ಸಾರಿಗೆ ನೌಕರರಿಗೆ ಸರ್ಕಾರ ಸ್ಪಂದಿಸುತ್ತಿಲ್ಲ: ಡಿಕೆಶಿ
ಮಸ್ಕಿಯಲ್ಲಿ ನಡೆಯುತ್ತಿರುವುದು ಬಸನಗೌಡ ತುರ್ವಿಹಾಳ ಚುನಾವಣೆ ಅಲ್ಲ. ಇದು ಸ್ವಾಭಿಮಾನಿಗಳ ಚುನಾವಣೆ| ಸ್ವಾಭಿಮಾನಕ್ಕೆ ಜನರು ತೀರ್ಪು ಕೊಡುತ್ತಾರೆ ಎನ್ನುವ ವಿಶ್ವಾಸ| ಕಳೆದ ಚುನಾವಣೆಯಲ್ಲಿ ಬಸನಗೌಡ ಬಿಜೆಪಿಯಲ್ಲಿದ್ದರಿಂದ ಸೋತಿದ್ದರು. ಈ ಭಾರಿ ಕಾಂಗ್ರೆಸ್‌ನಲ್ಲಿದ್ದಾರೆ. ಅದಕ್ಕಾಗಿ ಬೈ ಎಲೆಕ್ಷನ್‌ನಲ್ಲಿ 25 ಸಾವಿರ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ: ಡಿಕೆಶಿ|
ರಾಯಚೂರು(ಏ.07): ಸಾರಿಗೆ ನೌಕರರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸದ ಕಾರಣಕ್ಕೆ ಮುಷ್ಕರದ ಹಾದಿ ಹಿಡಿಯುವಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆರೋಪಿಸಿದ್ದಾರೆ.
ಜಿಲ್ಲೆ ಮಸ್ಕಿ ಉಪಚುನಾವಣೆ ಪ್ರಚಾರ ನಿಮಿತ್ತ ಪಗಡದಿನ್ನಿ ಕ್ಯಾಂಪ್‌ನಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ಸಮರ್ಥ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯವಿಲ್ಲ. ಸಿನಿಮಾ ಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಅರ್ಧದಷ್ಟು ಇಳಿಸಿದ್ದ ಸರ್ಕಾರ, ಆ ವಿಷಯದಲ್ಲೂ ತಪ್ಪು ನಿರ್ಧಾರದ ಮೂಲಕ ಸಿನಿಮಾ ರಂಗಕ್ಕೂ ತೊಂದರೆ ನೀಡುತ್ತಿದೆ. ನಾವುಗಳು ವಿಮಾನದಲ್ಲಿ ಬಂದಿದ್ದೇವೆ. ಅಲ್ಲಿ ತುಂಬಾ ಜನರು ಇದ್ದರು. ಹಾಗಾದರೆ ಅಲ್ಲಿ ಯಾಕೆ ನಿಯಮಗಳು ಅನ್ವಯವಾಗುವುದಿಲ್ಲ? ಬಸ್‌ಗೆ ಮಾತ್ರ ಯಾಕೆ ನಿಯಮ ಅನ್ವಯ ಮಾಡಬೇಕು ಎಂದರು.
'ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ, ಯಡಿಯೂರಪ್ಪ ಕೊಡುಗೆ ಏನು?'
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಜನರು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ಇಂತಹ ಸ್ಪಂದನೆಯನ್ನು ನಾನು ಎಲ್ಲಿಯೂ ನೋಡಿಲ್ಲ. ಕೂಲಿಕಾರ್ಮಿಕರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿ ಎಂದು ಚುನಾವಣಾ ಖರ್ಚಿಗಾಗಿ ಕೈಲಾದಷ್ಟು ದೇಣಿಗೆ ನೀಡಿ ಆಶೀರ್ವದಿಸುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿಗರು ಕೂಲಿ ಕಾರ್ಮಿಕರಿಗೆ ನಾವೇ ಹಣ ಕೊಟ್ಟು ಮತ್ತೆ ವಾಪಸ್ಸು ಪಡೆಯುತ್ತಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಸ್ಕಿಯಲ್ಲಿ ನಡೆಯುತ್ತಿರುವುದು ಬಸನಗೌಡ ತುರ್ವಿಹಾಳ ಚುನಾವಣೆ ಅಲ್ಲ. ಇದು ಸ್ವಾಭಿಮಾನಿಗಳ ಚುನಾವಣೆಯಾಗಿದೆ. ಸ್ವಾಭಿಮಾನಕ್ಕೆ ಜನರು ತೀರ್ಪು ಕೊಡುತ್ತಾರೆ ಎನ್ನುವ ವಿಶ್ವಾಸವಿದ್ದು, ಕಳೆದ ಚುನಾವಣೆಯಲ್ಲಿ ಬಸನಗೌಡ ಬಿಜೆಪಿಯಲ್ಲಿದ್ದರಿಂದ ಸೋತಿದ್ದರು. ಈ ಭಾರಿ ಕಾಂಗ್ರೆಸ್‌ನಲ್ಲಿದ್ದಾರೆ. ಅದಕ್ಕಾಗಿ ಬೈ ಎಲೆಕ್ಷನ್‌ನಲ್ಲಿ 25 ಸಾವಿರ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.