ಹಾಸನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪಾರದರ್ಶಕತೆಗಾಗಿ ಸಿಸಿಟಿವಿ ಅಳವಡಿಸಿದ್ದಕ್ಕೆ ಮ್ಯಾನೇಜರ್ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿ, ಕ್ಯಾಮೆರಾವನ್ನು ಮುರಿಯಲು ಯತ್ನಿಸಿದ ಘಟನೆ ನಡೆದಿದೆ.  

ಹಾಸನ: ನಗರದ ಹಾಸನ ಮಹಾನಗರ ಪಾಲಿಕೆ (Hassan City Municipal Corporation) ಕಚೇರಿಯಲ್ಲಿ ಸಿಸಿಟಿವಿ ಹಾಕಿಸಿದ ಕಾರಣಕ್ಕೆ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ಸಿಬ್ಬಂದಿಯೊಂದಿಗೆ ದುರ್ವರ್ತನೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಘಟನೆ ಪಾಲಿಕೆ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪಾಲಿಕೆ ಕಚೇರಿಯ ವಿವಿಧ ಕೊಠಡಿಗಳಲ್ಲಿ ಪಾರದರ್ಶಕ ಆಡಳಿತ ಮತ್ತು ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಈ ಕ್ರಮಕ್ಕೆ ಕಿಡಿಕಾರಿದ ಮಹಾನಗರ ಪಾಲಿಕೆ ಮ್ಯಾನೇಜರ್ ಪ್ರಕಾಶ್ ತಮ್ಮ ಚೇಂಬರ್‌ನಲ್ಲಿ ತನ್ನ ಅನುಮತಿ ಇಲ್ಲದೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಯಾರ ಅನುಮತಿಯಿಂದ ಕ್ಯಾಮೆರಾ ಹಾಕಿದ್ದೀರಿ?’

ನನ್ನ ಚೇಂಬರ್‌ನಲ್ಲಿ ನನ್ನ ಅನುಮತಿ ಇಲ್ಲದೆ ಹೇಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ? ಯಾರನ್ನು ಕೇಳಿ ಈ ಕೆಲಸ ಮಾಡಿದ್ದಾರೆ ಎಂದು ಮ್ಯಾನೇಜರ್ ಪ್ರಕಾಶ್ ಕಚೇರಿ ಸಿಬ್ಬಂದಿಯನ್ನು ಪ್ರಶ್ನಿಸಿ ಗದರಿಸಿದ್ದಾರೆ . ಈ ವೇಳೆ ಅವಾಚ್ಯ ಪದಗಳನ್ನು ಬಳಸಿ ಸಿಬ್ಬಂದಿಗೆ ಮಾನಸಿಕವಾಗಿ ಅವಮಾನ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಸಿಸಿ ಕ್ಯಾಮೆರಾ ಮುರಿಯಲು ಸೂಚನೆ

ಇಷ್ಟು ಮಾತ್ರವಲ್ಲ ಅಧಿಕಾರಿ ಪ್ರಕಾಶ್ ಸಿಟ್ಟಿಗೆದ್ದು ಸಿಸಿ ಕ್ಯಾಮೆರಾವನ್ನು ಮುರಿದು ಹಾಕುವಂತೆ ನೌಕರನಿಗೆ ಸೂಚನೆ ನೀಡಿದ್ದಾರೆ. ಅವರ ಆದೇಶದಂತೆ ನೌಕರನೊಬ್ಬ ಸಿಸಿ ಕ್ಯಾಮೆರಾವನ್ನು ಕಿತ್ತು ಹಾಕಲು ಯತ್ನಿಸಿದ್ದಾನೆ. ಆದರೆ ಪರಿಸ್ಥಿತಿಯ ತೀವ್ರತೆಯನ್ನು ಗಮನಿಸಿದ ನೌಕರ, ಕೊನೆಗೆ ಕ್ಯಾಮೆರಾವನ್ನು ಸಂಪೂರ್ಣವಾಗಿ ತೆಗೆದು ಹಾಕದೆ ಬೇರೆ ದಿಕ್ಕಿಗೆ ತಿರುಗಿಸಿದ್ದಾನೆ.

ಕಮಿಷನರ್ ಆದೇಶಕ್ಕೆ ವಿರೋಧ?

ಪಾಲಿಕೆಯ ಎಲ್ಲ ಕೊಠಡಿಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸುವ ನಿರ್ಧಾರವನ್ನು ಮಹಾನಗರ ಪಾಲಿಕೆ ಆಯುಕ್ತರು (ಕಮಿಷನರ್) ಆಡಳಿತಾತ್ಮಕ ಕ್ರಮವಾಗಿ ಕೈಗೊಂಡಿದ್ದರು. ಆದರೆ ಈ ಆಡಳಿತಾತ್ಮಕ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಮ್ಯಾನೇಜರ್ ಪ್ರಕಾಶ್, ಕಚೇರಿಯಲ್ಲೇ ದುಂಡಾವರ್ತನೆ ನಡೆಸಿದ್ದಾರೆ.

ಪಾಲಿಕೆಯಲ್ಲಿ ಅಸಮಾಧಾನ, ಕ್ರಮಕ್ಕೆ ಒತ್ತಾಯ

ಈ ಘಟನೆ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಯಲ್ಲಿ ಅಸಮಾಧಾನ ಮೂಡಿದ್ದು, ಹಿರಿಯ ಅಧಿಕಾರಿಯ ದುರ್ವರ್ತನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಹೆಚ್ಚಾಗಿದೆ. ಸಿಸಿ ಕ್ಯಾಮೆರಾ ಅಳವಡಿಕೆ ಪಾರದರ್ಶಕತೆ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯವಾಗಿದ್ದು, ಅದನ್ನು ವಿರೋಧಿಸಿ ಸಿಬ್ಬಂದಿಗೆ ಅವಾಚ್ಯ ಪದ ಬಳಸಿ ಬೆದರಿಕೆ ಹಾಕಿರುವುದು ಖಂಡನೀಯ ಎಂಬುದು ಸಿಬ್ಬಂದಿಗಳ ಅಭಿಪ್ರಾಯ. ಈ ಘಟನೆ ಕುರಿತು ಮಹಾನಗರ ಪಾಲಿಕೆ ಆಡಳಿತವು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.