Asianet Suvarna News Asianet Suvarna News

World Disability Day: ಮಕ್ಕಳನ್ನು ಡಾಕ್ಟರ್‌, ಎಂಜಿನಿಯರ್‌ ಮಾಡಿದ ವಿಕಲಚೇತನ..!

ಬಡತನ ಹಾಗೂ ವಿಕಲಚೇತನವನ್ನು ಮೆಟ್ಟಿ, ಒಂದು ಕೈ, ಎರಡು ಕಣ್ಣುಗಳು ಇಲ್ಲದೇ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದ ವಿಕಲಚೇತನ ರೇವಪ್ಪ ಕಾಂಬಳೆ ಅವರು ಇಂತಹ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ಮಾತ್ರವಲ್ಲ, ತಮ್ಮ ಮೂವರು ಗಂಡು ಮಕ್ಕಳಿಗೆ ಉತ್ತಮ ಶಿಕ್ಷಣವನ್ನೂ ಕೊಡಿಸಿದ ರೇವಪ್ಪ ಕಾಂಬಳೆ ಹಂಜಗಿ

Disability Person that made Children Doctors and Engineers in Vijayapura grg
Author
First Published Dec 3, 2023, 8:48 PM IST

ಖಾಜು ಸಿಂಗೆಗೋಳ

ಇಂಡಿ(ಡಿ.03):  ತಿಂಗಳಿಗೆ ಲಕ್ಷ ಸಂಬಳ ಪಡೆಯುವವರೇ ಇಂದಿನ ದಿನಗಳಲ್ಲಿ ಬದುಕು ನಡೆಸುವುದೇ ದುಸ್ತರ. ಅದರಲ್ಲೂ ಮಕ್ಕಳ ಶಾಲೆ ಇತ್ಯಾದಿ ಖರ್ಚು ವೆಚ್ಚಗಳ ಲೆಕ್ಕ ಹಾಕಿದರೆ ಭವಿಷ್ಯ ಹೇಗೆ ರೂಪಿಸುವುದು ಎಂಬ ಆಲೋಚನೆ ಮೂಡದೇ ಇರದು. ಇಂತಹ ಸಂದರ್ಭದಲ್ಲಿ ವಿಕಲಚೇತನರೊಬ್ಬರು ಸಣ್ಣ ಅಂಗಡಿ, ಭಜನೆ ಗೀತೆಗಳನ್ನು ಹಾಡಿ ತಮ್ಮ ಮಕ್ಕಳನ್ನು ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಮಾತ್ರವಲ್ಲ, ಯಾರ ಬಳಿ ಸಹಾಯ ಕೇಳದೆ ಸ್ವಾಭಿಮಾನದಿಂದ ದುಡಿದು ಒಬ್ಬ ಪುತ್ರನನ್ನು ಎಂಬಿಬಿಎಸ್‌(ಎಂಡಿ) ಮಾಡಿಸಿದರೆ, ಮತ್ತೊಬ್ಬನನ್ನು ಎಂಜಿನಿಯರ್‌ ಓದಿಸುತ್ತಿದ್ದಾರೆ. ಮೂರನೇ ಪುತ್ರನಿಗೆ ಐಎಎಸ್‌ ತರಬೇತಿ ಕೊಡಿಸುತ್ತಿದ್ದಾರೆ.

ಬಡತನ ಹಾಗೂ ವಿಕಲಚೇತನವನ್ನು ಮೆಟ್ಟಿ, ಒಂದು ಕೈ, ಎರಡು ಕಣ್ಣುಗಳು ಇಲ್ಲದೇ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದ ವಿಕಲಚೇತನ ರೇವಪ್ಪ ಕಾಂಬಳೆ ಅವರು ಇಂತಹ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ಮಾತ್ರವಲ್ಲ, ತಮ್ಮ ಮೂವರು ಗಂಡು ಮಕ್ಕಳಿಗೆ ಉತ್ತಮ ಶಿಕ್ಷಣವನ್ನೂ ಕೊಡಿಸಿದ್ದಾರೆ.

ಬಡವರ ಏಳ್ಗೆಗೆ ಟೊಂಕಕಟ್ಟಿ ನಿಂತ ಪ್ರಧಾನಿ ಮೋದಿ: ಸಂಸದ ರಮೇಶ ಜಿಗಜಿಣಗಿ

ಮುಂಬೈನಲ್ಲಿ ನಡೆದ ಸ್ಫೋಟದಿಂದ ವಿಕಲತೆ:

ರೇವಪ್ಪ ಕಾಂಬಳೆ ಅವರು 18ನೇ ವರ್ಷದಲ್ಲಿ ಮದುವೆ ಮಾಡಿಕೊಂಡರು. ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಸಹೋದರರ ಜೊತೆ ಮುಂಬೈನ ಠಾಣೆ ಜಿಲ್ಲೆಯ ಬಿವಂಡಿಗೆ ಹೋದರು. ಅಲ್ಲಿ ಇಲ್ಲಿ ಕೂಲಿ ಮಾಡಿ ಸಂಸಾರ ಕೂಡ ನಡೆಸುತ್ತಿದ್ದರು. ಆದರೆ, ಅಲ್ಲಿ ವಿಧಿಯಾಟವೇ ಬೇರೆ ಆಗಿತ್ತು. ಬಹಿರ್ದೆಸೆಗೆ ಹೋದಾಗ ಕಲ್ಲುಕ್ವಾರಿಯಲ್ಲಿ ಜಿಲೆಟಿನ್‌ ಸ್ಫೋಟಗೊಂಡು ಅವರ ಎರಡು ಕಣ್ಣು, ಒಂದು ಕೈಯನ್ನು ಕಳೆದುಕೊಂಡರು. ಇದರಿಂದ ಅವರು ಶಾಶ್ವತವಾಗಿ ವಿಕಲಚೇತನರಾದರು.

ದುಡಿಯಬೇಕು ಎಂದುಕೊಂಡಿದ್ದ ಅವರು ತಮ್ಮ ಬದುಕಿನ ಪಯಣವನ್ನು ಮತ್ತೆ ಮರಳಿ ಹುಟ್ಟೂರಾದ ಹಂಜಗಿ ಗ್ರಾಮದಲ್ಲಿ ಮುಂದುವರಿಸಲು ತೀರ್ಮಾನಿಸಿ ವಾಪಸಾದರು. ಆಗ ಸರ್ಕಾರ 4 ಎಕರೆ ಮರಡಿ ಭೂಮಿಯಲ್ಲಿ ಏನನ್ನು ಬೆಳೆಯದೇ ಇದ್ದಾಗ, ಅನಿವಾರ್ಯವಾಗಿ ಸ್ವಾವಲಂಬಿಯಾಗಿ ಬದುಕಬೇಕು ಎಂದು ಗ್ರಾಮದಲ್ಲಿ ಚಿಕ್ಕದೊಂದು ಕಿರಾಣಿ ಅಂಗಡಿ ಇಟ್ಟುಕೊಂಡರು. ಜತೆ ಜತೆಗೆ ಭಜನೆ, ಕೀರ್ತನೆ ಹಾಡುತ್ತಾ ಬಂದ ಹಣದಲ್ಲೇ ಬದುಕು ಸಾಗಿಸಿದರು. ಪತ್ನಿ ಕೆಲವೊಂದು ದಿನ ಅಲ್ಲಲ್ಲಿ ಕೂಲಿ ಕೆಲಸ ಮಾಡುತ್ತ, ಕೆಲವೊಂದು ದಿನ ಬಟ್ಟೆ ಹೊಲೆಯುವ ಟೈಲರಿಂಗ್‌ ಕೆಲಸ ಮಾಡುತ್ತ, ನಂತರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಮುಖ್ಯ ಅಡುಗೆಯವಳಾಗಿ ಕೆಲಸ ಮಾಡುತ್ತ ಕುಟುಂಬ ನಿರ್ವಹಿಸಿ ಪತಿಗೆ ನೆರವಾದರು.

ತಂದೆ-ತಾಯಿ ಬೆವರಿಗೆ ಫಲ ಕೊಟ್ಟ ಮಕ್ಕಳು:

3 ಜನ ಗಂಡು, ಒಬ್ಬ ಪುತ್ರಿ ದೊಡ್ಡವರಾಗುತ್ತಿದ್ದಂತೆ ವಸತಿ ನಿಲಯಗಳಿಗೆ (ಹಾಸ್ಟೆಲ್‌ಗೆ) ಸೇರ್ಪಡೆ ಮಾಡಿದರು. ಮಕ್ಕಳು ಸಹ ತಂದೆ, ತಾಯಿ ಕಷ್ಟಪಡುವುದನ್ನು ಕಂಡು ಶ್ರಮಪಟ್ಟು ಓದಿ, ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಗುರಿ ಮತ್ತು ಹಠ ತೊಟ್ಟಿದ್ದರು. ಇದರಿಂದ ಇಂದು ಮೊದಲ ಮಗ ಭೀಮರಾವ ಕಾಂಬಳೆ ಎಂಬಿಬಿಎಸ್ ಎಂಡಿ (ಮಕ್ಕಳ ತಜ್ಞ) ಓದಿ ಸೊಲ್ಲಾಪುರದಲ್ಲಿ ಪ್ರಾಕ್ಟಿಸ್‌ ಮಾಡುತ್ತಿದ್ದಾರೆ. ಎರಡನೇ ಪುತ್ರ ಗೌತಮ ಕಾಂಬಳೆ ಎಂಎ ಓದಿ ಬೆಂಗಳೂರಿನಲ್ಲಿ ಐಎಎಸ್ ತರಬೇತಿ ಪಡೆಯುತ್ತಾ ಐಎಎಸ್‌ ಅಧಿಕಾರಿ ಆಗಲು ಹೊರಟಿದ್ದಾರೆ. ಮೂರನೇ ಮಗ ರಾಜರತ್ನ ಎಲೆಕ್ಟ್ರಿಕ್‌ ಎಂಜಿನಿಯರ್(ಇ ಮತ್ತು ಇ) ಶಿಕ್ಷಣ ಪಡೆಯುತ್ತಿದ್ದರೆ, ಕೊನೆಯ ಮಗಳನ್ನು ಬಿಎವರೆಗೆ ಓದಿಸಿ ಮದುವೆ ಮಾಡಿಕೊಟ್ಟಿದ್ದಾರೆ.

ವಿಜಯಪುರ: ಇಂಡಿಯಲ್ಲಿ ಕುಡಿಯುವ ನೀರಿಗೆ ತತ್ವಾರ, ಯುವಕನಿಂದ ಅರೆ ಬೆತ್ತಲೆ ಹೋರಾಟ..!

ಸಾಮಾಜಕ್ಕೆ ಮಾದರಿ ರೇವಪ್ಪ:

ಆರ್ಥಿಕವಾಗಿ ಸಬಲರಿದ್ದು, ಶರೀರದ ಎಲ್ಲಾ ಅಂಗಗಳು ಇದ್ದರೂ ಕೆಲ ಪಾಲಕರು ಮಕ್ಕಳನ್ನು ಇಷ್ಟು ಓದಿಸಲು ಕಷ್ಟಪಡುತ್ತಿರುವ ಇಂದಿನ ದಿನದಲ್ಲಿ ಬಲಗೈ ಕಳೆದುಕೊಂಡು, ಎರಡು ಕಣ್ಣುಗಳು ಇಲ್ಲದೇ ಕುರುಡತನದಲ್ಲಿ ಜೀವನ ಸಾಗಿಸಿ ಚಿಕ್ಕ ಅಂಗಡಿ,ಪತ್ನಿಯ ಕೂಲಿ ಹಣ ಹಾಗೂ ಭಜನೆ,ಕೀರ್ತನೆಗಳಿಂದ ಬರುವ ಹಣ ಹಾಗೂ ಕಲಾವಿದರಿಗೆ ನೀಡುವ ಮಾಸಾಶನದಿಂದ ಕೂಡಿಟ್ಟ ಹಣದಿಂದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜಕ್ಕೆ ಮಾದರಿಯಾಗುವಂತೆ ಮಾಡಿರುವ ವಿಕಲಚೇತನ ರೇವಪ್ಪ ಕಾಂಬಳೆ ಸಾಧನೆ ಮೆಚ್ಚುವಂತದ್ದು ಎಂದು ಜನರು ಕೂಡ ಶ್ಲಾಘಿಸುತ್ತಿದ್ದಾರೆ.

ಆಕಸ್ಮಿಕವಾಗಿ ನನ್ನ ಕಣ್ಣು ಹಾಗೂ ಕೈ ಕಳೆದುಕೊಂಡೆ. ಆದರೆ, ಬದುಕಲ್ಲಿ ಧೃತಿಗೆಡದೇ ಭಜನೆ, ಕೀರ್ತನೆ ಹೇಳುವುದನ್ನು ಕಲಿತುಕೊಂಡೆ. ಮಕ್ಕಳನ್ನು ಓದಲು ಹಾಸ್ಟೆಲ್‌ಗೆ ಹಾಕಿಸಿ ಶಾಲೆಗೆ ಸೇರಿಸಿದೆ. ಅಂಗಡಿ ಹಾಗೂ ಭಜನೆ, ಕೀರ್ತನೆಯಿಂದ ಬಂದ ಹಣದಲ್ಲಿ ಮಕ್ಕಳ ಶಿಕ್ಷಣ ಮಾಡಿಸಿದ್ದೇನೆ. ಮಕ್ಕಳು ಚೆನ್ನಾಗಿ ಓದಿ ದಡ ಮುಟ್ಟಿದ್ದಾರೆ. ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಅಂಧ ವಿಕಲಚೇತನ ರೇವಪ್ಪ ಕಾಂಬಳೆ ಹಂಜಗಿ ತಿಳಿಸಿದ್ದಾರೆ.  

Follow Us:
Download App:
  • android
  • ios