ಡಿಕೆ ಶಿವಕುಮಾರ್ ಅವರು ಗಣೇಶ ಹಾಗೂ ತ್ರಿವರ್ಣ ಧ್ವಜದ ಚಿತ್ರವಿದ್ದ ರಂಗೋಲಿಯ ಮೇಲೆ ಶೂ ಧರಿಸಿ ನಡೆದ ವಿಡಿಯೋ ವೈರಲ್ ಆಗಿದೆ. ಇದನ್ನು ದಾಳವಾಗಿ ಬಳಸಿಕೊಂಡಿರುವ ಜೆಡಿಎಸ್, ಡಿಕೆಶಿ ಅವರಿಗೆ ದೇವರ ಮೇಲೆ ಭಕ್ತಿ, ರಾಷ್ಟ್ರಧ್ವಜದ ಮೇಲೆ ಗೌರವವಿಲ್ಲ ಎಂದು ಟೀಕಿಸಿ 'ಬೂಟಾಟಿಕೆ ಶೂರ' ಎಂದು ವ್ಯಂಗ್ಯವಾಡಿದೆ.

ಬೆಂಗಳೂರು (ಜ.27): ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಜೆಡಿಎಸ್‌ ನಡುವಿನ ಕದನ ನಿಲ್ಲುವ ಹಾಗೆ ಕಾಣುತ್ತಿಲ್ಲ. ಎಚ್‌ಡಿ ಕುಮಾರಸ್ವಾಮಿ ಆಡುವ ಪ್ರತಿ ಮಾತಿಗೂ ಡಿಕೆ ಶಿವಕುಮಾರ್‌ ಅವರಿಂದ ಕೌಂಟರ್‌ ಬಂದರೆ, ಡಿಕೆ ಬ್ರದರ್ಸ್‌ ಆಡುವ ಪ್ರತಿ ಮಾತಿಗೂ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಕಡೆಯಿಂದ ಕೌಂಟರ್‌ ಬರುತ್ತಿದೆ. ಇದರ ನಡುವೆ ಜೆಡಿಎಸ್‌, ಮಂಗಳವಾರ ಡಿಕೆ ಶಿವಕುಮಾರ್‌ ಅವರನ್ನು ಬೂಟಾಟಿಕೆ ಶೂರ ಎಂದು ಕರೆದು ವ್ಯಂಗ್ಯವಾಡಿದೆ.

'ದೇವರ ಮೇಲೆ ಭಕ್ತಿ ಇಲ್ಲ, ರಾಷ್ಟ್ರಧ್ವಜದ ಮೇಲೆ ಗೌರವವೂ ಇಲ್ಲ, ಅಭಿಮಾನವಿಲ್ಲ. ಕೊನೆಗೆ, ಹೆಣ್ಣುಮಕ್ಕಳು ಬಿಡಿಸಿರುವ ರಂಗೋಲಿ ಚಿತ್ತಾರಗಳ ಮೇಲೆಯೂ ಎಳ್ಳಷ್ಟೂ ಹೆಮ್ಮೆ ಇಲ್ಲ.. ಅಧಿಕಾರ ಅಹಂಕಾರಕ್ಕಲ್ಲ, ಅಧಿಕಾರ ಅಲಂಕಾರಕ್ಕಲ್ಲ. ಅಧಿಕಾರವೆನ್ನುವುದು ಜನಸೇವೆಗೊಂದು ಮಾರ್ಗ.. ಇಲ್ಲಿ ಅಧಿಕಾರವೇ ದುರಂಹಕಾರವಾಗಿ ಮೈವೇತ್ತಿ ನಿಂತಿದೆ..' ಎಂದು ಡಿಕೆ ಶಿವಕುಮಾರ್‌ ಅವರ ವಿಡಿಯೋ ಬಗ್ಗೆ ಪೋಸ್ಟ್‌ ಮಾಡಿದೆ.

ವಿಡಿಯೋದಲ್ಲಿ ಇರೋದೇನು?

ಡಿಕೆ ಶಿವಕುಮಾರ್‌ ತಮ್ಮ ಸಹೋದರ ಡಿಕೆ ಸುರೇಶ್‌ ಅವರೊಂದಿಗೆ ಇತ್ತೀಚೆಗೆ ತಮ್ಮೂರಿನ ಕನಕೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯ ಕಾರ್ಯಕ್ರಮಕ್ಕೂ ಹೋಗಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ರೀತಿಯ ರಂಗೋಲಿಗಳನ್ನು ಬಿಡಿಸಲಾಗಿತ್ತು. ಗಣೇಶನ ರಂಗೋಲಿ, ಭಾರತ ತ್ರಿವರ್ಣ ಧ್ವಜದ ಬಣ್ಣದ ರಂಗೋಲಿಯನ್ನು ಬಿಡಿಸಲಾಗಿತ್ತು. ಡಿಕೆ ಶಿವಕುಮಾರ್‌ ಇದನ್ನು ನೋಡುವ ವೇಳೆ ಶೂ ಧರಿಸಿಕೊಂಡೇ ಹೋಗಿದ್ದಾರೆ. ರಂಗೋಲಿಯಲ್ಲಿ ಬಿಡಿಸಿದ್ದ ಗಣೇಶನ ಚಿತ್ರ ಹಾಗೂ ತ್ರಿವರ್ಣ ಧ್ವಜದ ಮೇಲೆ ಶೂ ಧರಿಸಿಕೊಂಡು ಕಾಲಿಟ್ಟಿದ್ದಾರೆ.

ಹಾಗಂತ ಇದೇನೂ ಡಿಕೆ ಶಿವಕುಮಾರ್‌ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ರಂಗೋಲಿಯಲ್ಲಿ ಗಣೇಶನ ಚಿತ್ರ ಬಿಡಿಸಿದ್ದಾಗಲಿ, ತ್ರಿವರ್ಣ ಧ್ವಜದ ಚಿತ್ರ ಇದ್ದಿದ್ದಾಗಲಿ ಅವರು ಗಮನಿಸಿಲ್ಲ. ಆದರೆ, ಈ ವಿಡಿಯೋ ಸೋಶಿಯಲ್‌ ಮೀಡಿಯಾಕ್ಕೆ ಬರುತ್ತಿದ್ದಂತೆ ಇದನ್ನು ಜೆಡಿಎಸ್‌ ತನ್ನ ಟೀಕೆಗೆ ದಾಳ ಮಾಡಿಕೊಂಡಿದ್ದು, ಬೂಟಾಟಿಕೆ ಶೂರನಿಗೆ ಮೈಯ್ಯೆಲ್ಲಾ ಪಂಗನಾಮ ಎಂದು ವಿಡಿಯೋ ಹಂಚಿಕೊಂಡಿದೆ.

Scroll to load tweet…