Asianet Suvarna News Asianet Suvarna News

ಡಿಕೆಶಿ ಪದಗ್ರಹಣ: ಧಾರವಾಡ ಜಿಲ್ಲಾದ್ಯಂತ 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾರ್ಯಕ್ರಮ ವೀಕ್ಷಣೆ

ಪ್ರಮುಖ ಸ್ಥಳಗಳಲ್ಲಿ ಎಲ್‌ಇಡಿ ಸ್ಕ್ರೀನ್‌ ಮೂಲ​ಕ ಕಾರ್ಯಕ್ರಮ ನೇರ ಪ್ರಸಾರ| ಕಾರ್ಯ​ಕ್ರ​ಮಕ್ಕೆ ಬರುವ ಎಲ್ಲ​ರಿಗೂ ಸ್ಯಾನಿ​ಟೈ​ಸರ್‌, ಮಾಸ್ಕ್‌ ನೀಡಿ ಸಾಮಾ​ಜಿಕ ಅಂತರ ಕಾಯ್ದು​ಕೊ​ಳ್ಳಲು ಸೂಚ​ನೆ| ಬೆಳಗ್ಗೆ 10.30ರಿಂದ ಕಾರ್ಯ​ಕ್ರ​ಮ ಪ್ರಸಾರ ಆರಂಭ|

DKS Swearing Ceremony Program viewing in over 300 locations across Dharwad district
Author
Bengaluru, First Published Jul 2, 2020, 7:36 AM IST

ಹುಬ್ಬಳ್ಳಿ(ಜು.02): ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅವರು ಇಂದು(ಗುರುವಾರ) ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಈಗಾಗಲೇ ಗ್ರಾಮೀಣ, ನಗರ ಕಚೇರಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಎಲ್‌ಇಡಿ ಸ್ಕ್ರೀನ್‌ ಅಳವಡಿಸಿ ಕಾರ್ಯಕ್ರಮ ನೇರ ಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದೆಡೆ ಪೆಂಡಾಲ್‌, ಶಾಮಿಯಾನಾಗಳನ್ನು ಹಾಕಿಸಿ, ಬೃಹತ್‌ ಪರದೆ, ಟಿವಿಗಳನ್ನಿಟ್ಟು ಕಾರ್ಯಕ್ರಮ ವೀಕ್ಷಣೆಗೆ ಸಿದ್ಧತೆ ಮಾಡಿದ್ದಾರೆ. ಹಲವೆಡೆಗಳಲ್ಲಿ ಕಾರ್ಯಕರ್ತರೆ ಹಣವನ್ನು ಒಗ್ಗೂಡಿಸಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.

"

ಹುಬ್ಬಳ್ಳಿ: ಕರ್ಫ್ಯೂ ನಿಯಮ ಗಾಳಿಗೆ ತೂರಿ, ಮೊರ​ಬ​ದಲ್ಲಿ ಜನ್ಮ​ದಿನ ಆಚ​ರ​ಣೆ

ಕಾರ್ಯಕ್ರಮ ವೀಕ್ಷಣೆ ನಡೆವ ಸ್ಥಳದಲ್ಲಿ ರಾಷ್ಟ್ರ ಧ್ವಜ, ಕಾಂಗ್ರೆಸ್‌ ಧ್ವಜವನ್ನು ಇಡಲಾಗುತ್ತಿದೆ. ಕಾರ್ಯಕರ್ತರು ಹೆಚ್ಚಿರುವ ಗ್ರಾಮ, ವಾರ್ಡ್‌ಗಳಲ್ಲಿ 2-3 ಕಡೆಗಳಲ್ಲಿ ವೀಕ್ಷಣೆಗೆ ಆಯೋಜನೆ ಮಾಡಲಾಗಿದೆ. ಬರುವ ಎಲ್ಲರಿಗೂ ಸ್ಯಾನಿಟೈಸರ್‌, ಮಾಸ್ಕ್‌ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಚ್ಚರಿಕೆ ವಹಿಸಲಾಗಿದೆ ಎಂದು ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗ್ಗೆ 10.30ರಿಂದ ಕಾರ್ಯ​ಕ್ರ​ಮ ಪ್ರಸಾರ ಆರಂಭವಾಗಲಿದೆ. ಅಲ್ಲಿ ಯಾವ ರೀತಿ ವಂದೇ ಮಾತರಂ ಗೀತೆ ಮೂಲಕ ಹಾಗೂ ಸಂವಿಧಾನ ಓದಿನ ಮೂಲಕ ಕಾರ್ಯಕ್ರಮ ಆರಂಭಿಸುತ್ತಾರೊ ಅದೇ ರೀತಿ ಇಲ್ಲಿಯೂ ನಡೆಸಲಾಗುವುದು. ಕಳೆದ ಹದಿನೈದು ದಿನಗಳಿಂದ ಇದಕ್ಕಾಗಿ ಸಾಕಷ್ಟುಸಿದ್ಧತೆ ಮಾಡಿಕೊಂಡಿದ್ದೇವೆ. ಯಾವುದೇ ಲೋಪ ಆಗದಂತೆ ಕ್ರಮ ವಹಿಸಿದ್ದೇವೆ ಎಂದರು.

ಮಹಾನಗರ ವ್ಯಾಪ್ತಿಯ 6 ಬ್ಲಾಕ್‌ನಲ್ಲಿ, ಎಲ್ಲ ವಾರ್ಡ್‌ಗಳಲ್ಲಿ ವೀಕ್ಷಣೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ಡಿಜಿಟಲ್‌ ಬಾಯ್‌, ಜಿಲ್ಲೆಯ ಸೋಶಿಯಲ್‌ ಮೀಡಿಯಾ ಕೋ ಆರ್ಡಿನೇಟರ್‌ ಸೇರಿ ಒಟ್ಟೂ 477 ಕೋ ಆರ್ಡಿನೇಟರ್‌ಗಳನ್ನು ಕಾರ್ಯಕ್ರಮದ ಯಶಸ್ವಿಗಾಗಿ ನೇಮಿಸಿದ್ದೇವೆ. ಎಲ್ಲರಿಗೂ ಟ್ರ್ಯಾಕರ್‌ ಐಡಿ ನೀಡಲಾಗಿದೆ. ಅವರು ಯಾವ ರೀತಿ ಕಾರ್ಯನಿರ್ವಹಿಸುತ್ತಾರೆ ಎಂಬುದು ಸಂಪೂರ್ಣ ದಾಖಲಾಗಲಿದೆ ಎಂದರು.

ಅದೇ ರೀತಿ ಗ್ರಾಮೀಣದಲ್ಲಿ 143 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ಆಯೋಜನೆ ಆಗಿದೆ. ಹೆಚ್ಚು ಜನರು ಇರುವ ಗ್ರಾಮದಲ್ಲಿ ಎರಡು ಕಡೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಯಾವುದೆ ಕಡೆಗಳಲ್ಲೂ ಅವ್ಯವಸ್ಥೆ ಆಗದಂತೆ ಸೂಕ್ತ ಮುಂಜಾಗ್ರತೆ ವಹಿಸಲಾಗಿದೆ.

ಪ್ರಾತ್ಯಕ್ಷಿಕೆಗೆ ವೀರ​ಕು​ಮಾರ ಪಾಟೀಲ್‌ ಚಾಲ​ನೆ

ಇಲ್ಲಿನ ಇಎಸ್‌ಐ ಹಾಸ್ಪಿಟಲ್‌ ಬಳಿ ತೆರೆಯಲಾದ ನೂತನ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕ್ರಮಕ್ಕೆ ಸೋಮವಾರ ಕಾಂಗ್ರೆಸ್‌ ಮುಖಂಡ ವೀರಕುಮಾರ ಪಾಟೀಲ್‌ ಚಾಲನೆ ನೀಡಿದರು. ಇಲ್ಲಿ ಎರಡು ಎಲ್‌ಇಡಿ ಸ್ಕ್ರೀನ್‌ ಅಳವಡಿಸಲಾಗಿದ್ದು, ಒಂದು ಸ್ಕ್ರೀನ್‌ನಲ್ಲಿ ಮಾಧ್ಯಮಗಳಲ್ಲಿ ಬರುವ ವರದಿ ಪ್ರಸಾರ ಹಾಗೂ ಇನ್ನೊಂದರಲ್ಲಿ ಜೂಮ್‌ ಆ್ಯಪ್‌ ಮೂಲಕ ಪ್ರತಿಜ್ಞಾ ವಿಧಿ ಸ್ವೀಕಾರದ ಕಾರ್ಯಕ್ರಮ ನೇರ ಪ್ರಸಾರ ಇರಲಿದೆ. ಇಲ್ಲಿ ಮಾತ್ರ 200 ಜನರಿಗೆ ವೀಕ್ಷಣೆಗೆ ಅವಕಾಶವಿದ್ದು, ಉಳಿದೆಡೆ ನೂರು ಜನರಿಗೆ ಮಾತ್ರ ಅವಕಾಶ ಮಾಡಲಾಗಿದೆ.

ಇನ್ನು ಸೋಮವಾರ ಡಿಜಿಟಲ್‌ ಸಂವಾದದ ಮೂಲಕ ತಾಲೀಮು ನಡೆಸಲಾಯಿತು. ಜಿಲ್ಲೆಯ ಬ್ಲಾಕ್‌, ತಾಲೂಕು, ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರ ಜತೆಗೆ ಸಂಪರ್ಕ ಸಾಧಿಸಿದರು. ಅಲ್ಲಿ ನಡೆದ ಪೂರ್ವ ಸಿದ್ಧತೆಯ ಸಂಪೂರ್ಣ ವಿವರಗಳನ್ನು ಜೂಮ್‌ ಆ್ಯಪ್‌ ಮೂಲಕವೇ ತರಿಸಿಕೊಂಡರು. ಗ್ರಾಮೀಣ ಭಾಗಗಳಲ್ಲಿ ಎಲ್ಲೆಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ಕುರಿತು ವಿಪ ಸದಸ್ಯ ನಾಗರಾಜ ಛಬ್ಬಿ, ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ್‌ ಮಾಹಿತಿ ಪಡೆದರು.

Follow Us:
Download App:
  • android
  • ios