀವ ಉಳಿದಿದ್ದಾರೆ.
ಶಿವಮೊಗ್ಗ(ನ.20): ಅಪರೂಪದ ‘ಬಾಂಬೆ ಬ್ಲಡ್ ಗ್ರೂಪ್’ ಹೊಂದಿರುವ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಯ ಶಸ್ತ್ರಚಿಕಿತ್ಸೆ (ರಪ್ಚರಡ್ ಎಕ್ಟೋಪಿಕ್)ಯನ್ನು ಮೆಗ್ಗಾನ್ ಆಸ್ಪತ್ರೆಯ ವೈದ್ಯರು ನಡೆಸಿ, ಮಹಿಳೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹಳೆ ಜೋಗದ ವೀರಭದ್ರಪ್ಪ ಅವರ ಪತ್ನಿ ಬೇಬಿ (31) ಎಂಬವರು ನ.12ರಂದು ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸೆ ವಿಭಾಗಕ್ಕೆ ಹೊಟ್ಟೆನೋವಿನ ಸಮಸ್ಯೆಗೆ ದಾಖಲಾಗಿದ್ದರು. ಪರೀಕ್ಷೆ ನಡೆಸಿದಾಗ ಒಂದೂವರೆ ತಿಂಗಳ ಗರ್ಭಿಣಿ ಎಂದು ತಿಳಿದುಬಂದಿತ್ತು. ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಗರ್ಭಕೋಶದ ಬದಲು ಗರ್ಭನಾಳದಲ್ಲಿ ಗರ್ಭ ಧರಿಸಿರುವುದು ಅಂದರೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಎಂದು ತಿಳಿದುಬಂದಿತ್ತು.
ಶಿವಮೊಗ್ಗದಿಂದ ನ.21 ರಿಂದ ಸ್ಟಾರ್ ಏರ್ ವಿಮಾನ ಸೇವೆ
ಬೇಬಿ ಅವರು ಆಸ್ಪತ್ರೆಗೆ ಬಂದಾಗ ತೀವ್ರ ತರಹದ ಆಘಾತಕ್ಕೊಳಗಾಗಿದ್ದು, ಅವರ ರಕ್ತ ತಪಾಸಣೆ ಮತ್ತು ಇತರೆ ಪರೀಕ್ಷೆಗಳನ್ನು ನಡೆಸಿದಾಗ ಹಿಮೋಗ್ಲೊಬಿನ್ ಪ್ರಮಾಣ 2.5 ಗ್ರಾಂ ಮತ್ತು ಬಿಪಿ 80/50 ಇದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತ ಅರೆಪ್ರಜ್ಞಾವಸ್ಥೆಯಲ್ಲಿ ಇದ್ದರು. ಸ್ಕ್ಯಾನಿಂಗ್‍ನಲ್ಲಿ ಗರ್ಭನಾಳದಲ್ಲಿ ಧರಿಸಿರುವ ಗರ್ಭವು ತುಂಡಾಗಿರುವುದು (ರಪ್ಚರಡ್ ಎಕ್ಟೋಪಿಕ್) ಕಂಡುಬಂದಿತ್ತು.
ಬಾಂಬೆ ಬ್ಲಡ್ ಗ್ರೂಪ್- ರಕ್ತದಾನಿಗಳಿಗೆ ಹುಡುಕಾಟ:
ತಕ್ಷಣ ಗರ್ಭಿಣಿಯನ್ನು ಪ್ರಸೂತಿ ಐಸಿಯು ವಿಭಾಗಕ್ಕೆ ಸ್ಥಳಾಂತರಿಸಿ, ಅವರ ರಕ್ತ ಪರೀಕ್ಷಿಸಿದಾಗ ಅವರದು ‘ಬಾಂಬೆ ಬ್ಲಡ್ ಗ್ರೂಪ್’ ಆಗಿತ್ತು. ಆಕೆಗೆ ಅತಿ ಅವಶ್ಯಕವಾಗಿ 4 ರಿಂದ 5 ಯುನಿಟ್‍ಗಳಷ್ಟು ರಕ್ತದ ಅವಶ್ಯಕತೆ ಇತ್ತು. ಇಲ್ಲವಾದಲ್ಲಿ ಆಕೆ ತೊಂದರೆಗೆ ಒಳಗಾಗುವ ಸಂದರ್ಭವಿತ್ತು. ಆ ಸಮಯದಲ್ಲಿ ವೈದ್ಯರ ಸಮಯಪ್ರಜ್ಞೆಯಿಂದ ಡಾ.ಲೇಪಾಕ್ಷಿ ಬಿ.ಜಿ. ಮತ್ತು ಡಾ.ಅಶ್ವಿನಿ ವೀರೇಶ್ ತಂಡದ ಸತತ ಪ್ರಯತ್ನ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಿ. ಅವರ ಮಾರ್ಗದರ್ಶನದಲ್ಲಿ ಈ ಅತಿ ವಿರಳ ರಕ್ತದ ಗುಂಪಿನ ದಾನಿಗಳನ್ನು ಸತತ 6 ಗಂಟೆಗಳ ಪ್ರಯತ್ನದಿಂದ ಹುಡುಕಿ, ರಕ್ತ ಸಂಗ್ರಹಿಸಿ ಗರ್ಭಿಣಿಗೆ ನೀಡುವಲ್ಲಿ ರಕ್ತನಿಧಿ ಕೇಂದ್ರದ ವೈದ್ಯೆ ಡಾ.ವೀಣಾ ಮತ್ತು ತಂಡವರು ಶ್ರಮಿಸಿದರು.
2.5 ಲೀ. ರಕ್ತ ಹೊರಕ್ಕೆ-ಮಹಿಳೆಗೆ ಮರುಜನ್ಮ:
ವಿಜಯನಗರ ಜಿಲ್ಲೆಯ ಕೊಟ್ಟೂರು, ದಾವಣಗೆರೆ ಜಿಲ್ಲೆಯ ಮಾಯಕೊಂಡದಿಂದ ಇಬ್ಬರು ರಕ್ತದಾನಿಗಳು ಹಾಗೂ ಸಂಕಲ್ಪ ಫೌಂಡೇಷನ್ಸ್ ಸಹಾಯದಿಂದ ಮತ್ತೊಂದು ಯುನಿಟ್ ಅನ್ನು ಬೆಂಗಳೂರು ರಕ್ತನಿಧಿ ಕೇಂದ್ರದಿಂದ ಸಂಗ್ರಹಿಸಿ, ಪರೀಕ್ಷಿಸಿ ಗರ್ಭಿಣಿಗೆ ನೀಡಲಾಯಿತು. ಬಳಿಕ ಆಕೆಗೆ 3 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಹೊಟ್ಟೆಯೊಳಗೆ ಸಂಗ್ರಹವಾಗಿದ್ದ ಸುಮಾರು 2.5 ಲೀ.ನಷ್ಟು ರಕ್ತವನ್ನು ಹೊರತೆಗೆದು ಗರ್ಭಿಣಿಯ ಜೀವ ಉಳಿದಿದ್ದಾರೆ.
ಯತೀಂದ್ರ ಮೊಬೈಲ್ ಸಂಭಾಷಣೆ ವಿಚಾರ ತನಿಖೆಯಾಗಲಿ: ಆರಗ ಜ್ಞಾನೇಂದ್ರ
ಈ ಶಸ್ತ್ರಚಿಕಿತ್ಸೆಗೆ ಅತಿ ವಿರಳ ಗುಂಪಿನ ರಕ್ತದಾನವನ್ನು ಮಾಡಿ ಜೀವ ಉಳಿಸಿದ ಮಾಯಕೊಂಡದ ಪ್ರವೀಣ್ ಜಿ., ಕೊಟ್ಟೂರಿನ ಸಿದ್ದೇಶ್, ಸಂಕಲ್ಪ ಫೌಂಡೇಶನ್, ಬೆಂಗಳೂರು ರಕ್ತನಿಧಿ ಕೇಂದ್ರ ಹಾಗೂ ಶಿವಮೊಗ್ಗ ಮೆಗ್ಗಾನ್ ರಕ್ತನಿಧಿ ಕೇಂದ್ರ ಅವರಿಗೆ ಸಂಸ್ಥೆ ವತಿಯಿಂದ ಧನ್ಯವಾದ ತಿಳಿಸಲಾಗಿದೆ.
ಅತಿ ವಿರಳ ರಕ್ತದ ಗುಂಪಾದ ಬಾಂಬೆ ಬ್ಲಡ್ ಗ್ರೂಪ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮತ್ತು ಈ ಮಾದರಿ ರಕ್ತದ ದಾನಿಗಳನ್ನು ಪತ್ತೆ ಹಚ್ಚಲು ಎಲ್ಲರೂ ಸಹಕರಿಸಬೇಕು ಎಂದು ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ ತಿಳಿಸಿದ್ದಾರೆ.