Asianet Suvarna News Asianet Suvarna News

ಜಿಲ್ಲೆ ಸ್ವಚ್ಛ ಪ್ರವಾಸಿ ತಾಣ ಮಹತ್ತರ ಕನಸು: ಡಿಸಿ ರಮೇಶ್‌

ಜಿಲ್ಲೆಯನ್ನು ಅತ್ಯಂತ ಸ್ವಚ್ಛವಾದ ಪ್ರವಾಸಿ ತಾಣವಾಗಿ ಘೋಷಿಸುವ ಮಹತ್ತರ ಕನಸಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಹೇಳಿದರು.

District clean and tourist destination is a great dream says DC Ramesh rav
Author
First Published Oct 2, 2022, 9:49 AM IST

ಚಿಕ್ಕಮಗಳೂರು (ಅ.2) : ಜಿಲ್ಲೆಯನ್ನು ಅತ್ಯಂತ ಸ್ವಚ್ಛವಾದ ಪ್ರವಾಸಿ ತಾಣವಾಗಿ ಘೋಷಿಸುವ ಮಹತ್ತರ ಕನಸಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಹೇಳಿದರು. ಜಿಲ್ಲಾ ಪಂಚಾಯಿತಿ ವತಿಯಿಂದ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ‘ಸ್ವಚ್ಛತಾ ಹೀ ಸೇವಾ ಆಂದೋಲನ’ ಅಂಗವಾಗಿ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಮಗ್ರ ಸ್ವಚ್ಛತಾ ಕಾರ್ಯಕ್ರಮ- ಸ್ವಚ್ಛತಾ ಶ್ರಮದಾನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

Chikkamagaluru: ರಾಷ್ಟ್ರಪಿತ ಗಾಂಧೀಜಿ ನೆನೆಪಿಗಾಗಿ ಕಟ್ಟಿರೋ ಗುಡಿ, ನಿತ್ಯವೂ ಮಹಾತ್ಮನಿಗೆ ಪೂಜೆ

ಭಾರತವು ಸ್ವಚ್ಛವಾದ ದೇಶ ಆಗಬೇಕಾದರೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಸ್ವಚ್ಛತಾ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಅಂತರ ರಾಷ್ಟ್ರೀಯ ಭೂಪಟದಲ್ಲಿ ಭಾರತಕ್ಕೆ ಅಗ್ರಸ್ಥಾನವನ್ನು ದೊರಕಿಸಲು ಸರ್ಕಾರ ಶ್ರಮಿಸುತ್ತಿದೆ. ಆದರೆ, ಸ್ವಚ್ಛತಾ ವಿಷಯದಲ್ಲಿ ಭಾರತ ಹಿಂದುಳಿದಿದ್ದು, ನಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳದಿರುವುದು ಇದಕ್ಕೆ ಕಾರಣ ಎಂದು ಹೇಳಿದರು.

ಜಿಲ್ಲೆಯಲ್ಲಿನ ಸುಂದರ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಸ್ವಚ್ಛತೆಯಿಂದ ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ. ಸುಮಾರು 500 ಶಾಲಾ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿರುವುದು ಸಂತಸದ ವಿಚಾರ. ತಮ್ಮ ಮನೆಯವರು, ನೆರೆಹೊರೆಯವರಿಗೆ ಸ್ವಚ್ಛತೆಯ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವುದು ಅವರ ಜವಾಬ್ದಾರಿ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಮಾತನಾಡಿ, ಇಂದಿನ ಜನತೆಗೆ ಹಾಗೂ ಮುಂದಿನ ಪೀಳಿಗೆಗೆ ಪರಿಸರವನ್ನು ಸ್ವಚ್ಛವಾಗಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಸ್ವಚ್ಛತೆಯು ಮಹಾತ್ಮ ಗಾಂಧಿ ಪ್ರಮುಖ ತತ್ವಗಳಲ್ಲಿ ಒಂದಾಗಿತ್ತು. ಅವರ ಆಶಯಗಳನ್ನು ಈಡೇರಿಸಿದಾಗ ಮಾತ್ರ ಗಾಂಧಿ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಸ್ವಚ್ಛ ಭಾರತ್‌ ಮಿಷನ್‌ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ, ಗಾಂಧಿ ಜಯಂತಿ ಆಚರಣೆ ಪೂರ್ವವಾಗಿ ಸೆಪ್ಟೆಂಬರ್‌ 15ರಿಂದ ಅಕ್ಟೋಬರ್‌ 2ರವರೆಗೆ ಜಿಲ್ಲೆಯ ಎಲ್ಲ ಗಾಮ ಪಂಚಾಯಿತಿಗಳಲ್ಲಿ ಸುಮಾರು 21 ಲಕ್ಷ ಜನರಿಗೆ ಸ್ವಚ್ಛತೆಯ ಅರಿವು ಹಾಗೂ ಸ್ವಯಂಪ್ರೇರಿತವಾಗಿ ಸ್ವಚ್ಛತೆ ಮಾಡುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.

ಸಾಂಕೇತಿಕವಾಗಿ ಮುಳ್ಳಯ್ಯನಗಿರಿ ಭಾಗದ ಸೀತಾಳಯ್ಯನಗಿರಿ, ಕೈಮರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 38 ಸ್ವಚ್ಛವಾಹಿನಿ ವಾಹನಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ಕಾಫಿನಾಡಿನಲ್ಲಿ ನವರಾತ್ರಿ ಸಂಭ್ರಮ: ದುರ್ಗೆಯ ದರ್ಶನಕ್ಕೆ ಶೃಂಗೇರಿ, ಹೊರನಾಡಲ್ಲಿ ಭಕ್ತ ಸಾಗರ..!

ಅಪರ ಜಿಲ್ಲಾಧಿಕಾರಿ ಬಿ.ಆರ್‌.ರೂಪಾ ಸ್ವಚ್ಛತಾ ಪ್ರತ್ರಿಜ್ಞಾ ವಿಧಿ ಬೋಧಿಸಿದರು. ಗಿರಿಪ್ರದೇಶ ಸ್ವಚ್ಛತಾ ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಕ್ರಾಂತಿ, ಉಪವಿಭಾಗಾಧಿಕಾರಿ ರಾಜೇಶ್‌, ಜಿಲ್ಲಾ ರೆಸಾರ್ಚ್‌ ಅಸೋಸಿಯೇಷನ್‌ ಸದಸ್ಯರು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Follow Us:
Download App:
  • android
  • ios