ಬಳ್ಳಾರಿ: ಆರೋಗ್ಯಸೇವೆ ಒದಗಿಸುವ 108 ಜನರಿಗೆ ಕೊರೋನಾ ಸೊಂಕು ದೃಢ
ಕೊರೋನಾ ಬಗ್ಗೆ ಭಯಪಡುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ| ಬಳ್ಳಾರಿ ಜಿಲ್ಲೆಯಲ್ಲಿ ಭಯಪಡಿಸುವವರ ಸಂಖ್ಯೆ ಹೆಚ್ಚುತ್ತಿರುವುದು ದುಃಖಕರ ಸಂಗತಿ| ಕೊರೋನಾ ಹಾಗೂ ಕೊರೋನಾ ರೋಗಿಗಳ ವಿಷಯದಲ್ಲಿ ಯಾವುದೇ ರೀತಿಯ ಭಯಪಡುವ ಅವಶ್ಯಕತೆಯಿಲ್ಲ. ಸ್ವತಃ ನಾನೇ ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾಗಿ ಆತ್ಮಸ್ಥೈರ್ಯ ತುಂಬುವೆ: ಸಚಿವ ಆನಂದ ಸಿಂಗ್|
ಬಳ್ಳಾರಿ(ಜು.08): ರೋಗ ಲಕ್ಷಣಗಳಿಲ್ಲದವರನ್ನು ದಾಖಲಿಸಲಾಗುತ್ತಿರುವ ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿ ಗುಣಮಟ್ಟದ ಆಹಾರ, ಸ್ವಚ್ಛತೆ ಬಗ್ಗೆ ದೂರುಗಳು ಬರುತ್ತಿದ್ದು, ಈ ಸಮಸ್ಯೆ ತಕ್ಷಣ ನಿವಾರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್ಪಿ ಹಾಗೂ ಡಿಎಚ್‌ಒ ಅವರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಆರೋಗ್ಯ ಸೇವೆ ಸಲ್ಲಿಸುತ್ತಿರುವ 43 ಸರ್ಕಾರಿ ಹಾಗೂ 4 ಜನ ಖಾಸಗಿ ವೈದ್ಯರು ಸೇರಿ, ಸ್ಟಾಪ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಡಿ ಗ್ರೂಪ್ ಸಿಬ್ಬಂದಿ ಸೇರಿ 108 ಜನರಿಗೆ ಕೊರೋನಾ ಸೊಂಕು ದೃಢಪಟ್ಟಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದ ಸಚಿವರು, ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ವಿವರವಾದ ಮಾಹಿತಿ ಪಡೆದರು.
ಬಳ್ಳಾರಿ: ಮತ್ತೆ 45 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ
ಕೊರೋನಾ ಬಗ್ಗೆ ಭಯಪಡುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದೆ. ಆದರೆ, ಜಿಲ್ಲೆಯಲ್ಲಿ ಭಯಪಡಿಸುವವರ ಸಂಖ್ಯೆ ಹೆಚ್ಚುತ್ತಿರುವುದು ದುಃಖಕರ ಸಂಗತಿ. ಕೊರೋನಾ ಹಾಗೂ ಕೊರೋನಾ ರೋಗಿಗಳ ವಿಷಯದಲ್ಲಿ ಯಾವುದೇ ರೀತಿಯ ಭಯಪಡುವ ಅವಶ್ಯಕತೆಯಿಲ್ಲ. ಸ್ವತಃ ನಾನೇ ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾಗಿ ಆತ್ಮಸ್ಥೈರ್ಯ ತುಂಬುವೆ ಮತ್ತು ಈ ಪ್ರಮಾಣದಲ್ಲಿ ಚಿಕಿತ್ಸೆ ನೀಡಿದಾಗಿಯೂ ಈ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ದೃತಿಗೆಟ್ಟಿರುವ ವೈದ್ಯರಿಗೂ ಧೈರ್ಯ ತುಂಬುವೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ 1342 ಪ್ರಕರಣಗಳು ದೃಢಪಟ್ಟಿದ್ದು, 8988 ಪ್ರಥಮ ಸಂಪರ್ಕಿತರು, 3472 ಜನರು ದ್ವಿತೀಯ ಸಂಪರ್ಕಿತರಿದ್ದಾರೆ ಎಂದರು. 488 ಜನ ಸೊಂಕಿತರು ಜಿಂದಾಲ್‌ಗೆ ಸೇರಿದವರಾಗಿದ್ದಾರೆ ಮತ್ತು ಈ ಪ್ರದೇಶದಲ್ಲಿ 66 ಕಂಟೈನ್ಮೆಂಟ್ ಝೋನ್ ಆಗಿ ಗುರುತಿಸಲಾಗಿದೆ. ಇಡೀ ಜಿಲ್ಲೆಯಾದ್ಯಂತ 301 ಸಕ್ರಿಯ ಕಂಟೈನ್ಮೆಂಟ್ ಝೋನ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಡಿಸಿ ಎಸ್.ಎಸ್. ನಕುಲ್ ಅವರು ಸಚಿವರ ಗಮನಕ್ಕೆ ತಂದರು.
ವೈದ್ಯರು, ಲ್ಯಾಬ್ ಟೆಕ್ನಿಶಿಯನ್, ಸ್ಟಾಪ್ ನರ್ಸ್, ಗ್ರೂಪ್ ಡಿ ಗೆ ಅರ್ಜಿ ಆಹ್ವಾನಿಸಲಾಗಿತ್ತು. ಉಳಿದವುಗಳೆಲ್ಲ ಭರ್ತಿಯಾದ್ರೂ ಸಹ ವೈದ್ಯರ ಹುದ್ದೆಗೆ ಒಂದೇ ಒಂದು ಅರ್ಜಿ ಕೂಡ ಬರಲಿಲ್ಲ ಎಂದು ಜಿಲ್ಲಾಧಿಕಾರಿ ನಕುಲ್ ಹೇಳಿದರು. ಬಳ್ಳಾರಿ ಜಿಲ್ಲೆಯ ಕೊರೋನಾ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು. ಜಿಪಂ ಸಿಇಒ ಕೆ. ನಿತೀಶ್, ಎಸ್ಪಿ ಸಿ.ಕೆ. ಬಾಬಾ, ಡಿಎಚ್‌ಒ ಡಾ. ಜನಾರ್ಧನ್ ಮತ್ತಿತರರು ಇದ್ದರು.