ಕ್ರೀಡಾಪಟುಗಳಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಕ್ರೀಡಾಧಿಕಾರಿಯೇ ಗುಳುಂ ಮಾಡಿದ್ದಾರೆ ಹಾಗೂ ಸಿಬ್ಬಂದಿಗಳಿಂದ ಮಕ್ಕಳಿಗೆ ಟಾರ್ಚರ್ ನೀಡ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ

ಚಿತ್ರದುರ್ಗ: ಕ್ರೀಡೆಗೆ ಉತ್ತೇಜನ ನೀಡಲು ಸರ್ಕಾರ ಹಲವು ರೀತಿಯ ಸರ್ಕಸ್ ಮಾಡ್ತಿದೆ‌. ಇದರ ಮಧ್ಯೆ ಕೋಟೆನಾಡಿನ ಕ್ರೀಡಾ ಹಾಸ್ಟೆಲ್ ನ ಅವ್ಯವಸ್ಥೆ ಬೀದಿಗೆ ಬಂದಿದೆ‌. ಕ್ರೀಡಾಪಟುಗಳಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಕ್ರೀಡಾಧಿಕಾರಿಯೇ ಗುಳುಂ ಮಾಡಿದ್ದಾರೆ ಹಾಗೂ ಸಿಬ್ಬಂದಿಗಳಿಂದ ಮಕ್ಕಳಿಗೆ ಟಾರ್ಚರ್ ನೀಡ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ

ಚಿತ್ರದುರ್ಗದ (Chitradurga) ಯುವಜನ ಸೇವಾ ಕ್ರೀಡಾ ಇಲಾಖೆಯ ಕ್ರೀಡಾ ಹಾಸ್ಟೆಲ್‌ನಲ್ಲಿ (Sports Hostel) 5ನೇ ತರಗತಿಯಿಂದ 7ನೇ ತರಗತಿ ಯವರೆಗೆ‌ ಓದುವ‌ 30ಕ್ಕೂ ಅಧಿಕ ಕ್ರೀಡಾಪಟುಗಳು ಇದ್ದಾರೆ. ಈ ಹಾಸ್ಟೆಲ್‌ನ ಓರ್ವ ವಿದ್ಯಾರ್ಥಿಯ ಊಟೋಪಚಾರಕ್ಕಾಗಿ ಸರ್ಕಾರ‌ ಪ್ರತಿದಿನ 220 ರೂಪಾಯಿ ಹಣ ನೀಡ್ತಿದೆ. ಆ ಹಣ ಬಳಸಿಕೊಳ್ಳಲು ಹಾಸ್ಟೆಲ್ ನಿರ್ವಹಣೆಗೆ ಟೆಂಡರ್ ನೀಡಬೇಕಿದೆ. ಆದ್ರೆ ಹಾಸ್ಟಲ್ ನಿರ್ವಹಣೆಯ ಜವಾಬ್ದಾರಿಯನ್ನು ಕ್ರೀಡಾಧಿಕಾರಿ ಜಯಲಕ್ಷ್ಮಿಯವರೇ ಹೊತ್ತಿದ್ದು, ಅವರ ಸಂಬಂಧಿಗಳಾದ ಉದಯ್‌ ಎಂಬುವವರನ್ನು ಹಾಸ್ಟಲ್ ಉಸ್ತುವಾರಿಯಾಗಿ ನೇಮಿಸಿದ್ದಾರೆ ಎಂಬ ಆರೋಪ‌ ಕೇಳಿ ಬಂದಿದೆ. ಯಾವುದೇ ಟೆಂಡರ್ ಕರೆದಿಲ್ಲ, ಆದ್ರೆ ಉದಯ್ ಎನ್ನುವ ಈ ಆಸಾಮಿ ಕ್ರೀಡಾಪಟುಗಳಿಗೆ ಊಟ, ಮೊಟ್ಟೆ ಹಾಲು ಹಾಗೂ ವಿವಿಧ ಕ್ರೀಡಾ ಸಾಮಾಗ್ರಿಗಳನ್ನು ನೀಡದೇ ವಂಚಿಸುತಿದ್ದಾರಂತೆ. ಹಾಗೆಯೇ ಮಕ್ಕಳಿಗೆ ಮನಬಂದಂತೆ ಟಾರ್ಚರ್ ನೀಡುತ್ತಾ, ಪುಟ್ಟ ಮಕ್ಕಳಿಗೆ ಹಲ್ಲೆ‌ ನಡೆಸ್ತಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ಸರ್ಕಾರದ ಹಣ ಪೋಲು ಮಾಡ್ತಿರೋದಕ್ಕೆ ಸಾರ್ವಜನಿಕರ ಆಕ್ರೋಶ, ಹಾಸ್ಟೆಲ್ ಕಟ್ಟಡಕ್ಕೆ ರಸ್ತೆಯೇ ಇಲ್ಲ!

ಇನ್ನು ಈ ಹಾಸ್ಟೆಲ್‌ನಲ್ಲಿಯೇ ಊಟೋಪಚಾರ ಮಾಡಬೇಕೆಂಬ ನಿಯಮವಿದ್ರೂ, ಹಣ ನುಂಗಲು, ಬೇರೆಡೆಯಿಂದ ಆಹಾರ ಸಿದ್ಧಪಡಿಸಿ ಹಾಸ್ಟೆಲ್‌ ಗೆ ತರ್ತಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡದೇ ವಂಚಿಸುತಿದ್ದಾರೆ. ಇಲ್ಲಿನ ಸಮಸ್ಯೆ ಏನೆಂಬುದರ ಬಗ್ಗೆ ಕ್ರೀಡಾಧಿಕಾರಿ ಜಯಲಕ್ಷ್ಮಿ ತಿರುಗಿ ನೋಡ್ತಿಲ್ಲ. ಹೀಗಾಗಿ ಹಾಸ್ಟೆಲ್‌ ನಲ್ಲಿರಲು ನಮ್ಮ ಮಕ್ಕಳು ಹೆದರುತಿದ್ದೂ, ಬೇರೆಡೆಗೆ ಶಿಫ್ಟ್‌ ಮಾಡಲು ನಿರ್ಧರಿಸುತಿದ್ದೇವೆಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಆದ್ರೆ ಜಿಲ್ಲಾಡಳಿತ ಮಾತ್ರ ಮೌನ ವಹಿಸಿರೋದು ವಿಪರ್ಯಾಸ.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಉಪಹಾರದಲ್ಲಿ ಹಲ್ಲಿ ಪತ್ತೆ, ಮಕ್ಕಳು ಅಸ್ವಸ್ಥ

ಒಟ್ಟಾರೆ ಕ್ರೀಡಾ ಹಾಸ್ಟೆಲ್ ನಿರ್ವಹಣೆಗಾಗಿ ಸರ್ಕಾರ ಲಕ್ಷಾಂತರ ರೂಪಾಯಿ ಹಣವನ್ನು ನೀಡ್ತಿದೆ. ಆದ್ರೆ ಈ ಹಾಸ್ಟೆಲ್‌ನ ಟೆಂಡರ್ ಗುತ್ತಿಗೆಗೆ ನೀಡದೇ ಯುವಜನಸೇವಾ ಕ್ರೀಡಾ ಇಲಾಖೆಯ ಅಧಿಕಾರಿ ಜಯಲಕ್ಷ್ಮಿ ಅವರ ಸಂಬಂಧಿಗಳಿಂದಲೇ ಹಾಸ್ಟೆಲ್ ನಡೆಸುತಿದ್ದಾರೆ. ಹೀಗಾಗಿ ಮಕ್ಕಳ ಜೀವದ ಜೊತೆ ಚೆಲ್ಲಾಟ ವಾಡ್ತಿದ್ದಾರೆಂಬ ಗಂಭೀರ ಆರೋಪ‌ ಭುಗಿಲೆದ್ದಿದೆ. ಇನ್ನಾದ್ರು ಜಿಲ್ಲಾಡಳಿತ ಎಚ್ಚೆತ್ತು ಈ ಅವ್ಯವಸ್ಥೆಗೆ ಬ್ರೇಕ್ ಹಾಕಬೇಕಿದೆ.