Asianet Suvarna News Asianet Suvarna News

ಕೊರೋನಾ ಕಾಟ: ಫಾರ್ಮಾ ರೆಪ್ರೆಸೆಂಟೇಟಿವ್‌ ಟ್ರಾವೆಲ್‌ ಹಿಸ್ಟರಿಗೆ ವೈದ್ಯಲೋಕವೇ ತಬ್ಬಿಬ್ಬು..!

ಫಾರ್ಮಾ ಕಂಪನಿ ಏರಿಯಾ ಮ್ಯಾನೇಜರ್‌ ಆಗಿದ್ದಾತನಿಂದ 6 ವೈದ್ಯರು, ಆಸ್ಪತ್ರೆ ಸಿಬ್ಬಂದಿ, 50 ಪ್ರೈಮರಿ ಕಾಂಟ್ಯಾಕ್ಟ್‌ಗಳು ಕ್ವಾರಂಟೈನ್‌| ನಗರದ 3 ಖಾಸಗಿ ಆಸ್ಪತ್ರೆ ಸೀಲ್‌ಡೌನ್‌|

District Administration Realeased of Coronavirus Positive Travel History in Kalaburagi District
Author
Bengaluru, First Published May 17, 2020, 2:29 PM IST

ಶೇಷಮೂರ್ತಿ ಅವಧಾನಿ

ಕಲಬುರಗಿ(ಮೇ.17): ಈತ ಫಾರ್ಮಾ ಕಂಪನಿಯೊಂದರಲ್ಲಿ ಏರಿಯಾ ಮ್ಯಾನೇಜರ್‌, ತಾನೇ ಖುದ್ದು ಕೋವಿಡ್‌-19 ಪರೀಕ್ಷೆಗಾಗಿ ಗಂಟಲು ದ್ರವ ನೀಡಿದ್ದರೂ ಫಲಿತಾಂಶ ಬರೋವರೆಗೂ ಸುಮ್ಮನೆ ಮನೆಯಲ್ಲಿ ಕುಳಿತಿಲ್ಲ, ಗಂಟಲು ನೋವೆಂದು ನಾಲ್ಕಾರು ವೈದ್ಯರನ್ನು ಕಂಡಿದ್ದಾನೆ, ಹಲವು ಕ್ಲೀನಿಕ್‌ ಸುತ್ತಿದ್ದಾನೆ.

ಈತ ‘ಪಾಸಿಟಿವ್‌’ ಎಂದು ಗೊತ್ತಾದಾಗ ಜಿಲ್ಲಾಡಳಿತ ಆತನ ಟ್ರಾವಲ್‌ ಹಿಸ್ಟರಿ ಕಲೆ ಹಾಕಿ ನೇರ ಸಂಪರ್ಕಕ್ಕೆ ಬಂದ 6 ವೈದ್ಯರನ್ನು ಕ್ವಾರಂಟೈನ್‌ ಮಾಡಿದ್ದಲ್ಲದೆ 3 ಖಾಸಗಿ ಆಸ್ಪತ್ರೆ ಸೀಲ್‌ಡೌನ್‌ ಮಾಡಿದೆ, ಪ್ರೈಮರಿ ಕಾಂಟ್ಯಾಕ್ಟ್ 50 ಮಂದಿಯನ್ನು ಕ್ವಾರಂಟೈನ್‌ ಇರಿಸಿದೆ. 6 ವೈದ್ಯರಲ್ಲಿ 45 ವರ್ಷದ ಇಎನ್‌ಟಿ ವೈದ್ಯ (ಸಂಖ್ಯೆ 926)ರಿಗೆ ಕೊರೋನಾ ಪಾಸಿಟಿವ್‌ ದೃಢವಾಗಿದೆ.
ಕಲಬುರಗಿಯಲ್ಲಿ ಫಾರ್ಮಾ ಕಂಪನಿ ಏರಿಯಾ ಮ್ಯಾನೇಜರ್‌ (ರೋಗಿ ಸಂಖ್ಯೆ 848)ನ ವರ್ತನೆಗೆ ವೈದ್ಯ ಲೋಕವೇ ಬೆಚ್ಚಿ ಬಿದ್ದಿದೆಯಲ್ಲದೆ ಚಿಕಿತ್ಸೆಗೆಂದು ತಮ್ಮ ಬಳಿ ಬರುವವರ ಬಗ್ಗೆ ಖಾಸಗಿವೈದ್ಯರು ಇನ್ನೂ ಹೆಚ್ಚಿನ ಸಂಶಯ ಪಡುವಂತೆ ಮಾಡಿದೆ.

ಸಂಸದ ಉಮೇಶ ಜಾಧವ್‌ ಮೇಲೆ ಹಲ್ಲೆಗೆ ಯತ್ನ: ಕಾಂಗ್ರೆಸ್‌ ಮುಖಂಡರ ವಿರುದ್ಧ ದೂರು ದಾಖಲು

ಪ್ರಕರಣದ ಹಿನ್ನೆಲೆ:

35 ವರ್ಷದ ಫಾರ್ಮಾ ಕಂಪನಿ ಏರಿಯಾ ಮ್ಯಾನೇಜರ್‌ ಕೋವಿಡ್‌-19 ಪರೀಕ್ಷೆಗಾಗಿ ಇಲ್ಲಿನ ಜಿಮ್ಸ್‌ನಲ್ಲಿ ತನ್ನ ಗಂಟಲು ದ್ರವ ಸ್ಯಾಂಪಲ್‌ ನೀಡಿದ್ದ. ಫಲಿತಾಂಶ ಬರುವ ಪೂರ್ವದಲ್ಲೇ, ಈ ವಿಚಾರ ಮುಚ್ಚಿಟ್ಟು ಹಲವಾರು ಕ್ಲಿನಿಕ್‌ ಸುತ್ತಿ, ವೈದ್ಯರನ್ನು ಕಂಡು ಗಂಟಲು ನೋವು, ಇತರೆ ತೊಂದರೆಗಳಿಗೆ ಚಿಕಿತ್ಸೆ ಪಡೆದಿದ್ದಾನೆ. ಮಾರನೆ ದಿನವೇ ಸದರಿ ‘ಮೆಡಿಕಲ್‌ ರೆಪ್‌’ನ ಕೋವಿಡ್‌-19 ಫಲಿತಾಂಶ ‘ಪಾಸಿಟಿವ್‌’ ಬಂದಿದೆ. ಎಚ್ಚೆತ್ತ ಜಿಲ್ಲಾಡಳಿತ ಈತನ ಪ್ರಯಾಣ ಹಿಸ್ಟರಿ, ಸಂಪರ್ಕಗಳನ್ನೆಲ್ಲ ಹೆಕ್ಕಿದಾಗ ಈತ ತನ್ನ ಗಂಟಲು ದ್ರವ ಪರೀಕ್ಷೆಗೆ ನೀಡಿ ಫಲಿತಾಂಶ ಬರುವ ಮುಂಚೆಯೇ ಮೂರ್ನಾಲ್ಕು ಖಾಸಗಿ ಆಸ್ಪತ್ರೆಗಳ ವೈದ್ಯರ ಸಂಪರ್ಕಕ್ಕೆ ಬಂದ ಮಾಹಿತಿ ಗೊತ್ತಾಗಿದೆ.

ಇಎನ್‌ಟಿ, ಮಧುಮೇಹ ತಜ್ಞರು, ಹೃದ್ರೋಗ ಪರಿಣಿತರು, ಫಿಜಿಸಿಯನ್‌ ಸೇರಿದಂತೆ ಐವರು ತಜ್ಞ ವೈದ್ಯರು ಈತನ ನೇರ ಸಂಪರ್ಕಕ್ಕೆ ಬಂದಿದ್ದರಿಂದ ಇವರನ್ನೆಲ್ಲ ತಕ್ಷಣ ಕ್ವಾರಂಟೈನ್‌ ಮಾಡಿದ ಜಿಲ್ಲಾಡಳಿತ 3 ಖಾಸಗಿ ಕ್ಲಿನಿಕ್‌ ಸೀಲ್‌ಡೌನ್‌ ಮಾಡಿದ್ದಲ್ಲದೆ ಇಲ್ಲಿನ ಸಿಬ್ಬಂದಿಗಳಿಗೂ ಹೋಮ್‌ ಕ್ವಾರಂಟೈನ್‌ಗೆ ಸೂಚಿಸಿ, ವೈದ್ಯರ ಸಂಪರ್ಕಕ್ಕೆ ಬಂದಿದ್ದ 50 ಕ್ಕೂ ಹೆಚ್ಚು ಜನರಿಗೂ ಕ್ವಾರಂಟೈನ್‌ ಮಾಡಲಾಗಿತ್ತು. ಈತನ ಸಂಪರ್ಕಕ್ಕೆ ಬಂದ 45 ವರ್ಷದ (ರೋಗಿ ಸಂಖ್ಯೆ 926) ಇಎನ್‌ಟಿ ವೈದ್ಯರಿಗೂ ಸೋಂಕು ಖಚಿತವಾಗಿದೆ.

ಎಂಆರ್‌ ವರ್ತನೆ ಹೀಗೇಕೆ:

ಕೋವಿಡ್‌- 19 ಟೆಸ್ಟ್‌, ದರ ಪೂರ್ವಾಪರಗಳೆಲ್ಲವೂ ಗೊತ್ತಿದ್ದ ಫಾರ್ಮಾ ಕಂಪನಿಯೊಂದರ ಜವಾಬ್ದಾರಿ ಹುದ್ದೆಯಲ್ಲಿದ್ದ ಸಿಬ್ಬಂದಿ (ಪಿ.848) ಹೀಗೇಕೆ ವರ್ತಿಸಿದರೋ? ತಾನು ಕೋವಿಡ್‌-19 ಪರೀಕ್ಷೆಗೆ ಗಂಟಲು ಮಾದರಿ ನೀಡಿ ಬಂದ ಮೇಲೂ ಫಲಿತಾಂಶ ಬರೋವರೆಗೂ ಕಾಯದೆ ಆಸ್ಪತ್ರೆ ಸುತ್ತಿ ವೈದ್ಯರನ್ನು ಕಂಡರೇಕೆ? ವೈದ್ಯರನ್ನು ಕಂಡರೂ ತಾವೇ ಕೋವಿಡ್‌-19 ಪರೀಕ್ಷೆಗೆ ಒಳಗಾದ ಸಂಗತಿ ಬಚ್ಚಿಟ್ಟರೇಕೆ? ಈ ಪ್ರಕರಣದಲ್ಲಿನ ಎಂಆರ್‌ ನಿಗೂಢ ನಡೆ ಸುತ್ತ ಜಿಲ್ಲಾಡಳಿತ ಪತ್ತೆದಾರಿಕೆಯಂತೂ ಶುರು ಮಾಡಿದೆ.

ಫಾರ್ಮಾ ಕಂಪನಿ ಏರಿಯಾ ಮೆನೆಜರ್‌ ವರ್ತನೆ ಬಗ್ಗೆ ಅರಿವಿದೆ. ಈತ ಯಾಕೆ ಹೀಗೆ ಮಾಡಿದನೋ? ಎಂಬ ವಿಚಾರವಾಗಿ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ಪ್ರಕರಣದಲ್ಲಿ ಜಿಲ್ಲಾಡಳಿತ ಎಚ್ಚರದಿಂದ ಇದ್ದು ತನಿಖೆ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಈತ ಕೊರೋನಾ ಹರಡಲು ಕಾರಣವಾದಂತಹ ಮಾಹಿತಿ ತನಿಖೆಯಿಂದ ಗೊತ್ತಾದಲ್ಲಿ ಮುಲಾಜಿಲ್ಲದೆ ಕಾನೂನು ರೀತ್ಯಾ ಕ್ರಮ ನಿಶ್ಚಿತ ಎಂದು ಜಿಲ್ಲಾಧಿಕಾರಿ ಶರತ್‌. ಬಿ ಅವರು ಹೇಳಿದ್ದಾರೆ.  

ಫಾರ್ಮಾ ಕಂಪನಿ ಸಿಬ್ಬಂದಿಯ ಧೋರಣೆ ವಿಚಿತ್ರವಾಗಿದೆ. ತಾನು ಕೋವಿಡ್‌ ಪರೀಕ್ಷೆಗೆ ಸ್ಯಾಂಪಲ್‌ ನೀಡಿದ್ದರೂ ಅದ್ಯಾಕೆ ಅತ್ತಿತ್ತ ಸುತ್ತಾಡಿದನೋ? ಈ ಬಗ್ಗೆ ಪರಿಣಿತರ ಅಭಿಪ್ರಾಯ ಕಲೆ ಹಾಕಲಾಗುತ್ತಿದೆ. ಜೊತೆಗೇ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಮುಂದಿನ ಕ್ರಮ ನಿರ್ಧರಿಸಲಾಗುತ್ತದೆ ಎಂದು ಕಲಬುರಗಿ ಜಿ.ಪಂ. ಸಿಇಒ ಪಿ.ರಾಜಾ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios