ಹೊಸಪೇಟೆ: ಇದೇ ನನ್ನ ಕೊನೆಯ ಎಲೆಕ್ಷನ್ ಎಂದ ಅನರ್ಹ ಶಾಸಕ
ನನ್ನ ಹೇಳಿಕೆಗೆ ಈಗಲೂ ಬದ್ಧ ಎಂದ ಆನಂದ್ ಸಿಂಗ್| ಉಪ ಚುನಾವಣೆ ಆಗಿರುವುದರಿಂದ ಮತ್ತು ಸ್ಪರ್ಧಿಸುವ ಅನಿವಾರ್ಯತೆ| ಕ್ಷೇತ್ರದ ಮತದಾರರು ಆನಂದ್ ಸಿಂಗ್‌ಗೆ ಅಲ್ಲ, ವಿಜಯನಗರ ಜಿಲ್ಲೆಗಾಗಿ ಮತ ನೀಡಿ|
ಹೊಸಪೇಟೆ(ನ.24): ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಇದು ನನ್ನ ಕೊನೆಯ ಚುನಾವಣೆ ಎಂಬ ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ ಎಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಮತ್ತೊಮ್ಮೆ ಸ್ವಷ್ಟಪಡಿಸಿದ್ದಾರೆ.
ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಶನಿವಾರ ಪ್ರಚಾರದಲ್ಲಿ ಮಾತನಾಡಿ, ಇದು ಸಾರ್ವತ್ರಿಕ ಚುನಾವಣೆ ಅಲ್ಲ. ನಾನು ಹೇಳಿದ್ದು ಮೂರು ಬಾರಿ ಶಾಸಕರ ಅವಧಿ ಮುಗಿಸಿದ ನಂತರ ಮುಂದಿನ ಚುನಾವಣೆಯಲ್ಲಿ ಸ್ವರ್ಧಿಸುವುದಿಲ್ಲ ಎಂದು. ಆದರೆ, ಇದು ಉಪ ಚುನಾವಣೆ ಆಗಿರುವುದರಿಂದ ಮತ್ತು ಸ್ಪರ್ಧಿಸುವ ಅನಿವಾರ್ಯತೆ ಉಂಟಾಗಿದ್ದರಿಂದ ಈ ಚುನಾವಣೆಯನ್ನು ಎದುರಿಸುವಂತಾಗಿದೆ. ಈ ಮೂರೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಾದ ವಿಜಯನಗರ ಜಿಲ್ಲೆ, ಏತನೀರಾವರಿ ಯೋಜನೆಗಳು, ಪ್ರತಿಯೊಂದು ಊರಿಗೂ ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಇತರೆ ಅಭಿವೃದ್ಧಿಗೆ ಈಗಾಗಲೇ ನಾನು ಅನರ್ಹ ಶಾಸಕನಾಗಿದ್ದರೂ ಬಿಜೆಪಿ ಸರ್ಕಾರ ಎಲ್ಲ ಯೋಜನೆಗೆ . 243 ಕೋಟಿಗೆ ಅನುಮೋದನೆ ದೊರೆತಿದ್ದು, ಮೊದಲ ಕಂತಿನಲ್ಲಿ 73 ಕೋಟಿ ಬಿಡುಗಡೆಗೊಳಿಸಲಾಗಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಾನು ಕಾಂಗ್ರೆಸ್ ಶಾಸಕನಾಗಿದ್ದಾಗ ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ಸಮಿಶ್ರ ಸರ್ಕಾರ ರಚನೆಯಾಯಿತು. ನನ್ನ ಬೇಡಿಕೆಗಳಾದ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ರಚಿಸುವುದು ಮತ್ತು ಜಿಂದಾಲ್‌ನವರಿಗೆ ಭೂಮಿ ನೀಡಲು ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಸರ್ಕಾರ ನನ್ನ ಮನವಿಗೆ ಸರಿಯಾಗಿ ಸ್ಪಂದಿಸದ ಕಾರಣ ಮತ್ತು ಈ ಸಮಿಶ್ರ ಸರ್ಕಾರ ಆರಂಭದಿಂದ ಒಂದು ವರ್ಷಗಳ ಕಾಲ ಸರ್ಕಾರ ಆಗ ಬೀಳುತ್ತೋ..ಈಗ ಬೀಳುತ್ತೋ ಎನ್ನುವುದರಲ್ಲೇ ಕಾಲಹರಣ ಆದ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರದ ಬೇಡಿಕೆಗಳ ಬಗ್ಗೆ ಸರಿಯಾದ ಸ್ಪಂದನೆ ಸಿಗಲಿಲ್ಲ. ಆಗ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಸ್ಥಾನಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡುವ ಪ್ರಸಂಗ ಬಂತು. ಕಾಕತಾಳಿಯಂತೆ ನನ್ನಂತೆ 16 ಜನ ಶಾಸಕರು ಸಮಿಶ್ರ ಸರ್ಕಾರದಲ್ಲಿ ಅವರ ಕ್ಷೇತ್ರಗಳಿಗೆ ಸರಿಯಾದ ಅನುದಾನ ಸಿಗದೆ ಇರುವುದರಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ನಾನು ರಾಜೀನಾಮೆ ನೀಡಿದ್ದರಿಂದಲೇ ಸರ್ಕಾರ ಬೀಳುತ್ತದೆ ಅಂದುಕೊಂಡಿದಿಲ್ಲ ಎಂದರು.
ವಿಜಯನಗರ ಕ್ಷೇತ್ರದ ಮತದಾರರು ಆನಂದ್ ಸಿಂಗ್‌ಗೆ ಅಲ್ಲ, ವಿಜಯನಗರ ಜಿಲ್ಲೆಗಾಗಿ ಮತ ನೀಡಿ. ಜಿಲ್ಲೆಯಾಗುವುದರಿಂದ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜ್, ಸರ್ಕಾರದ ಎಂಜಿನಿಯರ್ ಕಾಲೇಜು. ಡಿಸಿ, ಎಸ್ಪಿ ಕಚೇರಿಗಳು ಸೇರಿದಂತೆ ಜಿಲ್ಲೆಗೆ ಬರುವ ಅನುದಾನ, ಜಿಲ್ಲಾ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸುವದರಿಂದ ಈ ಭಾಗದ ಪಶ್ಚಿಮ ತಾಲೂಕುಗಳಿಗೂ ಅನುಕೂಲವಾಗುತ್ತದೆ. ಜಿಲ್ಲಾ ಹೋರಾಟಕ್ಕೆ ಸಹಕರಿಸಿ ಮತ ನೀಡುವಂತೆ ಮನವಿ ಮಾಡಿಕೊಂಡರು.
ಆನಂದ್ ಸಿಂಗ್ ಅವರು ಶನಿವಾರ ಕ್ಷೇತ್ರದ ನಲ್ಲಾಪುರ, ಸೀತಾರಾಂ ತಾಂಡಾ, ಬುಕ್ಕಸಾಗರ, ವೆಂಕಟಾಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮತಯಾಚನೆ ನಡೆಸಿದರು.
ಸ್ಥಳೀಯ ಮುಖಂಡರಾದ ಹುಲುಗಪ್ಪ, ಬದ್ರಪ್ಪ, ಶೇಷಪ್ಪ, ಹೊನ್ನೂರಪ್ಪ, ಕರಿಯಪ್ಪ, ಪೆದ್ದಣ್ಣ, ದೊಡ್ಡ ನಾಗಪ್ಪ, ಶಂಬುಲಿಂಗ ಸೇರಿದಂತೆ ಗ್ರಾಮದ ಮುಖಂಡು ಭಾಗವಹಿಸಿದ್ದರು.