ಬಳ್ಳಾರಿ(ಜು.08): ಕೆಲವು ಗುಂಪುಗಳು ಜಿಂದಾಲ್‌ ಕಾರ್ಖಾನೆಯನ್ನ ಟಾರ್ಗೆಟ್‌ ಮಾಡಿವೆ. ಅದಕ್ಕೆ ಏನೂ ಮಾಡಲಾಗುವುದಿಲ್ಲ. ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅದನ್ನು ನಿಯಂತ್ರಿಸಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ನಗರದ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಂದಾಲ್‌ನಿಂದ ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಹಬ್ಬಿಲ್ಲ ಎಂದು ಹೇಳುವುದಿಲ್ಲ. ಜಿಂದಾಲ್‌ನಿಂದಲೇ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಬಂದಿವೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತು. ಹಾಗಂತ ಜಿಂದಾಲ್‌ ಅನ್ನು ಲಾಕ್‌ಡೌನ್‌ ಮಾಡಿದ್ರೆ ಕೊರೋನಾ ರಾಜ್ಯ-ದೇಶಬಿಟ್ಟು ಹೋಗುತ್ತಾ? ಹೋಗುವುದಿಲ್ಲ. ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಕೊಳ್ಳುತ್ತಿದ್ದೇವೆ ಎಂದರು.

ಬಳ್ಳಾರಿ: ಆರೋಗ್ಯಸೇವೆ ಒದಗಿಸುವ 108 ಜನರಿಗೆ ಕೊರೋನಾ ಸೊಂಕು ದೃಢ

ನಗರದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡಿರುವುದರಿಂದ ಸಿಬ್ಬಂದಿ ಒಂದಷ್ಟುಆತಂಕ ಎದುರಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಆದರೆ, ಆಸ್ಪತ್ರೆ ವಾತಾವರಣ ಕೆಲವೊಮ್ಮೆ ಭಯಹುಟ್ಟಿಸುತ್ತದೆ. ಪದೇ ಪದೇ ಸಾವು ಸಂಭವಿಸುವುದರಿಂದ ಭಯ ಪಡುವುದು ಸಹಜ. ಆಸ್ಪತ್ರೆಯಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದು ವೈದ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟವರು ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿದ್ದವರಾಗಿದ್ದಾರೆ. ನೇರವಾಗಿ ಕೊರೋನಾದಿಂದ ಮೃತಪಟ್ಟಿರುವುದು ಒಬ್ಬೇ ಒಬ್ಬ ಯುವಕ ಮಾತ್ರ ಎಂದ ಸಚಿವ ಆನಂದಸಿಂಗ್‌, ಕೊರೋನಾ ವೈರಸ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.