Asianet Suvarna News Asianet Suvarna News

'ಸಿದ್ದರಾಮಯ್ಯರನ್ನ ಹೊರಹಾಕದಿದ್ದರೆ ಕಾಂಗ್ರೆಸ್​​ಗೆ ಉಳಿಗಾಲವಿಲ್ಲ'

ನಾವು ಕಾಂಗ್ರೆಸ್‌ ಪಕ್ಷದ ಮೂಲ ಕಾರ್ಯಕರ್ತರು. ಪಕ್ಷವನ್ನು ಕಟ್ಟಿ ಬೆಳೆಸಿದವರು| ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಕ್ಷಕ್ಕೆ ವಲಸೆ ಬಂದವರು|  ಅವರನ್ನು ಪಕ್ಷದಿಂದ ತೆಗೆಯದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲ ಎಂದ ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ| ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವುದಕ್ಕಿಂತ 20 ವರ್ಷ ಮೊದಲೇ ನಾವು ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ| 

Disqualified MLA Ramesh Jarakiholi Talked about Former CM Siddaramaiah
Author
Bengaluru, First Published Sep 29, 2019, 12:28 PM IST

ಬೆಳಗಾವಿ(ಸೆ.29): ನಾವು ಕಾಂಗ್ರೆಸ್‌ ಪಕ್ಷದ ಮೂಲ ಕಾರ್ಯಕರ್ತರು. ಪಕ್ಷವನ್ನು ಕಟ್ಟಿ ಬೆಳೆಸಿದವರು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಕ್ಷಕ್ಕೆ ವಲಸೆ ಬಂದವರು. ಅವರನ್ನು ಪಕ್ಷದಿಂದ ತೆಗೆಯದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲ ಎಂದು ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವುದಕ್ಕಿಂತ 20 ವರ್ಷ ಮೊದಲೇ ನಾವು ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ನಾನು ಸಾಮಾನ್ಯ ಕಾರ್ಯಕರ್ತ. ಪಕ್ಷದ ಹಿರಿಯರಾಗಿ ಸಿದ್ದರಾಮಯ್ಯ ಅವರು ನಮಗೆ ಎಂದಿಗೂ ತಿಳಿಹೇಳಲಿಲ್ಲ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಕಾಂಗ್ರೆಸ್ ಹಲವು ಮಹಾನ್ ನಾಯಕರು ಕಟ್ಟಿ ಬೆಳೆಸಿದ ಪಕ್ಷ. ಆದರೆ, ಇಂದು ಕೆಲವರ ಸ್ವಾರ್ಥಕ್ಕಾಗಿ ಪಕ್ಷ ಹಾಳಾಗುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಒಬ್ಬ ಬೇಕಾರ (ಕೆಟ್ಟ) ಮನುಷ್ಯ. ಕಾಂಗ್ರೆಸ್ ಪಕ್ಷದ ಇಂದಿನ ದುಸ್ಥಿತಿಗೆ ವೇಣುಗೋಪಾಲ್ ಅವರೇ ಪ್ರಮುಖ ಕಾರಣ. ಈಗ ದಿಟ್ಟ ತೀರ್ಮಾನ ಕೈಗೊಳ್ಳದಿದ್ದರೆ ಮುಂಬರುವ ಚುನಾವಣೆಗಲ್ಲಿ ಕಾಂಗ್ರೆಸ್ 30 ಸ್ಥಾನಗಳಲ್ಲಿಯೂ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು. 

ನಾವು ರಾಜೀನಾಮೆ ನೀಡಿದ್ದು ಬಿಜೆಪಿ ಸೇರಲು ಅಲ್ಲ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಎಂದು ದೂರಿದರು. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಕೇಳಿದರೂ ನಮ್ಮ ಬೇಡಿಕೆಗೆ ಸರಿಯಾಗಿ ಸ್ಪಂದಿಸಲಿಲ್ಲ. ಹಾಗಾಗಿ, ಅನಿವಾರ್ಯವಾಗಿ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿದ್ದಾರೆ. 

ಸತೀಶ ಧಾರವಾಡ ಮಾನಸಿಕ ಆಸ್ಪತ್ರೆ ಸೇರಲಿ: 

ತಮ್ಮ ಸಹೋದರ ಸತೀಶ ಜಾರಕಿಹೊಳಿ ಧಾರವಾಡದ ಮೆಂಟಲ್ ಆಸ್ಪತ್ರೆಗೆ ದಾಖಲಿಸಬೇಕು ಎಂದು ಹೇಳಿದರು. ಶ್ರೀಮಂತ ಪಾಟೀಲ ಮತ್ತು ಆರ್.ಶಂಕರ ಕ್ಷೇತ್ರಕ್ಕೆ ಉಪಚುನಾಣೆ ನಡೆಯುವುದು ಅನುಮಾನವಿದೆ. ಮತ್ತೆ ಚುನಾವಣೆ ನಿಗದಿಯಾಗಿದ್ದಕ್ಕೆ ಸಂತೋಷವಾಗಿದೆ. ಚುನಾವಣೆ ಯಾವಾಗ ಆದರೂ ನಾವು ಎದುರಿಸಲು ಸಿದ್ಧರಿದ್ದೇವೆ. ಸುಪ್ರೀಂಕೋರ್ಟ್ ಅ ನುಮತಿ ನೀಡಿದರೆ ಚುನಾವಣೆಗೆ ಸ್ಪರ್ಧಿಸುತ್ತೇವೆ. ಇಲ್ಲದಿದ್ದರೆ ಮತ್ತೆ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ ಎಂದರು. 

ಶಾಸಕ ಶ್ರೀಮಂತ ಪಾಟೀಲ ರಾಜೀನಾಮೆ ನೀಡಿಲ್ಲ. ಹಾಗಾಗಿ, ಕಾಗವಾಡ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವುದಿಲ್ಲ. ಬಳ್ಳಾರಿ ಶಾಸಕ ನಾಗೇಂದ್ರ ಮತ್ತು ಶ್ರೀಮಂತ ಪಾಟೀಲ ಇಬ್ಬರೂ ಆಸ್ಪತ್ರೆಯಲ್ಲಿದ್ದರು. ಆದರೆ, ನಾಗೇಂದ್ರಗೆ ಒಂದು ನ್ಯಾಯ, ಶ್ರೀಮಂತ ಪಾಟೀಲಗೆ ಇನ್ನೊಂದು ನ್ಯಾಯವಾಗಿದೆ. ನಾಗೇಂದ್ರಗೆ ವಿಪ್ ನೀಡಲಾಗಿತ್ತು. ಆದರೆ, ಶ್ರೀಮಂತಗೆ ವಿಪ್ ನೀಡಿರಲಿಲ್ಲ. ಹಾಗಾಗಿ ಕಾಗವಾಡ ಕ್ಷೇತ್ರದ ಚುನಾವಣೆ ನಡೆಯುವುದು ಅನುಮಾನವಿದೆ. ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಮುಂದಿನ ನಡೆ ಕುರಿತು ಬಹಿರಂಗಪಡಿಸುವುದಿಲ್ಲ ಎಂದು ಅವರು ಹೇಳಿದರು. 

ಅಧಿಕಾರ ದುರ್ಬಳಕೆ ಮುಂದುವರಿದಲ್ಲಿ ಬಿಜೆಪಿಗೆ ಅಂತ್ಯಕಾಲ: 

ಅಧಿಕಾರ ದುರ್ಬಳಕೆ ಮಾಡಿಕೊಳ್ಳುವುದನ್ನು ಮುಂದುವರಿಸಿದರೆ ಬಿಜೆಪಿಗೂ ಅಂತ್ಯಕಾಲ ಖಂಡಿತವಾಗಿ ಬಂದೇ ಬರುತ್ತದೆ. ದೊಡ್ಡ ಮುಖಂಡರನ್ನು ಸೋಲಿಸಿದ್ದಾರೆ. ಪಕ್ಷಗಳನ್ನು ಬದಲಾಯಿಸಿರುವುದು ಇತಿಹಾಸದಲ್ಲಿದೆ. ಬಿಜೆಪಿಗೂ ಆ ಕಾಲ ಬಂದೇ ಬರುತ್ತೆ ನಾವು ಕಾಯಬೇಕಿದೆ ಎಂದರು. 

ಚುನಾವಣಾ ಆಯೋಗಗಳು ತಮ್ಮ ಇತಿಮಿತಿಯಲ್ಲಿ ಕಾರ್ಯ ಮಾಡಬೇಕು. ಇಲ್ಲದಿದ್ದರೆ ದೇಶದ ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಸುಪ್ರೀಂ ಕೋರ್ಟ್ ಚುನಾವಣೆಗೆ ತಡೆ ಕೊಟ್ಟಿದೆ. ಕೋರ್ಟ್‌ನ ಆದೇಶ ಹೊರಬಿದ್ದು ಎರಡೇ ದಿನಗಳಲ್ಲಿ ಚುನಾವಣೆ ಆಯೋಗ ಉಪ ಚುನಾವಣೆ ದಿನಾಂಕ ಮತ್ತೆ ಘೋಷಣೆ ಮಾಡಿದೆ. ಚುನಾವಣೆ ಆಯೋಗ ಯಾವ ರೀತಿ ಕೆಲಸ ಮಾಡುತ್ತಿದೆ ಎನ್ನುವುದು ದೇಶದ ಜನತೆಗೆ ಗೊತ್ತಿದೆ. ಅದು ಅಧಿಕಾರ ವ್ಯಾಪ್ತಿ ಮೀರಿ, ಸಂವಿಧಾನ ಬಾಹಿರವಾಗಿ ಕೆಲಸ ಮಾಡುತ್ತಿದೆ. ಅದೇನೆ ಇದ್ದರೂ ಜನರು ತೀರ್ಮಾನ ಮಾಡುತ್ತಾರೆ ಎಂದರು. 

ಚುನಾವಣೆ ಆಯೋಗವನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಕೋರ್ಟ್ ಆದೇಶ ನೀಡಿದ ಎರಡೇ ದಿನಗಳಲ್ಲಿ ಮತ್ತೆ ದಿನಾಂಕ ನಿಗದಿಪಡಿಸುತ್ತದೆ ಎಂದರೆ, ಎಲ್ಲಿಯೋ ಒಂದು ಕಡೆ ದಾರಿ ತಪ್ಪಿದೆ ಎನಿಸುತ್ತದೆ ಎಂದು ಹೇಳಿದರು. 

ಮಾತನಾಡುವ ಹಕ್ಕು ಸಮಸ್ಯೆ: 

ಬಿಜೆಪಿ ಸೇರಿದ ಮೇಲೆ ರಮೇಶ ಜಾರಕಿಹೊಳಿಗೆ ವಾಕ್ ಸ್ವಾತಂತ್ರ್ಯ ಇಲ್ಲದಂತಾಗುತ್ತದೆ. ಬಿಜೆಪಿ ಯವರಿಗೆ ಅವರದ್ದೇ ಆದ ಸಿದ್ಧಾಂತವಿದೆ. ಅವರದ್ದು ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರು ಇರುವ ಎರಡು ಹೈಕಮಾಂಡ್ ಗಳಿವೆ. ನಮ್ಮಲ್ಲಿರುವುದು ಒಂದೇ ಹೈಕಮಾಂಡ್. ಹಾಗಾಗಿ, ಅವರ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಅನರ್ಹ ಶಾಸಕ ಮಹೇಶ ಕುಮಟಳ್ಳಿ ಇನ್ನೂ ಬಿಜೆಪಿ ಸೇರಿಲ್ಲ. ಹೊರಗಿದ್ದಾರೆ ಎಂಬ ಕಾರಣ ದಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಿಂದಿಸುವಷ್ಟು ಮಾತನಾಡಿದ್ದಾರೆ. ಇನ್ನು ಬಿಜೆಪಿ ಸೇರಿದರೆ ಮುಗಿಯಿತು. ಅಲ್ಲಿ ಮಾತನಾಡುವ ಸ್ವಾತಂತ್ರ್ಯ ಇವರಿಗೆ ಇಲ್ಲವಾಗುತ್ತದೆ ಎಂದರು. 

ಕಾಂಗ್ರೆಸ್‌ನಲ್ಲಿರುವಷ್ಟು ಸ್ವಾತಂತ್ರ್ಯ ಅಲ್ಲಿಲ್ಲ. ಈಗ ಮಹೇಶ ಕುಮಟಳ್ಳಿ ಬೈಯಿಸಿಕೊಂಡಿದ್ದಾನೆ. ಮುಂದೆ ರಮೇಶ ಜಾರಕಿಹೊಳಿ ಬೈಯಿಸಿಕೊಳ್ಳುತ್ತಾನೆ. ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷಕ್ಕೆ ಹೋಗುವವರಿಗೆ ಹಾಗೇ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. 

ಸಂತ್ರಸ್ತರ ಬಗ್ಗೂ ಕಾಳಜಿ ಇದ್ದಿದ್ದರೆ:

ಬಿಜೆಪಿಗೆ ಅನರ್ಹ ಶಾಸಕರ ಮೇಲಿರುವ ಪ್ರೀತಿ ನೆರೆ ಸಂತ್ರಸ್ತರ ಮೇಲಿದ್ದಿದ್ದರೆ ಈಗಾಗಲೇ ಸಾಕಷ್ಟು ಪರಿಹಾರ ಕಾರ್ಯ ಆಗುತ್ತಿತ್ತು. ಅನರ್ಹ ಶಾಸಕರಿಗೆ ಮುಂಬೈಗೆ ಹೋಗಲು, ಅಲ್ಲಿಂದ ಬೆಂಗಳೂರಿಗೆ ಬರಲು ವಿಶೇಷ ವಿಮಾನ ಹಾಗೂ ಅವರಿಗೆ ಉಳಿದುಕೊಳ್ಳಲು ಫೈವ್ ಸ್ಟಾರ್ ಹೋಟೆಲ್ ಸೌಲಭ್ಯ ನೀಡಲಾಗಿತ್ತು. ಅದೇ ಹಣವನ್ನು ಕರ್ನಾಟಕದ ನೆರೆ ಸಂತ್ರಸ್ತರ ಪರಿಹಾರಕ್ಕೆ ಬಳಸಿದ್ದರೆ ಎಷ್ಟೋ ಅನುಕೂಲ ಆಗುತ್ತಿತ್ತು ಎಂದರು. 

ನೆರೆ ಪೀಡಿತ ಪ್ರದೇಶಗಳತ್ತ ತಿರುಗಿಯೂ ನೋಡದ ಆರ್. ಅಶೋಕ. ಕೇಂದ್ರ ಸಚಿವರಾದ ಸುರೇಶ ಅಂಗಡಿ ಹಾಗೂ ಪ್ರಹ್ಲಾದ ಜೋಶಿ ಸೇರಿದಂತೆ ಬಿಜೆಪಿಗರು ಕೇವಲ ಅಧಿಕಾರಕ್ಕೆ ಸೀಮಿತರಾಗಿದ್ದಾರೆ ಎಂದು ಟೀಕಿಸಿದರು. ಮೊದಲು ಪರಿಹಾರ ಧನ ನೀಡಿ: ಅ.3  ಮತ್ತು 4  ರಂದು ಜಿಲ್ಲೆಯ ನೆರೆ ಬಾಧಿತ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದರು.

ನೆರೆ ಪೀಡಿತ ಸಂತ್ರಸ್ತರಿಗೆ ಸರಿಯಾದ ಪರಿಹಾರ ನೀಡಬೇಕು. ಆದರೆ, ಇನ್ನೂ ನೆರೆ ಬಾಧಿತ ಜಮೀನುಗಳ ಸಮೀಕ್ಷೆ ಕಾರ್ಯ ನಡೆದಿಲ್ಲ. ಸಭೆಗಳನ್ನು ಜಿಲ್ಲಾಧಿಕಾರಿಗಳು, ಇಲ್ಲವೇ ತಹಸೀಲ್ದಾರಗಳೇ ಮಾಡುತ್ತಾರೆ. ಸಿಎಂ ಯಡಿಯೂರಪ್ಪ ಜಿಲ್ಲಾ ಪ್ರವಾಸ ಕೈಗೊಂಡರೆ ಯಾವುದೇ ಪ್ರಯೋಜನವಿಲ್ಲ. ಕೂಡಲೇ ನೆರೆ ಸಂತ್ರಸ್ತರಿಗೆ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. 

ಸೆ.29ರ ಭಾನುವಾರ ಕಿಕ್ ಏರಿಸಿದ ಟಾಪ್ 10 ಸುದ್ದಿ ಇಲ್ಲಿವೆ!

Follow Us:
Download App:
  • android
  • ios