ರಾಮನಗರ: ವಯಸ್ಸಾಗಿದೆ ಎಷ್ಟು ಮಾತಾಡ್ತೀರ್ರಿ ಎಂದ ಶಾಸಕಿ ಅನಿತಾ ವಿರುದ್ಧ ನೆರೆ ಸಂತ್ರಸ್ತರು ಗರಂ
ಅನಿತಾರವರು ತಹಸೀಲ್ದಾರ್ ಮತ್ತು ಆಯುಕ್ತರನ್ನು ಜತೆಯಲ್ಲಿ ಕರೆದುಕೊಂಡು ಕೆಲಸ ಮಾಡಿಸುತ್ತಿದ್ದೇನೆ. ನೀವು ವಯಸ್ಸಿಗೆ ತಕ್ಕಂತೆ ಮಾತನಾಡಿ ಎಂದಾಗ ನಡೆದ ವಾಗ್ವಾದ
ರಾಮನಗರ(ಸೆ.03): ಮಳೆ ಹಾನಿ ಪೀಡಿತ ಹಾರೋಹಳ್ಳಿಯ ವಿವಿಧ ಪ್ರದೇಶಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಜಿಲ್ಲಾಧಿಕಾರಿ ಅವಿನಾಶ್ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳೊಂದಿಗೆ ಮಳೆ ಹಾನಿ ವೀಕ್ಷಣೆ ಆರಂಭಿಸಿದ ಶಾಸಕರು, ಚೌಡೇಶ್ವರಿ ದೇವಸ್ಥಾನದ ರಸ್ತೆಯಲ್ಲಿನ ಹತ್ತಾರು ಮನೆಗಳಿಗೆ ಭೇಟಿ ನೀಡಿ ಮಳೆ ಹಾನಿಯಿಂದಾದ ನಷ್ಟದ ಸಂಪೂರ್ಣ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಮಾರಸಂದ್ರ ರಸ್ತೆಯ ಕೆರೆ ವೀಕ್ಷಿಸಿದ ನಂತರ ಜಲಾವೃತವಾಗಿರುವ ಸರ್ಕಾರಿ ಆಸ್ಪತ್ರೆ ಪರಿಶೀಲಿಸಿ ಮಾತನಾಡಿದ ಅನಿತಾ, ಸರ್ಕಾರಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸಮುದಾಯ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಜೊತೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎರಡು ಎಕರೆ ಜಾಗ ಗುರುತಿಸಿ ಆ ಜಾಗದಲ್ಲಿ ನೂತನ ಆಸ್ಪತ್ರೆ ನಿರ್ಮಾಣ ಮಾಡಲು ಕಾಮಗಾರಿ ಅಂದಾಜುಪಟ್ಟಿ ತಯಾರಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕಾಮಗಾರಿ ಮುಗಿಯುವವರೆಗೂ ಕೆರೆಯಲ್ಲಿರುವ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಲಾಗುವುದು. ಕೆರೆಯ ಪಕ್ಕದಲ್ಲಿರುವ ಕೋಡಿಯಿಂದ ನೀರನ್ನು ಹೊರಬಿಡಲಾಗಿದೆ ಎಂದು ಹೇಳಿದರು.
ರಾಮನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಅಗತ್ಯ: ಎಚ್.ಡಿ.ಕುಮಾರಸ್ವಾಮಿ
ಡಿಸಿ ಭೇಟಿ:
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅವಿನಾಶ್ ಭೇಟಿ ನೀಡಿ ಸಂತ್ರಸ್ತರಲ್ಲಿ ಧೈರ್ಯ ತುಂಬಿದರು. ನಿರಾಶ್ರಿತರಿಗೆ ಸರ್ಕಾರದಿಂದ ಸಿಗುವ ಅನುದಾನವನ್ನು ಶೀಘ್ರವೇ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಆಹಾರ ಪದಾರ್ಥಗಳ ಕಿಟ್‌ಗಳÜನ್ನು ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ವಯಸ್ಸಾಗಿದೆ ಎಷ್ಟು ಮಾತಾಡ್ತೀರ್ರಿ: ಅನಿತಾ
ರಾಮನಗರ: ನಾನು ಹೇಳೋದನ್ನು ಕೇಳಿಸಿಕೊಳ್ಳಿ. ನಿಮಗೆ ವಯಸ್ಸಾಗಿದೆ. ಎಷ್ಟು ಮಾತಾಡ್ತೀರಾ... ವಯಸ್ಸಾಗಿದೆ ಅಂತಾ ನೇಣು ಹಾಕೊಳ್ಳ... ಮಳೆ ಹಾನಿ ಪ್ರದೇಶಗಳಾದ ಟಿಪ್ಪು ನಗರ, ಅರ್ಕೇಶ್ವರ ಕಾಲೋನಿ, ಜಿಯಾವುಲ್ಲಾ ಬ್ಲಾಕ್ ನಲ್ಲಿ ಪರಿಹಾರ ಕಾಮಗಾರಿ ವೀಕ್ಷಣೆ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಸಂತ್ರಸ್ತರು ವಾಗ್ವಾದ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಪರಿ.
ಜಿಯಾವುಲ್ಲಾ ಬ್ಲಾಕ್‌ನಲ್ಲಿ ಅಹವಾಲು ಹೇಳಿಕೊಳ್ಳಲು ಬಂದ ಸಂತ್ರಸ್ತ ವೃದ್ಧರೊಬ್ಬರು ಶಾಸಕರಿಗೆ ಆವಾಗ ಬರದೆ ಈಗ ಬಂದಿದ್ದೀರಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ಅನಿತಾರವರು ನಾನು ಹೇಳೋದನ್ನು ಕೇಳಿಸಿಕೊಳ್ಳಿ. ನೀರು ಹೆಚ್ಚಾಗಿ ಹರಿಯುತ್ತಿತ್ತು. ಹಾರಿಕೊಂಡು ಬರಬೇಕಿತ್ತಾ ಎಂದು ಮರು ಪ್ರಶ್ನಿಸಿದರು.
ಆಗ ಕೋಪಗೊಂಡ ಸಂತ್ರಸ್ತ, ನೀವು ಹೇಳಿದ್ದನ್ನು ಕೇಳಿಕೊಂಡು ನಾವು ಹೋಗಬೇಕು. ನಮ್ಮ ಮಾತು ನೀವು ಕೇಳಲ್ಲ. ಅಮ್ಮಾ ನಮಗೆ ತೊಂದರೆಯಾಗಿದೆ. ನೀವೇನು ತೊಂದರೆ ತೆಗೆದುಕೊಳ್ಳಬೇಡಿ ಎಂದು ಒರಟಾಗಿ ಹೇಳಿದರು.
ಇದರಿಂದ ಬೇಸರಗೊಂಡ ಅನಿತಾರವರು ನಿಮಗೆ ವಯಸ್ಸಾಗಿದೆ, ಎಷ್ಟುಮಾತಡ್ತೀರಾ ಎಂದಾಗ ಸಂತ್ರಸ್ತ ವೃದ್ಧ, ವಯಸ್ಸಾಗಿದೆ ಅಂತಾ ಸತ್ತು ಹೋಗಲೇನು. ನಮಗೂ ಮಾತನಾಡಲು ಅವಕಾಶ ಕೊಡಿ, ನಮ್ಮ ಮಾತನ್ನು ಕೇಳಿ ಎಂದರು.
ಇಲ್ಲಿವರೆಗೆ ಯಾರೂ ಬಂದು ನಮ್ಮ ಕಷ್ಟಕೇಳಲಿಲ್ಲ. ಹೊರಗಿನವರು ಬಂದು ಸ್ವಚ್ಛತೆ ಕೆಲಸ ಮಾಡುತ್ತಿದ್ದಾರೆ. ಯಾರೂ 10 ರುಪಾಯಿ ಪರಿಹಾರ ನೀಡಿಲ್ಲ. ದೇವೇಗೌಡ - ಕುಮಾರಸ್ವಾಮಿ ಅವರ ಚುನಾವಣೆ ನಡೆಸಿದ್ದೀನಿ. 20 ವರ್ಷವಾದರು ಸೀರಳ್ಳ ಕೆಲಸ ಮಾಡಿಲ್ಲ. ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳಿದ್ದಾರೆ. ನಾಳೆ ಸೀರಳ್ಳದಲ್ಲಿ ಮತ್ತೆ ನೀರು ಬಂದರೆ ನಾವೆಲ್ಲರು ಸಾಯಬೇಕಾ. ಮೇಡಂ ಜಾಸ್ತಿ ಮಾತು ಕೇಳಲ್ಲ, ಅವರಿಗೆ ಬೇಜಾರಾಗುತ್ತೆ ಎಂದು ಸಂತ್ರಸ್ತ ವೃದ್ಧ ಕಿಡಿಕಾರಿದರು.
ಇದಕ್ಕೆ ಅನಿತಾರವರು ತಹಸೀಲ್ದಾರ್ ಮತ್ತು ಆಯುಕ್ತರನ್ನು ಜತೆಯಲ್ಲಿ ಕರೆದುಕೊಂಡು ಕೆಲಸ ಮಾಡಿಸುತ್ತಿದ್ದೇನೆ. ನೀವು ವಯಸ್ಸಿಗೆ ತಕ್ಕಂತೆ ಮಾತನಾಡಿ ಎಂದಾಗ ವಾಗ್ವಾದ ನಡೆಯಿತು. ಆಗ ಆಯುಕ್ತ ನಂದಕುಮಾರ್ , ಸಬ್ ಇನ್ಸ್‌ಪೆಕ್ಟರ್ ಮುರಳಿ ಹಾಗೂ ಜೆಡಿಎಸ್ ಮುಖಂಡರು ಮಧ್ಯ ಪ್ರವೇಶಿಸಿ ಸಂತ್ರಸ್ತರನ್ನು ಸಮಾಧಾನ ಪಡಿಸಿದರು.
ನೆರೆ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ
ರಾಮನಗರ: ಮಳೆ ಹಾನಿಯಿಂದ ಸಂಕಷ್ಟದಲ್ಲಿ ಸಿಲುಕಿರುವ ಸಂತ್ರಸ್ತರಿಗೆ ಜಿಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಗುರುವಾರ ಆಹಾರ ಕಿಟ್ ಮತ್ತು ಬ್ಲಾಂಕೆಟ್‌ಗಳನ್ನು ವಿತರಿಸಿದರು.
ನಗರದ ಟಿಪ್ಪು ನಗರ , ಅರ್ಕೇಶ್ವರ ಕಾಲೋನಿ, ಜಿಯಾವುಲ್ಲಾ ಬ್ಲಾಕ್ ಸೇರಿದಂತೆ ಮಳೆಯಿಂದಾಗಿ ಹಾನಿಯಾಗಿರುವ ಪ್ರದೇಶದಲ್ಲಿ ವಾಸವಾಗಿರುವ ಪ್ರತಿ ಮನೆಗೆ ಕಾರ್ಯಕರ್ತರೊಂದಿಗೆ ತೆರಳಿದ ಇಕ್ಬಾಲ್, ಉಚಿತವಾಗಿ ಆಹಾರ ಕಿಟ್ ಮತ್ತು ಬ್ಲಾಂಕೆಟ್‌ಗಳನ್ನು ವಿತರಿಸಿದರು.
ಈ ವೇಳೆ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ಪಕ್ಷದ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರ ಗಮನ ಸೆಳೆದು ಸರ್ಕಾರದಿಂದ ಪರಿಹಾರ ದೊರಕಿಸುವ ಕೆಲಸ ಮಾಡುತ್ತೇನೆ. ಏನೇ ಸಮಸ್ಯೆಯಿದ್ದರೂ ತಮ್ಮನ್ನು ಸಂಪರ್ಕಿಸುವಂತೆ ಇಕ್ಬಾಲ್ ಧೈರ್ಯ ತುಂಬಿದರು.
ನೆರೆ ಸಂತ್ರಸ್ತರ ನೆರವಿಗೆ ಸಿಎಂ ಬೊಮ್ಮಾಯಿ ಧಾವಿಸಲಿ: ಡಿಕೆಶಿ
ರಾಮನಗರದಲ್ಲಿ ಹಲವು ದಿನಗಳಿಂದ ಸುರಿದ ಮಳೆಯಿಂದಾಗಿ ರಾಮನಗರ ಟೌನ್ ವ್ಯಾಪ್ತಿಯಲ್ಲಿ ಸಾಕಷ್ಟುಹಾನಿಯಾಗಿದೆ. ಈ ಪ್ರದೇಶದಲ್ಲಿ ವಾಸವಾಗಿರುವ ಜನತೆ ತೊಂದರೆಯಲ್ಲಿ ಸಿಲುಕಿಕೊಂಡಿದ್ಧಾರೆ. ನೆರೆಯಿಂದಾಗಿ ನಿತ್ಯ ಬಳಸುವ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಬದುಕು ದುಸ್ತರವಾಗಿದೆ. ಅವರಿಗೆ ಕೈಲಾದ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಜನರಿಗೆ ಅನುಕೂಲವಾಗಲೆಂದು 3000 ಬ್ಲಾಂಕೆಚ್ ಹಾಗೂ 2000 ಆಹಾರದ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರಿಂದ ನೊಂದವರಿಗೆ ಅನುಕೂಲವಾಗಲಿದೆ ಎಂದು ಇಕ್ಬಾಲ್ ತಿಳಿಸಿದರು. ಕಾಂಗ್ರೆಸ್ ಮುಖಂಡರು ಹಾಜರಿದ್ದರು.