Asianet Suvarna News Asianet Suvarna News

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯನ್ನ ಹುಡುಕಿಕೊಡಿ!

ಒಂದೆರಡು ಬಾರಿ ಬಂದು ಹೋದವರು ಮತ್ತೆ ಬಂದಿಲ್ಲ| ಆನೆಗೊಂದಿ ಉತ್ಸವ, ಗವಿಮಠ ಜಾತ್ರೆಯ ಸಿದ್ಧತೆ ಸಭೆ ಇಲ್ಲ| ಪ್ರಮುಖ ಕಾರ್ಯಗಳು ಇದ್ದರೂ ಸಚಿವರು ಬಾರದಿರುವುದು ವ್ಯಾಪಕ ಟೀಕೆಗೆ ಕಾರಣ| ತಿಂಗಳಿಗೊಮ್ಮೆ ನಾನು ಬರುತ್ತೇನೆ. ಇಡೀ ದಿನ ಅಭಿವೃದ್ಧಿ ಕಾರ್ಯಗಳ ರಿವ್ಯೂ ಮಾಡುತ್ತೇನೆ ಎಂದು ಹೇಳಿ ಹೋದವರು ಒಂದೂವರೆ ತಿಂಗಳಾದರೂ ಬಂದಿಲ್ಲ|

District Incharge Minister Laxman Savadi Did not Come to Koppal Last One Month
Author
Bengaluru, First Published Jan 2, 2020, 7:51 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.02): ಜಿಲ್ಲೆಯಲ್ಲಿ ಐದು ವರ್ಷಗಳ ಬಳಿಕ ಆನೆಗೊಂದಿ ಉತ್ಸವ ನಡೆಯುತ್ತಿದೆ. ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಎರಡನೇ ಬೆಳೆಗೆ ನೀರು ಬಿಡುವ ನಿರ್ಧಾರವನ್ನು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇತ್ತ ತಿರುಗಿಯೂ ನೋಡುತ್ತಿಲ್ಲ. ಅಕ್ಟೋಬರ್‌ ಮೊದಲ ವಾರದಲ್ಲಿ ಬಂದು ಹೋದವರು ಇತ್ತ ತಲೆ ಹಾಕಿಯೂ ಇಲ್ಲ. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿಕೊಡಿ ಎಂದು ಜಿಲ್ಲೆಯ ಜನರು ಕೇಳುತ್ತಿದ್ದಾರೆ. ಅವರ ಉಸ್ತುವಾರಿಯಲ್ಲಿಯೇ ನಡೆಯಬೇಕಾದ ಪ್ರಮುಖ ಕಾರ್ಯಗಳು ಇದ್ದರೂ ಸಚಿವರು ಬಾರದಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ತಿಂಗಳಿಗೊಮ್ಮೆ ನಾನು ಬರುತ್ತೇನೆ. ಇಡೀ ದಿನ ಅಭಿವೃದ್ಧಿ ಕಾರ್ಯಗಳ ರಿವ್ಯೂ ಮಾಡುತ್ತೇನೆ ಎಂದು ಹೇಳಿ ಹೋದವರು ಒಂದೂವರೆ ತಿಂಗಳಾದರೂ ಬಂದಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸೆ. 17ರಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಲಕ್ಷ್ಮಣ ಸವದಿ ನೇಮಕವಾಗುತ್ತಾರೆ. ಆದರೂ ಅಂದು ಸಚಿವ ಸಿ.ಸಿ. ಪಾಟೀಲ ನಿಗದಿಯಂತೆ ಕಲ್ಯಾಣ ಕರ್ನಾಟಕ ಧ್ವಜಾರೋಹಣ ನೆರವೇರಿಸುತ್ತಾರೆ. ಅಂದು ರಾತ್ರಿಯೇ ಸಚಿವರು ಹೀಗೆ ಬಂದು ಹಾಗೆ ಹೋಗುತ್ತಾರೆ.

ಇದಾದ ಮೇಲೆ ಅಕ್ಟೋಬರ್‌ 21ರಂದು ದ್ರಾಕ್ಷಿಮೇಳ ಉದ್ಘಾಟನೆ ಮತ್ತು ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸುತ್ತಾರೆ. ನಂತರ ನಂ. 1ರಂದು ಕನ್ನಡ ರಾಜ್ಯೋತ್ಸವಕ್ಕೆ ಹಾಗೂ ನ. 21 ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಗೆ ಹಾಜರಾಗಿ, ಮುನಿರಾಬಾದ್‌ನಿಂದಲೇ ಪ್ರಯಾಣ ಬೆಳೆಸುತ್ತಾರೆ.

ತಿರುಗಿಯೂ ನೋಡಿಲ್ಲ:

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನ. 21ರಂದು ಬಂದು ಹೋದ ನಂತರ ಮತ್ತೆ ಇತ್ತ ಮುಖವನ್ನೇ ಮಾಡಿಲ್ಲ. ಜಿಲ್ಲೆಯಲ್ಲಿ ಆನೆಗೊಂದಿ ಉತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಸಿದ್ಧತೆ ಭರದಿಂದ ಸಾಗಿದೆ. ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಸುಮಾರು ನಾಲ್ಕಾರು ಸಭೆಗಳನ್ನು ನಡೆಸಲಾಗಿದೆ.

ಇದ್ಯಾವುದನ್ನು ನೋಡುವುದಕ್ಕೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಗೆ ಪುರಸೊತ್ತು ಇಲ್ಲ ಎಂದು ಕಾಣುತ್ತಿದೆ. ಐತಿಹಾಸಿಕ ಆನೆಗೊಂದಿ ಉತ್ಸವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಒಂದೇ ಒಂದು ಪೂರ್ವಭಾವಿ ಸಭೆ ನಡೆಸಿಲ್ಲ. ಎಲ್ಲವನ್ನು ಜಿಲ್ಲಾಧಿಕಾರಿ ಪಿ. ಸುನಿಲ್‌ ಕುಮಾರ ಅವರೇ ನೋಡಿಕೊಳ್ಳುತ್ತಿದ್ದಾರೆ ಮತ್ತು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಅನುದಾನದ ಅಭಾವ:

ಆನೆಗೊಂದಿ ಉತ್ಸವಕ್ಕೆ ಅನುದಾನದ ಕೊರತೆ ಕಾಣುತ್ತಿದೆ. ಕೇವಲ . 1 ಕೋಟಿ ಬಿಡುಗಡೆಯಾಗಿದ್ದು, ಸ್ಥಳೀಯವಾಗಿ . 1 ಕೋಟಿ ಕ್ರೋಡಿಕರಿಸಿಕೊಳ್ಳಲಾಗಿದೆ. ಸುಮಾರು 50-60 ಲಕ್ಷ ಅನುದಾನದ ಕೊರತೆ ಇದೆ ಎನ್ನಲಾಗುತ್ತಿದೆ. ಆದರೆ, ಜಿಲ್ಲಾಡಳಿತ ಇರುವ ಅನುದಾನದಲ್ಲಿ ಯಶಸ್ವಿಯಾಗಿ ಮಾಡಲು ಶತಾಯ ಶ್ರಮಿಸುತ್ತಿದ್ದರೆ, ಬಿಜೆಪಿಯ ಶಾಸಕರು ಇನ್ನಷ್ಟುಅನುದಾನ ಬಂದೇ ಬರುತ್ತದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ, ಕಾರ್ಯಕ್ರಮಗಳನ್ನು ಅಂತಿಮ ಮಾಡುವುದು ಜಿಲ್ಲಾಡಳಿತಕ್ಕೆ ಕಷ್ಟವಾಗುತ್ತಿದೆ.

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಕುರಿತು ಈ ಹಿಂದಿನ ಸಚಿವರೆಲ್ಲರೂ ಪೂರ್ವಭಾವಿ ಸಭೆಯನ್ನು ಪ್ರತ್ಯೇಕವಾಗಿಯೇ ಮಾಡುತ್ತಿದ್ದರು. ಅಲ್ಲದೆ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಒಂದಿಷ್ಟುಮುಂಜಾಗ್ರತೆಗಳನ್ನು ಕೈಗೊಳ್ಳಲು ಸಚಿವರು ಸೂಚನೆ ನೀಡುತ್ತಿದ್ದರು. ಆದರೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಗಂಭೀರ ಸಮಸ್ಯೆ:

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಎರಡನೇ ಬೆಳೆಗೆ ನೀರು ಬಿಡುವ ಕುರಿತು ಸ್ಪಷ್ಟನಿರ್ಧಾರವನ್ನು ಇದುವರೆಗೂ ತೆಗೆದುಕೊಳ್ಳಲು ಆಗಿಲ್ಲ. ಪ್ರಥಮ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಸ್ಪಷ್ಟವಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನವರಿ ಮೊದಲ ವಾರದಲ್ಲಿ ಸಭೆ ನಡೆಸುವುದಾಗಿ ಸ್ವತಃ ಲಕ್ಷ್ಮಣ ಸವದಿ ಅವರೇ ಹೇಳಿದ್ದರು. ಈಗ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದ ನೀರು ಉಳಿದಿಲ್ಲವಾದ್ದರಿಂದ ಈ ಕುರಿತು ಸ್ಪಷ್ಟನಿಲುವು ತೆಗೆದುಕೊಳ್ಳಲು ತುರ್ತಾಗಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಆದರೆ, ಸಚಿವರು ಮಾತ್ರ ಇತ್ತ ಮುಖವನ್ನೇ ಮಾಡದೆ ಇರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಜಿಲ್ಲಾ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ಎರಡನೇ ಬೆಳೆಗೆ ನೀರು ಬಿಡುವ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯರಾಗಿದ್ದರೆ ಇಲ್ಲಿಯೇ ಇರುತ್ತಿದ್ದರು. ಆದರೆ, ಇವರು ಬೇರೆ ಜಿಲ್ಲೆಯವರಾಗಿರುವುದರಿಂದ ಇತ್ತ ಬರುತ್ತಲೇ ಇಲ್ಲ ಎಂದು ಕೊಪ್ಪಳ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ. 

Follow Us:
Download App:
  • android
  • ios