*  ಮಂಗಳೂರು ವಿವಿ ಘಟಕ ಕಾಲೇಜು ಹಿಜಾಬ್‌ ವಿವಾದ*  ಶಾಸಕರ ನೇತೃತ್ವದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆ*  ವಿದ್ಯಾರ್ಥಿನಿಯರು ವಿಶ್ರಾಂತಿ ಕೊಠಡಿಯಲ್ಲಿ ಹಿಜಾಬ್‌ ತೆಗೆದಿಟ್ಟು ತರಗತಿಗೆ ಹೋಗಲಿ  

ಮಂಗಳೂರು(ಮೇ.28): ನಗರದಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜಿನ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ತರಗತಿ, ಲೈಬ್ರೆರಿಗೆ ಹಿಜಾಬ್‌ ಧರಿಸಿ ಬರುವಂತಿಲ್ಲ, ಕಾಲೇಜು ಕ್ಯಾಂಪಸ್‌ನಲ್ಲಷ್ಟೇ ಹಿಜಾಬ್‌ ಹಾಕಿಕೊಂಡು ಬರಬಹುದು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಕ್ರವಾರ ಸಂಜೆ ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ಅಧ್ಯಕ್ಷ, ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ನಂತರ ಮಾತನಾಡಿದ ವೇದವ್ಯಾಸ ಕಾಮತ್‌, ಸಭೆಯಲ್ಲಿ ಕಾಲೇಜಿನಲ್ಲಿ ನಡೆದ ಘಟನೆಗಳ ಬಗ್ಗೆ ಚರ್ಚಿಸಲಾಗಿದೆ. ಹಿಜಾಬ್‌ಗೆ ತರಗತಿಯಲ್ಲಿ ನಿಷೇಧವಿದ್ದು, ಇದನ್ನು ಕಟ್ಟುನಿಟ್ಟು ಪಾಲಿಸಲಾಗುತ್ತದೆ. ನಿಯಮ ಪಾಲನೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಮಂಗ್ಳೂರಲ್ಲಿ ಹಿಜಾಬ್‌ ವಿವಾದ: ವಿದ್ಯಾರ್ಥಿಗಳ ಪ್ರತಿಭಟನೆ

ಹೈಕೋರ್ಟ್‌ ಆದೇಶ ಬಳಿಕ ಪರೀಕ್ಷಾ ಪ್ರಕ್ರಿಯೆ ಇದ್ದ ಹಿನ್ನೆಲೆಯಲ್ಲಿ ಮಾರ್ಗಸೂಚಿ ಕಳುಹಿಸಲು ತಡವಾಯಿತು. ಆ ಬಳಿಕ ಸಿಂಡಿಕೇಟ್‌ ಸಭೆ ನಡೆಸಿ ಕ್ರಮ ಕೈಗೊಂಡಿದ್ದೇವೆ. ಇದರ ಪಾಲನೆ ವಿಚಾರದಲ್ಲಿ ಶಿಕ್ಷಕರ ವಿರುದ್ಧ ದೂರಿಗೆ ಸಾಕ್ಷ್ಯ ಇದ್ದರೆ ಕ್ರಮ ಕೈಗೊಳ್ಳಲಾಗುವುದು. ನಮಗೆ ಬಂದ ಆದೇಶದ ಪ್ರಕಾರ ಪದವಿ ಕಾಲೇಜಿಗೂ ಕೋರ್ಚ್‌ ಆದೇಶ ಅನ್ವಯ ಆಗುತ್ತದೆ. ಸೋಮವಾರದಿಂದ ನೂರಕ್ಕೆ ನೂರು ಕೋರ್ಟ್‌ ಆದೇಶ ಪಾಲಿಸಬೇಕು. ವಿದ್ಯಾರ್ಥಿನಿಯರು ವಿಶ್ರಾಂತಿ ಕೊಠಡಿಯಲ್ಲಿ ಹಿಜಾಬ್‌ ತೆಗೆದಿಟ್ಟು ತರಗತಿಗೆ ಹೋಗಲಿ. ಹಿಜಾಬ್‌ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್‌ ಮಾಡುವ ಕೆಲಸವನ್ನು ಉಪ ಕುಲಪತಿ ಮಾಡಲಿದ್ದಾರೆ ಎಂದರು.

ಪದವಿ ಕಾಲೇಜುಗಳಿಗೆ ಕೋರ್ಚ್‌ ಆದೇಶ ಅನ್ವಯ ಆಗುತ್ತದೆಯೇ ಎನ್ನುವ ಪ್ರಶ್ನೆ ಇದೆ. ಕೋರ್ಟ್‌ ಆದೇಶದಲ್ಲಿ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಮತ್ತು ವಿವಿಗಳನ್ನು ಪಾರ್ಟಿ ಮಾಡಲಾಗಿದೆ. ಹೀಗಿರುವಾಗ ಈ ಆದೇಶ ಸಹಜವಾಗಿ ಎಲ್ಲ ಕಾಲೇಜುಗಳಿಗೆ ಅನ್ವಯ ಆಗುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಸ್ಪಷ್ಟಪಡಿಸಿದ್ದಾರೆ.