ಹಾವೇರಿ(ಏ.29): ಕೋವಿಡ್‌ 19 ಲಾಕ್‌ಡೌನ್‌ ಹಿನ್ನೆಲೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಘೋಷಿಸಿರುವ ಎರಡು ಸಾವಿರ ರು. ನೆರವಿನ ಹಣವನ್ನು ತ್ವರಿತವಾಗಿ ನೋಂದಾಯಿತ ಅರ್ಹ ಎಲ್ಲ ಕಾರ್ಮಿಕರ ಖಾತೆಗೆ ಜಮಾ ಮಾಡಲು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರದ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ ಜೈನ್‌ ಸೂಚನೆ ನೀಡಿದ್ದಾರೆ. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್‌ ನಿಯಂತ್ರಣ ಕ್ರಮಗಳು ಹಾಗೂ ಲಾಕ್‌ಡೌನ್‌ನಿಂದ ತೊಂದರೆಗೊಳಗಾದವರಿಗೆ ಪರಿಹಾರ ಕಾರ್ಯಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ನೋಂದಾಯಿತ ಅರ್ಹ ಕಾರ್ಮಿಕರಿಗೆ ಎರಡು ಸಾವಿರ ರು., ನೆರವಿನ ಹಣ ಸಂಕಷ್ಟ ಕಾಲದಲ್ಲಿ ಜಮಾ ಆಗಬೇಕು. ವಿಳಂಬವಾಗಬಾರದು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಆಯುಕ್ತರೊಂದಿಗೆ ಸಮನ್ವಯ ಸಾಧಿಸಿ ಖಾತೆಗೆ ಹಣ ಜಮಾ ಮಾಡಿಸಿ ಎಂದು ಸಲಹೆ ನೀಡಿದರು.

ಲಾಕ್‌ಡೌನ್‌: ಎಲ್ಲ ಕಾರ್ಖಾನೆ ಆರಂಭಕ್ಕೆ ಸಿಕ್ತು ಗ್ರೀನ್‌ ಸಿಗ್ನಲ್‌..!

ಜಿಲ್ಲೆಯಲ್ಲಿ ನೋಂದಾಯಿತ 38 ಸಾವಿರ ಕಾರ್ಮಿಕರ ಪೈಕಿ ನಾಲ್ಕು ಸಾವಿರ ಕಾರ್ಮಿಕರಿಗೆ ಈಗಾಗಲೇ ಹಣ ಜಮೆಯಾಗಿದೆ. ಜಿಲ್ಲಾ ಕಚೇರಿಯಿಂದ ಎಲ್ಲರ ಮಾಹಿತಿಯನ್ನು ಕೇಂದ್ರ ಕಚೇರಿಗೆ ಒದಗಿಸಲಾಗಿದೆ. ಬಾಕಿ 28 ಸಾವಿರ ಫಲಾನುಭವಿಗಳ ಖಾತೆಗೆ ನೆರವಿನ ಹಣ ಜಮೆ ಮಾಡಲು ಖಾತೆದಾರರ ಆಧಾರ್‌ ಜೋಡಣೆ ಹಾಗೂ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಪರಿಶೀಲನೆ ಕಾರ್ಯ ಪೂರ್ಣಗೊಂಡ ನಂತರ ಕೇಂದ್ರ ಕಚೇರಿಯಿಂದಲೇ ನೇರವಾಗಿ ಕಾರ್ಮಿಕರ ಖಾತೆಗೆ ಹಣ ಜಮೆಯಾಗಲಿದೆ ಎಂದು ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಮಾಹಿತಿ ನೀಡಿದರು.

ವಲಸೆ ಕಾರ್ಮಿಕರಿಗೆ, ಅಲೆಮಾರಿಗಳಿಗೆ, ನಿರ್ಗತಿಕರಿಗೆ ಈಗಾಗಲೇ ಆಹಾರ ಕಿಟ್‌ಗಳನ್ನು ನೀಡಿದ್ದೀರಿ. ಆದರೆ ಬಹಳಷ್ಟು ಕಾರ್ಮಿಕರ ಬೇಡಿಕೆ ಸಲ್ಲಿಸಿ ಅಡುಗೆ ಎಣ್ಣೆ, ಕಾರದ ಪುಡಿ, ಟೂತ್‌ಪೇಸ್ಟ್‌, ಸಾಬೂನು ಬೇಡಿಕೆಗಳನ್ನು ಸಲ್ಲಿಸುತ್ತಿದ್ದಾರೆ. ದುಡಿಮೆ ಇಲ್ಲದ ಈ ಸಂದರ್ಭದಲ್ಲಿ ಆಹಾರ ಪೊಟ್ಟಣದ ಜತೆಗೆ ಅಗತ್ಯ ಸಾಮಗ್ರಿಗಳನ್ನು ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ಈ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಉಪಕರಣಗಳ ವ್ಯವಸ್ಥೆ, ಕೃಷಿ ಚಟುವಟಿಕೆಗೆ ಅಗತ್ಯವಾದ ಸೇವೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಕಳಪೆ ಬಿತ್ತನೆ ಬೀಜ ದಾಸ್ತಾನು ಮಾಡಿದ ಕೋಲ್ಡ್‌ ಸ್ಟೋರೇಜ್‌ ಸೀಜ್‌ ಮಾಡಲಾಗಿದೆ. ಈ ಬೀಜಗಳನ್ನು ಬೇರೆಡೆ ಸ್ಥಳಾಂತರಿಸಿ ಕೋಲ್ಡ್‌ ಸ್ಟೋರೆಜ್‌ಗಳನ್ನು ಖಾಲಿ ಮಾಡಿಕೊಡಲು ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಲಾಕ್‌ಡೌನ್‌ ಅವಧಿಯಲ್ಲಿ ಜನರಿಗೆ ಬೇಕಾದ ದಿನಸಿ, ತರಕಾರಿ ಅಗತ್ಯ ವಸ್ತುಗಳ ಪೂರೈಕೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿದರು. ಕ್ವಾರಂಟೈನ್‌ ಮಾಹಿತಿ, ಮನೆ ಮನೆ ಆರೋಗ್ಯ ತಪಾಸಣೆ, ತುರ್ತು ಹೆಲ್ತ್‌ ಚೆಕಪ್‌ ಮಾಹಿತಿ, ಜಿಲ್ಲೆಯಿಂದ ಲ್ಯಾಬ್‌ಗೆ ಕಳಿಸಲಾದ ರಕ್ತ ಮತ್ತು ಗಂಟಲು ದ್ರವದ ಮಾದರಿಗಳ ಸಂಗ್ರಹ ಹಾಗೂ ಲ್ಯಾಬ್‌ಗೆ ಕಳಿಸಲು ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿ ಪಡೆದುಕೊಂಡರು. ತ್ವರಿತವಾಗಿ ಸ್ಕ್ರೀನಿಂಗ್‌ ಕಾರ್ಯವನ್ನು ಪೂರ್ಣಗೊಳಿಸಲು ಸಲಹೆ ನೀಡಿದರು.

ಚೆಕ್‌ಪೋಸ್ಟ್‌ ಚಟುವಟಿಕೆ ಕುರಿತಂತೆ ಮಾಹಿತಿ ಪಡೆದ ಅವರು, ಪ್ರತಿ ವಾಹನಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಎಲ್ಲ ವಾಹನಗಳನ್ನು ತಪಾಸಣೆ ಮಾಡಬೇಕು. ಗಡಿ ಭಾಗದಿಂದ ಸುಲಭವಾಗಿ ಒಳಗೆ ಪ್ರವೇಶ ಮಾಡಬಾರದು. ಈ ಕುರಿತಂತೆ ಕ್ರಮ ವಹಿಸಲು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಕೊರೋನಾ ನಿಯಂತ್ರಣ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಮಾಹಿತಿ ನೀಡಿದರು. ವಿವಿಧ ರಾಜ್ಯ ಮತ್ತು ವಿದೇಶಗಳಿಂದ 219 ಜನ ಜಿಲ್ಲೆಗೆ ಆಗಮಿಸಿದ್ದು, ಈ ಪೈಕಿ 217 ಜನರ ಹೋಂ ಕ್ವಾರಂಟೈನ್‌ ಅವಧಿ ಮುಗಿದಿದೆ. ಎರಡು ಜನ ಮಾತ್ರ ಹೋಂ ಕ್ವಾರಂಟೈನ್‌ಲ್ಲಿದ್ದಾರೆ. ಜಿಲ್ಲೆಯಲ್ಲಿರುವ ರಾಜ್ಯದ ವಿವಿಧ ಜಿಲ್ಲೆಯ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಅವರನ್ನು ತಮ್ಮ ಗ್ರಾಮಕ್ಕೆ ಕಳಿಸುವ ಕಾರ್ಯ ಪ್ರಗತಿಯಲ್ಲಿದೆ. ಮಠಗಳು, ಸ್ವಯಂಸೇವಾ ಸಂಸ್ಥೆಗಳು, ತಹಸೀಲ್ದಾರಗಳ ಮೂಲಕವೇ ಆಹಾರ ಕಿಟ್‌ ವಿತರಣೆಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಡಾ. ದಿಲೀಷ್‌ ಶಶಿ, ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗರಾಜ ನಾಯಕ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಇತರರು ಉಪಸ್ಥಿತರಿದ್ದರು.