ಕೊರೋನಾ ಕಾಟ: 'ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಮತ್ತಷ್ಟು ಬಿಗಿ'
ಕ್ವಾರಂಟೈನ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ| ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ| ಜಿಲ್ಲೆಗೆ ಮಹಾರಾಷ್ಟ್ರ ರಾಜ್ಯದಿಂದ ಈವರೆಗೆ 21,113 ಜನ ವಲಸಿಗರ ಅಗಮನ| ಈವರೆಗೆ 21,015 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನೆ| 16,514 ಜನರ ವರದಿ ನೆಗೆಟಿವ್, 127 ಪಾಸಿಟಿವ್ ಪ್ರಕರಣಗಳು ದೃಢ|
ವಿಜಯಪುರ(ಜೂ.04): ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಹೊರ ರಾಜ್ಯಗಳಿಂದ ಆಗಮಿಸಿದವರನ್ನು ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದರು.
ನಗರದ ನೂತನ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹೊರ ರಾಜ್ಯದಿಂದ ಬರುವವರಿಗೆ ಜಿಲ್ಲೆಯ ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ಮತ್ತಷ್ಟು ಬಿಗಿಗೊಳಿಸಬೇಕು. ಕ್ವಾರಂಟೈನ್ ಕೇಂದ್ರಗಳ ಹಾಗೂ ಹೋಮ್ ಕ್ವಾರಂಟೈನ್ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಕಂಟೈನ್ಮೆಂಟ್ ವಲಯಗಳ ಸೂಕ್ತ ನಿರ್ವಹಣೆಯಾಗಬೇಕು. ಕೋವಿಡ್-19 ಸಂಬಂಧಿಸಿದಂತೆ ಯಾವುದೇ ಲೋಪದೋಷಗಳಾಗದಂತೆ ಕಾರ್ಯ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ವಿಜಯಪುರ: ಸಾಂಸ್ಥಿಕ ಕ್ವಾರಂಟೈನ್‌ಲ್ಲಿ ಲೋಪವಾಗದಿರಲಿ, ಸಚಿವೆ ಜೊಲ್ಲೆ
ಎನ್‌ಆರ್‌ಇಜಿಎ ಯೋಜನೆಯಡಿ ಹೊರರಾಜ್ಯದಿಂದ ಜಿಲ್ಲೆಗೆ ಆಗಮಿಸಿದ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ರೈತರಿಗೆ ಮುಂಗಾರು ಸಂದರ್ಭದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅದರಂತೆ ರೈತರಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಡಿಎಪಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಸಮರ್ಪಕ ವಿತರಣೆಯಾಗಬೇಕು. ರೈತರಿಗೆ ಯಾವುದೇ ತೊಂದರೆಗಳಾಗದಂತೆ ಕಾರ್ಯ ನಿರ್ವಹಿಸಬೇಕು ಎಂದರು.
ಹೂ ಬೆಳೆಗಾರರು, ಹಣ್ಣು ತರಕಾರಿ ಬೆಳೆಗಾರರಿಗೆ ಸರ್ಕಾರಿ ಮಾರ್ಗಸೂಚಿಯಂತೆ ಬೆಳೆಹಾನಿ ಪರಿಹಾರ ಧನ ಕಲ್ಪಿಸಬೇಕು. ಮದುವೆಗಳಿಗಾಗಿ ಮಂಗಲ ಕಾರ್ಯಾಲಯಗಳನ್ನು ಕಾಯ್ದಿರಿಸಿ, ಲಾಕ್‌ಡೌನ್‌ದಿಂದ ಸಮಸ್ಯೆ ಎದುರಿಸುತ್ತಿರುವ ಮತ್ತು ಠೇವಣಿ ಹಣ ನೀಡಿರುವವರಿಗೆ ಮರಳಿ ಹಣ ದೊರಕಿಸಿ ಕೊಡುವುದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 22 ಕಂಟೈನ್ಮೆಂಟ್ ವಲಯಗಳನ್ನು ನಿರ್ಮಿಸಲಾಗಿದ್ದು, 5 ಕಂಟೈನ್ಮೆಂಟ್ ವಲಯಗಳು ರದ್ಧತಿಯಾಗಿವೆ. ಸದ್ಯಕ್ಕೆ 17 ಕಂಟೈನ್ಮೆಂಟ್ ವಲಯಗಳು ಚಾಲ್ತಿಯಲ್ಲಿದ್ದು, ಇವುಗಳ ಮೇಲೆ ಪೂರ್ತಿ ನಿಗಾ ಇಡಲಾಗಿದೆ. ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿರುವ ವಲಸೆ ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 576 ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿದ್ದು, ಈ ಕ್ವಾರಂಟೈನ್ ಕೇಂದ್ರಗಳಲ್ಲಿ ಒಟ್ಟು 26324 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, 23,834 ಜನರು ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, ಹೋಂ ಕ್ವಾರಂಟೈನ್ ಮಾಡಿ ನಿಗಾ ಇಡಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 133 ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳು ಚಾಲ್ತಿಯಲ್ಲಿದ್ದು, ಈ ಕ್ವಾರಂಟೈನ್ ಕೇಂದ್ರಗಳಲ್ಲಿ 2503 ಜನರನ್ನು ನಿಗಾ ಇಡಲಾಗಿದೆ ಎಂದರು.
ಜಿಲ್ಲೆಗೆ ಮಹಾರಾಷ್ಟ್ರ ರಾಜ್ಯದಿಂದ ಈವರೆಗೆ 21,113 ಜನ ವಲಸಿಗರು ಆಗಮಿಸಿದ್ದು, ಈವರೆಗೆ 21,015 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇವುಗಳಲ್ಲಿ 16,514 ಜನರ ವರದಿ ನೆಗೆಟಿವ್ ಬಂದಿದ್ದು, 127 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇನ್ನೂ 4,432 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ. ಜಿಲ್ಲೆಗೆ ಮಹಾರಾಷ್ಟ್ರದಿಂದ 21,113, ಗೋವಾ ರಾಜ್ಯದಿಂದ 2,982, ಅನ್ಯ ರಾಜ್ಯಗಳಿಂದ 6676 ಜನರು ಆಗಮಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ಆಗಮಿಸಿದ 27,384 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು 127 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆæ. 7458 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 19863 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 5 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 58 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 64 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 24511 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 19952 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 4432 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದರು.
ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್, ಮಹಾನಗರ ಪಾಲಿಕೆ ಆಯುಕ್ತ ಶ್ರೀಹಷÜರ್ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಮಹೇಂದ್ರ ಕಾಪ್ಸೆ, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ್, ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ತಹಸೀಲ್ದಾರ ಮೋಹನ್‌ಕುಮಾರಿ ಸೇರಿದಂತೆ ಇತರರಿದ್ದರು.
News In 100 Seconds: ಈ ಕ್ಷಣದ ಪ್ರಮುಖ ಸುದ್ದಿಗಳು
"