ಜಿಲ್ಲಾಸ್ಪತ್ರೆಗೆ ಚಕ್ಕರ್.. ಖಾಸಗಿ ಕ್ಲೀನಿಕ್‌ಗೆ ಹಾಜರ್..!
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕೇಳೋರಿಲ್ಲ, ಹೇಳೋರಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಹಲವು ಸಮಸ್ಯೆಗಳ ಆಗರವಾಗಿರೋ ಆಸ್ಪತ್ರೆಯಲ್ಲಿ ಹಲವು ಸಲ ವೈದ್ಯರೇ ಇರೋದಿಲ್ಲ. ಜಿಲ್ಲಾಸ್ಪತ್ರೆಗೆ ಚಕ್ಕರ್ ಹಾಕಿ ಖಾಸಗಿ ಕ್ಲಿನಿಕ್‌ಗೆ ಹೋಗಿ ಕೂರುವ ವೈದ್ಯರಿಂದಾಗಿ ಇಲ್ಲಿನ ರೋಗಿಗಳು ಪರದಾಡುವಂತಾಗಿದೆ.
ಚಿಕ್ಕಬಳ್ಳಾಪುರ(ಸೆ.30): ಗ್ರಾಮೀಣ ಜನರ ಆರೋಗ್ಯ ಸುಧಾರಣೆಗಾಗಿ ಸರ್ಕಾರ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿದೆ, ಆರೋಗ್ಯ ಸಚಿವರು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ವಾಸ್ತವ್ಯ ಮಾಡುವ ಮೂಲಕ ಗುಣಮಟ್ಟ ಪರಿಶೀಲನೆ ಮಾಡುತ್ತಿದ್ದಾರೆ. ಆದರೂ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೇಗಿದೆ ಎಂಬುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದರೆ ಮಾತ್ರ ವಾಸ್ತವ ಅರ್ಥವಾಗಲಿದೆ.
ಪ್ರೀತಿ ನಿರಾಕರಿಸಿದ ಸ್ನೇಹಿತ: ಗಂಡ-ಮಕ್ಕಳನ್ನು ನೋಡದೇ ಆತ್ಮಹತ್ಯೆಗೆ ಶರಣಾದ ಹುಚ್ಚು ಹೆಣ್ಮಗಳು
ಇಲ್ಲಿ ಹಣ ನೀಡದೆ ಯಾವುದೇ ಕೆಲಸವೂ ಆಗುವುದಿಲ್ಲ. ಹಣ ನೀಡದ ರೋಗಿಗಳನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಒಂದೊಂದು ಆಂಬ್ಯುಲೆನ್ ್ಸನಲ್ಲಿ ಇಬ್ಬರು ರೋಗಿಗಳನ್ನು ಕಳುಹಿಸಲಾಗುತ್ತದೆ. ರಾತ್ರಿ, ತಡರಾತ್ರಿ ಎಂಬ ಆಲೋಚನೆಯೂ ಇಲ್ಲದೆ ಹಣ ನೀಡದ ರೋಗಿಗಳನ್ನು ಆಂಬ್ಯುಲೆನ್ಸ್ ಮೂಲಕ ಹೊರಹಾಕಲಾಗುತ್ತಿದೆ.
ಸಾಮಾನ್ಯ ಕಾಯಿಲೆಗೂ ಬೆಂಗಳೂರು!
ಅಸ್ತಮಾ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ಬಂದರೆ ಚಿಕಿತ್ಸೆ ನೀಡಲು ವೈದ್ಯರಿರುವುದಿಲ್ಲ. ತುರ್ತು ನಿಗಾ ಘಟಕದಲ್ಲಿ ವೈದ್ಯರಿದ್ದರೂ ಅವರು ಕೇವಲ ಪರಿಶೀಲನೆ ಮಾಡಿ, ಕೂಡಲೇ ಬೆಂಗಳೂರಿಗೆ ತೆರಳುವ ಸಲಹೆ ನೀಡುತ್ತಾರೆ. ಹಾಗೆ ತೆರಳಲು ತಡರಾತ್ರಿಯಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆಯಾದರೂ ಒಂದು ಆಂಬ್ಯುಲೆನ್ಸ್‌ನಲ್ಲಿ ಇಬ್ಬರು ರೋಗಿಗಳು, ಅವರ ಸಂಬಂಧಿಕರನ್ನು ಕುರಿಗಳಂತೆ ತುಂಬಿ ಕಳುಹಿಸಲಾಗುತ್ತದೆ.
ಹಾಸಿಗೆ ಇಲ್ಲ ಎಂಬ ಸಿದ್ಧ ಉತ್ತರ:
ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ದ ರೋಗಿಗಳಿಗೆ ವಿಕ್ಟೋರಿಯಾದಲ್ಲಿ ಹಾಸಿಗೆ ಇಲ್ಲ ಬೌರಿಂಗ್‌ಗೆ ಹೋಗಿ ಎಂಬ ಸಿದ್ಧ ಉತ್ತರ ಸಿಗುತ್ತದೆ. ತಡರಾತ್ರಿಯಲ್ಲಿ ಬೌರಿಂಗ್ ಆಸ್ಪತ್ರೆಗೆ ಹೋದರೆ ಅಲ್ಲಿಯೂ ಹಾಸಿಗೆ ಇಲ್ಲ ಹೊರಹೋಗಿ ಎಂದು ಸೌಜನ್ಯ ರಹಿತವಾಗಿ ನಡೆದುಕೊಳ್ಳುತ್ತಾರೆ. ಇದೇ ರೀತಿಯ ತಿರುಗಾಟದಿಂದಾಗಿ ಗುಡಿಬಂಡೆ ತಾಲೂಕಿನ ೮ ವರ್ಷದ ಮಗುವೊಂದು ಜೀವಕಳೆದುಕೊಳ್ಳುವಂತಾಗಿದೆ ಎಂಬುದು ನೊಂದವರ ಆರೋಪವಾಗಿದೆ.
ಹಣ ನೀಡದಿದ್ದರೆ ಬಿಡುಗಡೆ ಇಲ್ಲ!:
ಇನ್ನು ಇದು ಹೆಸರಿಗೆ ಮಾತ್ರ ಧರ್ಮಾಸ್ಪತ್ರೆಯಾಗಿದ್ದು, ಇಲ್ಲಿ ಧರ್ಮ ಎಂಬ ಪದಕ್ಕೆ ಅರ್ಥವೇ ಇಲ್ಲ ಎನ್ನುತ್ತಾರೆ ರೋಗಿಗಳು. ಹೆರಿಗೆ ಮಾಡಿಸಲು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ತೆರಬೇಕಾಗುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳು, ಹಣ ನೀಡದಿದ್ದರೆ ಹೆರಿಗೆಯೇ ಮಾಡಿಸದೆ ಸತಾಯಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ಚಿಕ್ಕಬಳ್ಳಾಪುರ: ರೈತರ ಪಾಲಿಗೆ ನರಕವಾದ APMC
ಇನ್ನು ಹೆರಿಗೆ ನೋವು ಹೆಚ್ಚಾಗಿ, ಅನಿವಾರ್ಯವಾಗಿ ಣ ಪಡೆಯುವುದಕ್ಕಿಂತ ಮೊದಲೇ ಹೆರಿಗೆಯಾದರೆ, ನಂತರ ಹಣ ನೀಡದೆ ಆಸ್ಪತ್ರೆಯಿಂದ ಬಿಡುಗಡೆ ಮಾಡದೆ ಸತಾಯಿತುತ್ತಾರೆ ಎಂದು ರೋಗಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರದ ವೇತನ ಪಡೆದು ಬಡರೋಗಿಗಳೊಂದಿಗೆ ಸೌಜನ್ಯ ತೋರುವ ವೈದ್ಯರೇ ಇಲ್ಲವಾಗಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.
ಭಾನುವಾರ ವೈದ್ಯರೇ ಇರುವುದಿಲ್ಲ!:
ಇನ್ನು ರೋಗಗಳಿಗೆ ಭಾನುವಾರ ರಜೆ ಇಲ್ಲದ ಕಾರಣ ನಾನಾ ಕಾಯಿಲೆಗಳಿಂದ ಭಾನುವಾರ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ವೈದ್ಯರೇ ಇಲ್ಲದೆ ವಾಪಸ್ ಆಗುವಂತಾಗಿದೆ. ಸಣ್ಣಪುಟ್ಟ ಕಾಯಿಲೆಗಳಿಂದ ಬರುವ ರೋಗಿಗಳು ವೈದ್ಯರಿಲ್ಲದ ಕಾರಣ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಕ್ಲಿನಿಕ್‌ಗಳೇ ಗತಿ:
ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಖಾಸಗಿ ಕ್ಲಿನಿಕ್‌ಗಳನ್ನು ನಡೆಸುವಂತಿಲ್ಲ ಎಂದು ಆರೋಗ್ಯ ಸಚಿವರು ಈಗಾಗಲೇ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಈ ಎಚ್ಚರಿಕೆ ಅನ್ವಯಿಸುತ್ತಿಲ್ಲ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದರೂ ಅದನ್ನು ಪ್ರಶ್ನಿಸುವ ಅಧಿಕಾರಿಯೇ ಇಲ್ಲವಾಗಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಇಲ್ಲಿನ ಅವ್ಯವಸ್ಥೆಯನ್ನು ಪರಿಶೀಲಿಸಿ ಜಿಲ್ಲಾಸ್ಪತ್ರೆಯ ವೈದ್ಯರು, ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ.
-ಅಶ್ವತ್ಥನಾರಾಯಣ ಎಲ್.