ಬೆಂಗಳೂರು(ಫೆ.19): ರಾಮನಗರ ಜಿಲ್ಲೆಯ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದುಪಡಿಸಿರುವ ಆದೇಶವನ್ನು ಹಿಂಪಡೆದು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮರು ಆದೇಶ ಹೊರಡಿಸುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದ ನಿಯೋಗವು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯ ಮಾಡಿದೆ.

ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಕುಣಿಗಲ್‌ ಶಾಸಕ ಡಾ. ರಂಗನಾಥ್‌, ವಿಧಾಪರಿಷತ್‌ ಸದಸ್ಯರಾದ ಎಚ್‌.ಎಂ.ರೇವಣ್ಣ, ಸಿ.ಎಂ.ಲಿಂಗಪ್ಪ, ಎಸ್‌.ರವಿ ಅವರೊಂದಿಗೆ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ.

ಮಂತ್ರಿಗಿರಿ ತಪ್ಪಿದ ಬೆನ್ನಲ್ಲೇ ಡಿಕೆಶಿ ಮನೆಗೆ ಭೇಟಿ ಕೊಟ್ಟ ಬಿಜೆಪಿ ಶಾಸಕ!

ಈ ವೇಳೆ ಡಿ.ಕೆ.ಶಿವಕುಮಾರ್‌ ಅವರು, ತಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಿರಿ. ಆದರೆ, ಏಕಾಏಕಿ ಕನಕಪುರ ವೈದ್ಯಕೀಯ ವಿಜ್ಞಾನ ಕಾಲೇಜು ಆದೇಶವನ್ನು ರದ್ದುಗೊಳಿಸಿದ್ದೀರಿ. ನಂಜುಂಡಪ್ಪ ಸಮಿತಿಯು ಕನಕಪುರವನ್ನು ಹಿಂದುಳಿದ ತಾಲೂಕು ಎಂದು ಪರಿಗಣಿಸಿದ್ದರಿಂದ ಈ ಭಾಗದಲ್ಲಿ ವೈದ್ಯಕೀಯ ಮೂಲಸೌಕರ್ಯ ಹೆಚ್ಚಿಸಲು ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೂ ವೈದ್ಯಕೀಯ ಶಿಕ್ಷಣ ಸಿಗುವಂತೆ ಮಾಡಲು ಕಳೆದ ಸಮ್ಮಿಶ್ರ ಸರ್ಕಾರವು 2018-19ನೇ ಸಾಲಿನ ಬಜೆಟ್‌ನಲ್ಲಿ ಕನಕಪುರ ವೈದ್ಯಕೀಯ ಕಾಲೇಜಿಗೆ ಅನುಮೋದನೆ ನೀಡಿತ್ತು.

ಇದಕ್ಕೆ ವಿರೋಧಪಕ್ಷದ ನಾಯಕರಾಗಿ ನೀವೂ ಸಹ ಒಪ್ಪಿಗೆ ನೀಡಿದ್ದೀರಿ. ಇದರ ಬೆನ್ನಲ್ಲೇ 25 ಎಕರೆ ಜಮೀನು ಮಂಜೂರಾಗಿ ಟೆಂಡರ್‌ ಕರೆದು ಗುದ್ದಲಿ ಪೂಜೆ ಮಾಡುವುದು ಮಾತ್ರ ಬಾಕಿ ಉಳಿದಿತ್ತು. ಈ ಹಂತದಲ್ಲಿ ರಾತ್ರೋರಾತ್ರಿ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಡಿ. ಕೆ. ಶಿವಕುಮಾರ್‌ಗೆ ಧನ್ಯವಾದ ತಿಳಿಸಿದ ಗೋಕಾಕ ಸಾಹುಕಾರ: ಕಾರಣ?

ಇದೇ ವೇಳೆ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ನಮ್ಮ ಮನವಿ ಈಡೇರಿಸದಿದ್ದರೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು. ಕನಕಪುರ ಜನರಿಗೆ ನ್ಯಾಯ ದೊರಕಿಸಿಕೊಡಲು ನನ್ನದೇ ಮಾರ್ಗ ಅನುಸರಿಸಬೇಕಾಗುತ್ತದೆ ಎಂದು ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ವಿಧಾನಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಅವರು, ಕಾಗಿನೆಲೆ, ಕನಕಪೀಠ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಸಭೆ ವಿಚಾರವಾಗಿ ಮನವಿ ಸಲ್ಲಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶೀಘ್ರದಲ್ಲೇ ಈ ಬಗ್ಗೆ ಸಭೆ ಕರೆಯಲಾಗುವುದು. ಕಾಗಿನೆಲೆ ಹಾಗೂ ಸಂಗೊಳ್ಳಿರಾಯಣ್ಣ ಸ್ಮಾರಕ ಅಭಿವೃದ್ಧಿಗೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು ಎಂದು ತಿಳಿದುಬಂದಿದೆ. ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಹಾಜರಿದ್ದರು.