ಡಿ.ಕೆ.ಶಿವಕುಮಾರ್ ಅವರು ಈಗ 'ತಾತ'ನಾಗಿ ಬಡ್ತಿ ಪಡೆದಿರುವುದು ಅವರ ಕುಟುಂಬಕ್ಕೆ ವಿಶೇಷ ಕ್ಷಣವಾಗಿದ್ದು, ಅಭಿಮಾನಿಗಳಿಂದಲೂ ಶುಭಾಶಯಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು (ಮೇ.01): ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾತನಾಗಿರುವ ಸಂತಸದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಪುತ್ರಿ ಐಶ್ವರ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಶಿವಕುಮಾರ್ ಕುಟುಂಬದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ರಾಜಕೀಯ ವಲಯದಲ್ಲಿಯೂ ಈ ಸಂತಸದ ಸುದ್ದಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಡಿ.ಕೆ.ಶಿವಕುಮಾರ್ ಅವರು ಈಗ 'ತಾತ'ನಾಗಿ ಬಡ್ತಿ ಪಡೆದಿರುವುದು ಅವರ ಕುಟುಂಬಕ್ಕೆ ವಿಶೇಷ ಕ್ಷಣವಾಗಿದ್ದು, ಅಭಿಮಾನಿಗಳಿಂದಲೂ ಶುಭಾಶಯಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ತೇಜಸ್ವಿ ಸೂರ್ಯ ಹಂಚಿಕೊಂಡ ಪೋಸ್ಟ್‌ನಲ್ಲೇನಿದೆ?

ಇವತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೊತೆ ಬೆಂಗಳೂರು ದಕ್ಷಿಣದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ. ಕಾರ್ಯಕ್ರಮಗಳ ಮಧ್ಯೆ ಕಾರಿನಲ್ಲಿ ಜೊತೆಗೆ ಪ್ರಯಾಣಿಸುವಾಗ ಅವರಿಗೆ ಮನೆಯಿಂದ ಪದೇ ಪದೇ ಫೋನ್ ಬರುತ್ತಿತ್ತು. ವಿಚಾರಿಸಿದಾಗ, 'ಇವತ್ತು ನನ್ನ ಮಗಳ ಡೆಲಿವರಿ. ನಾನು ತಾತ ಆಗುತ್ತಿದ್ದೇನೆ' ಎಂದರು. ಒಂದು ಕಡೆ ಕುಟುಂಬದ ಅತ್ಯಂತ ಸಂತೋಷದ ಕ್ಷಣ. ಇನ್ನೊಂದು ಕಡೆ ಸಾರ್ವಜನಿಕ ಜವಾಬ್ದಾರಿ. ಆದರೂ ಅವರು ಫ್ಲೈಓವರ್ ಉದ್ಘಾಟನೆ, ಸ್ಕೈವಾಕ್ ಶಂಕುಸ್ಥಾಪನೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

The first casualty of public life is personal life ಅಂತ ಮಾತಿದೆ. ಇಂತಹ ಸಂದರ್ಭಗಳಲ್ಲಿ ಆ ಮಾತಿನ ಅರ್ಥ ಇನ್ನಷ್ಟು ಸ್ಪಷ್ಟವಾಗುತ್ತದೆ. ತಾತನಾದ ಡಿ.ಕೆ.ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಮಗಳು ಐಶ್ವರ್ಯ ಅವರಿಗೆ, ಮಗುಗೆ ಮತ್ತು ಕುಟುಂಬಕ್ಕೆ ಭಗವಂತ ಆಯುಷ್ಯ, ಆರೋಗ್ಯ ಮತ್ತು ಸಂತೋಷ ಕರುಣಿಸಲಿ ಎಂದು ಬರೆದುಕೊಂಡಿದ್ದಾರೆ.

View post on Instagram