ಮೈಸೂರು(ಮೇ.13):  ಮಹಾಮಾರಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಬೆಂಗಳೂರನ್ನೇ ಹಿಂದಿಕ್ಕಿ ಮೊದಲನೇ ಸ್ಥಾನದಲ್ಲಿ ನಿಲ್ಲಲು ಪೈಪೋಟಿ ನಡೆಸಿದ್ದ ಮೈಸೂರು ಜಿಲ್ಲೆಯ ಇದೀಗ ರೆಡ್‌ ಝೋನ್‌ನಿಂದ ಆರೇಂಜ್ ಝೋನ್‌ನತ್ತ ವಾಲುತ್ತಿದೆ. ಹೌದು, ಕಳೆದ 14 ದಿನಗಳಲ್ಲಿ ಮೈಸೂರಿನಲ್ಲಿ ಒಂದೇ ಒಂದು ಕೊರೊನಾ ಕೇಸ್ ದಾಖಲಾಗಿಲ್ಲ. ಇಂದಿನ ಮೀಡಿಯಾ ಬುಲೆಟಿನ್‌ನಲ್ಲಿಯೂ ಒಂದೂ ಕೇಸ್‌ ದೃಢಪಟ್ಟಿಲ್ಲ. 

ಈ ದಿನ ಕಳೆದರೆ ಮೈಸೂರು ಜಿಲ್ಲೆಯ ಆರೇಂಜ್ ಝೋನ್ ಆಗಲಿದೆ. ಕಳೆದ ಏಪ್ರಿಲ್ 30 ರಿಂದ ಮೈಸೂರು ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿಲ್ಲ. ಹೀಗಾಗಿ ಮೈಸೂರಿಗರಲ್ಲಿ ಕೊರೋನಾ ಆತಂಕ ನಿಧಾನವಾಗಿಯೇ ದೂರಾಗುತ್ತಿರುವ ಲಕ್ಷಣಗಳು ಗೋಚರವಾಗುತ್ತಿವೆ. 

ಸ್ಪಿರುಲಿನಾ ಚಿಕ್ಕಿಯಿಂದ ಕೊರೋನಾ ಹೋಗಲ್ಲ, ಯಾರಪ್ಪಾ ಹೇಳಿದ್ದು!

ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾಗೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ಸಕ್ಸಸ್ ಆಗಿದೆ. ಒಟ್ಟು 90 ಕೋವಿಡ್-19 ಸೋಂಕಿತರ ಪೈಕಿ ಈವರೆಗೆ 86 ಮಂದಿ ಗುಣಮುಖರಾಗಿ ಡಿಸ್ಚಾರ್ಚ್‌ ಆಗಿದ್ದಾರೆ.  ಸದ್ಯ 4 ಮಂದಿಗೆ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ರೆಡ್ ಝೋನ್ ವಲಯದಲ್ಲಿ 14 ದಿವಸದಲ್ಲಿ ಒಂದೇ ಒಂದು ಕೊರೋನಾ ಸೋಂಕು ಪತ್ತೆಯಾಗಿಲ್ಲ. ಮತ್ತೆ 14 ದಿನದಲ್ಲಿ ಯಾವುದೇ ಸೋಂಕು ಕಾಣಿಸಿಕೊಳ್ಳದಿದ್ದರೆ ಮೈಸೂರು ಜಿಲ್ಲೆ ಗ್ರೀನ್ ಝೋನ್‌ ಅಗಿ ಪರಿವರ್ತನೆಯಾಗಲಿದೆ. ನಂಜನಗೂಡಿನ ಜುಬಿಲಂಟ್, ತಬ್ಲಿಘಿ ಜಮಾತ್ ಪ್ರಕರಣಗಳಿಂದ ಮೈಸೂರು ಕೊರೋನಾ ಹಾಟ್ ಸ್ಪಾಟ್ ಆಗಿತ್ತು. 90 ಪ್ರಕರಣಗಳ ಪೈಕಿ ಮೈಸೂರು ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುವಲ್ಲಿ ಜುಬಿಲಂಟ್ ಪ್ರಕರಣವೇ ಸಿಂಹಪಾಲು(76) ಆಗಿತ್ತು. 

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಎಸ್ಪಿ ರಿಷ್ಯಂತ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಡಿಸಿಪಿ ಡಾ.ಎ.ಎನ್. ಪ್ರಕಾಶಗೌಡ, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಪರಿಶ್ರಮದಿಂದ ಸಾಂಸ್ಕೃತಿಕ ನಗರಿ ಕಿತ್ತಳೆ ಬಣ್ಣಕ್ಕೆ ವರ್ಗಾವಣೆಯಾಗುತ್ತಿದೆ.