ಮಂಡ್ಯ(ಮೇ.18): ಜಿಲ್ಲೆಯ ಜೀವನಾಡಿ ಮೈಶುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಜೀವ ತುಂಬ ಕೆಲಸಕ್ಕೆ ಮುಖ್ಯಮಂತ್ರಿಗಳು ಕೈ ಹಾಕಿದ್ದಾರೆ. ಕಾರ್ಖಾನೆಯ ಮಾಲೀಕರಾಗಿ ಸರ್ಕಾರವೇ ಆಡಳಿತ ನಿರ್ವಹಿಸಿದರೆ ಒ ಆ್ಯಂಡ್‌ ಎಂ (ಕಾರ್ಯ ಮತ್ತು ನಿರ್ವಹಣೆ) ಮಾದರಿಯಲ್ಲಿ ಕಾರ್ಖಾನೆ ಮುನ್ನಡೆಸಲು ಸಿಎಂ ಬಿ.ಎಸ್‌. ಯಡಿಯೂರಪ್ಪ ಅಸ್ತು ಎಂದಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಡಾ. ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಸಕ್ಕರೆ ಕಾರ್ಖಾನೆಯನ್ನು ಈ ಹಿಂದೆ ಲೀಸ್‌ ಆಧಾರದ ಮೇಲೆ ಖಾಸಗೀಕರಣಗೊಳಿಸುವ ಪ್ರಸ್ತಾವನೆ ಸಿಎಂ ಗಮನದಲ್ಲಿ ಇತ್ತು. ಆದರೆ ಮಂಡ್ಯ ರೈತರ ಹಿತ ಕಾಯುವ ಸಂಕಲ್ಪ ಬಿಜೆಪಿಯ ಹೆಗಲ ಮೇಲೆ ಇದ್ದುದ್ದರಿಂದ ಬಿಜೆಪಿ ಜಿಲ್ಲಾ ಸಮಿತಿ ಸಿಎಂ ಯಡಿಯೂರಪ್ಪನವರಿಗೆ ಮನÜವರಿಕೆ ಮಾಡಿಕೊಟ್ಟನಂತರ ತಮ್ಮ ನಿರ್ಧಾರವನ್ನು ಬದಲಿಸಿದರು ಎಂದು ಹೇಳಿದ್ದಾರೆ.

ಲಾಕ್‌ಡೌನ್ ಮಧ್ಯೆ ಸಾಮೂಹಿಕ ಪ್ರಾರ್ಥನೆ: ಧರ್ಮಗುರುವನ್ನು ತಹಸೀಲ್ದಾರ್‌ಗೆ ಒಪ್ಪಿಸಿದ ಜನ

ಸರ್ಕಾರದ ಅಧೀನದಲ್ಲೇ ಮಾಲೀಕತ್ವ :

ಕಂಪನಿಯ ಆಸ್ತಿಗಳು ಸರ್ಕಾರದ ಹಿಡಿತದಲ್ಲೇ ಉಳಿಯುತ್ತವೆ ಮತ್ತು ಸರ್ಕಾರಕ್ಕೆ ಹೆಚ್ಚು ಹೊರೆ ಆಗುವುದಿಲ್ಲ. ಗುತ್ತಿಗೆದಾರ ಕಾರ್ಖಾನೆಗೆ ನೌಕರರು ಹೊಸದಾಗಿ ಸೇರಿಸಿಕೊಂಡು ಕಂಪನಿ ನಡೆಸುತ್ತಾನೆ. ಇದಕ್ಕಾಗಿ ವರ್ಷಕ್ಕೆ ಸುಮಾರು 20 ಕೋಟಿ ರು. ವೆಚ್ಚ ತಗುಲಲಿದೆ. ಕಾರ್ಖಾನೆಯಲ್ಲಿ ಈಗ 14 ಕೋಟಿ ರು. ಮೌಲ್ಯದ ಸಕ್ಕರೆ ದಾಸ್ತಾನಿದೆ. 30 ಕೋಟಿ ರೂ. ಮೌಲ್ಯದ ಅನುಪಯುಕ್ತ ವಸ್ತುಗಳು ಇವೆ. ಇವುಗಳನ್ನು ಕ್ರೋಢೀಕರಿಸಿದಲ್ಲಿ 79 ಕೋಟಿ ರು.ಗಳಾಗಲಿದೆ. ಸರ್ಕಾರ 50 ರಿಂದ 60 ಕೋಟಿ ರು. ಅನುದಾನ ನೀಡಿದಲ್ಲಿ ಕಾರ್ಖಾನೆಯನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಬಹುದು ಎಂದು ಅಭಿಪ್ರಾಯಪಟ್ಟರು.

ನಿರ್ವಹಣೆಗೆ ದಕ್ಷ ಅಧಿಕಾರಿ ಬೇಕು:

ಕಂಪನಿಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯವಸ್ಥಾಪಕ ನಿರ್ದೇಶಕರು ಈ ತಿಂಗಳಲ್ಲಿ ನಿವೃತ್ತಿಯಾಗಲಿದ್ದಾರೆ. ದಕ್ಷ, ಪ್ರಾಮಾಣಿಕ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೆಶಕರನ್ನಾಗಿ ನಿಯೋಜಿಸಿದಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಲು ಸಾಧ್ಯ. ಜಿಲ್ಲೆಯ ಜನಪ್ರತಿನಿಧಿಗಳು ಖಾಸಗೀಕರಣ ಬೇಡ ಎಂದು ಈಗ ಹೇಳುತ್ತಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಹೊಸ ಕಾರ್ಖಾನೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. 100 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳುತ್ತಾರೆ. ಆದರೆ ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಸಿಬಿಐ ತನಿಖೆಗೆ ಒತ್ತಾಯ:

ಕಳೆದ 10 ವರ್ಷಗಳಿಂದ ಕಾರ್ಖಾನೆ ಪುನಶ್ಚೇತನಕ್ಕೆ 428 ಕೋಟಿ ರು. ನೀಡಲಾಗಿದೆ. ಆದರೆ ಕಾರ್ಖಾನೆ ವ್ಯವಸ್ಥೆ ಮಾತ್ರ ಸರಿಯಾಗಲೇ ಇಲ್ಲ. ಈ ಬಗ್ಗೆ ಈಗಾಗಲೇ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಕಾರ್ಖಾನೆಯಲ್ಲಿ ನಡೆದಿರುವ ಎಲ್ಲ ಅವ್ಯವಹಾರಗಳನ್ನೂ ಸಿಬಿಐ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.