ಬೆಂಗಳೂರು[ಮಾ.22]: ಕೊರೋನಾ ವೈರಸ್‌ನಲ್ಲಿ ‘ಪ್ಯಾಟಿ ಮತ್ತು ಲಿಪಿಡ್‌’ ಎಂಬ ಎರಡು ಪದರದಲ್ಲಿರುತ್ತದೆ. ಕೇವಲ ನೀರಿನಿಂದ ಕೈ ತೊಳೆದರೆ ಈ ಸೋಂಕು ತೊಲಗುವುದಿಲ್ಲ. ಸೋಪು ಅಥವಾ ಸ್ಯಾನಿಟೈಸರ್‌ನಿಂದ ಕೈಗಳನ್ನು ಶುದ್ಧವಾಗಿ ತೊಳೆದುಕೊಂಡಾಗ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಸಲಹೆ ನೀಡಿದ್ದಾರೆ. 

ಸುವರ್ಣ ಸುದ್ದಿವಾಹಿನಿಯಲ್ಲಿ ಕೊರೋನಾ ಕುರಿತು ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ಕೆಮ್ಮು, ಸೀನುವಾಗ ಎರಡೂ ಕೈಗಳಿಂದ ಮುಖವನ್ನು ಮುಚ್ಚಿಟ್ಟುಕೊಂಡು 20 ಸೆಕೆಂಡ್‌ಗಳ ನಂತರ ಕೈತೊಳೆದುಕೊಳ್ಳಿ. ಸೋಂಕುಗಳಿದ್ದರೆ ಅಲ್ಲಿಯೇ ನಾಶವಾಗುತ್ತವೆ. ಅಂಗೈ ಚೆನ್ನಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ತಿಳಿಸಿದರು.

ಜನತಾ ಕರ್ಫ್ಯೂ: ಮನೆಯಲ್ಲೇ ಉಳಿದ ಸಿಎಂ ಯಡಿಯೂರಪ್ಪ

ರೋಗ ಹರಡಬಹುದು ಎಂಬ ಭಯದಿಂದ ಪ್ರತಿಯೊಬ್ಬರೂ ಮಾಸ್ಕ್‌ ಧರಿಸಲು ಮುಂದಾಗುತ್ತಿದ್ದಾರೆ. ಇದರಿಂದ ಮಾಸ್ಕ್‌ ಅಭಾವ ಸೃಷ್ಟಿಯಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ‘ಎನ್‌-95’ ಮಾಸ್ಕ್‌ ಧರಿಸಲಿದ್ದಾರೆ. ಇನ್ನು ಬಸ್ಸಿನಲ್ಲಿ ಸಂಚರಿಸುವವರು, ಗುಂಪುಗಳಲ್ಲಿ ಇರುವವರು, ಸಾರ್ವಜನಿಕ ಸಾರಿಗೆ ಬಳಸುವವರು ಸಾಮಾನ್ಯ ಮಾಸ್ಕ್‌ಗಳನ್ನು ಧರಿಸಲಿ. ಪ್ರತಿಯೊಬ್ಬರೂ ಮಾಸ್ಕ್‌ಗಳನ್ನು ಧರಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಳ್ಳಿಗಳಿಗೆ ಹೋಗಬೇಡಿ:

ವಿದೇಶ ಪ್ರಯಾಣದಿಂದ ಬಂದವರಿಂದ ಸೋಂಕು ಹರಡುತ್ತಿರುವುದರಿಂದ ಇಲ್ಲಿಯವರೆಗೂ ನಗರ ಪ್ರದೇಶದಲ್ಲಿ ಸದ್ಯ ಸೋಂಕು ಹರಡಿದೆ. ಗ್ರಾಮಾಂತರ ಪ್ರದೇಶಗಳಿಗೆ ಹೋಗುವುದರಿಂದ ಅಲ್ಲಿಗೂ ಸೋಂಕು ಹರಡಲಿದೆ. ವಿದೇಶದಿಂದ ಬಂದವರು ಸಾಧ್ಯವಾದ ಮಟ್ಟಿಗೆ ನಗರ ಪ್ರದೇಶದಲ್ಲಿಯೇ ಉಳಿದುಕೊಳ್ಳಲು ಪ್ರಯತ್ನಿಸಿ, ಗ್ರಾಮಾಂತರ ಪ್ರದೇಶಗಳಿಗೆ ಹೋಗಬೇಡಿ ಎಂದು ಮನವಿ ಮಾಡಿದರು.

ರೆಸಾರ್ಟ್‌ಗಳನ್ನು ಬಳಸಿಕೊಳ್ಳಿ:

ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದಲ್ಲಿ ಸಾಕಷ್ಟುಉತ್ತಮ ರೆಸಾರ್ಟ್‌ಗಳಿವೆ. ಇವುಗಳನ್ನು ಗೃಹ ಬಂಧನದಲ್ಲಿಡುವವರಿಗೆ ಬಳಸಿಕೊಳ್ಳಬಹುದು. ಐಸೋಲೇಟೆಡ್‌ ಕೇಂದ್ರಗಳಿಗೆ ಆಸ್ಪತ್ರೆಗಳೇ ಇರಲಿ. ಗೃಹ ಬಂಧನಕ್ಕೆ ಮಾತ್ರ ರೆಸಾರ್ಟ್‌ಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ತುರ್ತು ಇಲ್ಲದಿದ್ದರೆ ಆಸ್ಪತ್ರೆಗಳಿಗೆ ಬರಬೇಡಿ:

ಆಸ್ಪತ್ರೆಗಳಲ್ಲಿ ಜಯದೇವ, ವಿಕ್ಟೋರಿಯಾ, ಬೌರಿಂಗ್‌ ಆಸ್ಪತ್ರೆಗಳು ಹಾಗೂ ಜಿಲ್ಲಾ ವೈದ್ಯಕೀಯ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳು 100ರಿಂದ 150 ಮಾತ್ರ ಇರುತ್ತವೆ. ಹೀಗಾಗಿ, ತೀರಾ ತುರ್ತು ಚಿಕಿತ್ಸೆ ಅವಶ್ಯವಿದ್ದವರು ಮಾತ್ರ ಆಸ್ಪತ್ರೆಗಳಿಗೆ ಬನ್ನಿ. ಇಲ್ಲದಿದ್ದರೆ ಗುಂಪಾಗಿ ಆಸ್ಪತ್ರೆಗಳಿಗೆ ಬರುವುದರಿಂದ ಅಲ್ಲಿ ಯಾರಿಗಾದರೂ ಒಬ್ಬರಿಗೆ ಸೋಂಕು ಇದ್ದರೆ ಎಲ್ಲರಿಗೂ ಹರಡುವ ಸಾಧ್ಯತೆಗಳಿರುತ್ತವೆ ಎಂದು ತಿಳಿಸಿದರು.

ಸೋ ಕಾಲ್ಡ್‌ ಬುದ್ಧಿವಂತರು ಪರಿಸ್ಥಿತಿ ಅರಿಯಿರಿ:

ಪರಿಸ್ಥಿತಿಯ ಗಾಂಭೀರ್ಯತೆ ಅರಿತು ಇಡೀ ದೇಶವೇ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಇದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅದರಲ್ಲಿಯೂ ಕೆಲವು ಸೋ ಕಾಲ್ಡ್‌ ಬುದ್ಧಿವಂತರು ತಿರಸ್ಕರಿಸುವುದು ಸರಿಯಲ್ಲ. ಅನಕ್ಷರಸ್ಥರೇ ಆತಂಕದಿಂದ ಎಚ್ಚರಿಕೆ ವಹಿಸಿರುವುದರಿಂದ ಅತಿ ಬುದ್ಧಿವಂತಿಕೆ ಬೇಡ ಎಲ್ಲರೂ ಕೈಜೋಡಿಸೋಣ ಎಂದರು.

ವೈದ್ಯರಿಗೂ ಮಾಸ್ಕ್‌ಗಳಿಲ್ಲ:

ದೆಹಲಿಯಿಂದ ಕರೆ ಮಾಡಿ ಮಾತನಾಡಿದ ರೇಡಿಯೋಲಾಜಿಸ್ಟ್‌ ಡಾ.ಅನಿಲ್‌, ವೈದ್ಯಕೀಯ ಸಿಬ್ಬಂದಿಗೆ ಸರಿಯಾದ ಮಾಸ್ಕ್‌ ಹಾಗೂ ಹ್ಯಾಂಡ್‌ ಗ್ಲೌಸ್‌ಗಳು ದೊರೆಯದಿರುವುದರಿಂದ ಜನರನ್ನು ತಪಾಸಣೆ ಮಾಡುವುದಕ್ಕೆ ಹೆದರುತ್ತಿದ್ದಾರೆ. ಇದರಿಂದ ಸರ್ಕಾರ ಮೊದಲು ಪ್ರತಿಯೊಬ್ಬ ವೈದ್ಯ ಸಿಬ್ಬಂದಿಗೆ ಸಮರ್ಪಕ ರೀತಿಯಲ್ಲಿ ಮಾಸ್ಕ್‌ಗಳನ್ನು ಸರಬರಾಜು ಮಾಡಬೇಕು ಎಂದು ವಿನಂತಿ ಮಾಡಿದರು.

ಕೂಲಿ ಕಳೆದುಕೊಂಡ ಬಡವರಿಗೆ ಸರ್ಕಾರದ ನೆರವು?

ಇದೊಂದು ಅನಿರೀಕ್ಷಿತ ಬೆಳವಣಿಗೆಯಾಗಿರುವುದರಿಂದ ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಡತನ ರೇಖೆಗಿಂತ ಕೆಳಗಿನ ಜನರಿಗೆ ಸಮಸ್ಯೆಯಾಗಿರುವುದನ್ನು ಸರ್ಕಾರ ಗಮನಿಸಿದೆ. ಇವರಿಗೆ ಸಹಾಯಹಸ್ತ ಚಾಚುವ ಕುರಿತು ಪೂರಕ ಯೋಜನೆಗಳನ್ನು ಘೋಷಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶೀಘ್ರವೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

2020 ಐಪಿಎಲ್ ಟೂರ್ನಿ ನಡೆಯುತ್ತಾ? ಅಂತಿಮ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ರೆಡಿ

ಮುಂದಿನ 2-3 ವಾರ ಎಚ್ಚೆತ್ತುಕೊಂಡರೆ ಅಪಾಯದಿಂದ ಪಾರು ಆಗಲಿದ್ದೇವೆ. ಪ್ರತಿಯೊಬ್ಬ ಭಾರತೀಯರು ತಮ್ಮ ಜವಾಬ್ದಾರಿ ಅರಿಯಬೇಕಿದೆ. ದೇಶಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.