ಬೆಂಗಳೂರು [ಆ.09]:  ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆ.9ರಿಂದ 18ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಅನುಕೂಲವಾಗುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿ) ಸರ್ಕಾರಿ ರಜಾ ದಿನಗಳಂದು ಟಿಕೆಟ್‌ ದರದಲ್ಲಿ ರಿಯಾಯಿತಿ ಘೋಷಿಸಿದೆ.

ಸರ್ಕಾರಿ ರಜಾ ದಿನಗಳಾದ ಆ.10ರಿಂದ 12ವರೆಗೆ ಹಾಗೂ ಆ.15 ಮತ್ತು, ಆ.17, 18ರಂದು ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಿಂದ ನಗರದ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ಕೇವಲ 30 ರು. ಟಿಕೆಟ್‌ ಪಡೆದು ಪ್ರಯಾಣಿಸಲು ಮೆಟ್ರೋ ನಿಗಮ ಸೌಲಭ್ಯ ಕಲ್ಪಿಸಿದೆ. ನಿಗದಿತ ದಿನಗಳಂದು ಬೆಳಗ್ಗೆ 10ರಿಂದ ರಾತ್ರಿ 8ರವರೆಗೂ ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು 30 ರು.ಗೆ ಕಾಗದದ ಟಿಕೆಟ್‌ ಖರೀದಿಸಬಹುದು. ಖರೀದಿಸಿದ ದಿನಕ್ಕೆ ಮಾತ್ರ ಆ ಟಿಕೆಟ್‌ ಬಳಕೆಗೆ ಮೀಸಲು ಇರಲಿದೆ.

ಉಳಿದಂತೆ ಸ್ಮಾರ್ಟ್‌ಕಾರ್ಡ್‌ದಾರರು ಎಂದಿನಂತೆ ಮೆಟ್ರೋ ರೈಲು ಪ್ರಯಾಣದಲ್ಲಿ ರಿಯಾಯಿತಿ ಪಡೆಯಲಿದ್ದಾರೆ. ಉಳಿದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಟೋಕನ್‌ ಪಡೆದು ಪ್ರಯಾಣಿಸಬಹುದಾಗಿದೆ. ಕಾಗದದ ಟಿಕೆಟ್‌ ಪಡೆದು ಪ್ರಯಾಣಿಸುವ ಪ್ರಯಾಣಿಕರು ನಿಗದಿತ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್‌ಗಳನ್ನು ವಾಪಸ್‌ ನೀಡಬೇಕು ಎಂದು ಮೆಟ್ರೋ ನಿಗಮ ತಿಳಿಸಿದೆ.