ಸಾಮಾಜಿಕ ಜವಾಬ್ದಾರಿ ಇರುವ ಸಾಹಿತ್ಯ ಮತ್ತು ಸಿನಿಮಾ ನಡುವಿನ ಸಂಬಂಧ ಹೆಚ್ಚಾದರೆ ಸಮಾಜಕ್ಕೆ ಹೊಸ ಉತ್ಪನ್ನ, ಹೊಸ ಆಯಾಮ ದೊರೆಯುತ್ತದೆ ಎಂದು ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಮೈಸೂರು (ಜ.22): ಸಾಮಾಜಿಕ ಜವಾಬ್ದಾರಿ ಇರುವ ಸಾಹಿತ್ಯ ಮತ್ತು ಸಿನಿಮಾ ನಡುವಿನ ಸಂಬಂಧ ಹೆಚ್ಚಾದರೆ ಸಮಾಜಕ್ಕೆ ಹೊಸ ಉತ್ಪನ್ನ, ಹೊಸ ಆಯಾಮ ದೊರೆಯುತ್ತದೆ ಎಂದು ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು. ನಗರದ ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಆಯೋಜಿಸಿರುವ ಕನ್ನಡ ಸಾಹಿತ್ಯ- ಚಿತ್ರಕತೆ ಬರವಣಿಗೆ ಕುರಿತ 2 ದಿನಗಳ ವಿಚಾರಸಂಕಿರಣವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ಮತ್ತು ಸಿನಿಮಾನ ನಡುವಿನ ಸುವರ್ಣ ಸೇತುವೆ ಹೆಚ್ಚಾಗಬೇಕು.
ಸಾಹಿತ್ಯ ಸಿನಿಮಾದ ಘನತೆಯನ್ನು ಹೆಚ್ಚಿಸುವ ಮಾಧ್ಯಮವಾಗಿದೆ. ಮಾಧ್ಯಮದಲ್ಲಿ ಯಾವುದು ಶ್ರೇಷ್ಠ, ಕನಿಷ್ಠ ಅಲ್ಲ. ಸಿನಿಮಾ ಮತ್ತು ಸಾಹಿತ್ಯ ನಡುವೆ ದೊಡ್ಡ ಗೋಡೆಯಿದ್ದು, ಒಂದು ರೀತಿ ಅಸ್ಪೃಶ್ಯತೆಯಂತಿದೆ. ಸಾಹಿತಿಗಳು ನನಗೆ ಸಿನಿಮಾದವರು ಆಗುವುದಿಲ್ಲ. ಸಿನಿಮಾದವರು ಬರಹಗಾರರೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎನ್ನುತ್ತಾರೆ. ಆದರೆ, ಇವರೆಡರ ಸಂಬಂಧ ಹೆಚ್ಚಾದರೆ ಹೊಸ ಉತ್ಪನ್ನ, ಹೊಸ ಆಯಾಮ ಲಭ್ಯವಾಗುತ್ತದೆ ಎಂದು ಅವರು ಹೇಳಿದರು. ಕತೆ, ಕಾದಂಬರಿ ಬರೆಯುವಾಗ ಸಿನಿಮಾಗಾಗಿ ಬರೆಯದೇ ಸಾಹಿತ್ಯದ ಬದ್ಧತೆ, ಸಾಹಿತ್ಯದ ವ್ಯಾಕರಣ, ಇವತ್ತಿನ ಪ್ರಸ್ತುತತೆ ಗಮನಸಿ ಬರೆಯಬೇಕು. ಶ್ರೇಷ್ಠ ಕೃತಿಯೆಂದೂ ಸಿನಿಮಾದಲ್ಲಿ ಬಟ್ಟಿ ಇಳಿಸಲಾಗುವುದಿಲ್ಲ. ಸಿನಿಮಾದ ವ್ಯಾಕರಣವೇ ಬೇರೆ. ಬರಹಗಾರ ಅನುಭವ, ಕಲ್ಪನೆಯಿಂದ ಸಂಶೋಧನೆ ಮಾಡಿ ಏಕಾಂಗಿಯಾಗಿ ತನ್ನ ಕೃತಿಯನ್ನು ರಚಿಸುತ್ತಾನೆ.
'ಸೂಪರ್ ಸ್ಟಾರ್'ಗೆ ನಾಗತಿಹಳ್ಳಿ ಬಂದಿದ್ದು ಯಾಕೆಂಬ ಸಂಗತಿಯನ್ನು ಬಿಚ್ಚಿಟ್ಟ ಉಪೇಂದ್ರ!
ಲೇಖಕ ಸ್ವಯಂಭು. ತನ್ನ ಅನುಭವ, ಕಲ್ಪನೆಗಳನ್ನು ಸಮನ್ವಯಗೊಳಿಸಿ ಕೃತಿ ರಚಿಸುತ್ತಾನೆ. ಆದರೆ, ಸಿನಿಮಾ ಸಮೂಹ ಕಲೆ. ನಿರ್ದೇಶಕ ತನ್ನೊಂದಿಗೆ ಹತ್ತಾರು ಜನರನ್ನು ಕಟ್ಟಿಕೊಳ್ಳುತ್ತಾನೆ. ಜೊತೆಗೆ ಹತ್ತಾರು ಸಮಸ್ಯೆ, ಸವಾಲು, ತಾಂತ್ರಿಕ ವಿಚಾರಗಳಿಗೆ ಆದ್ಯತೆ ಕೊಡಬೇಕಾಗುತ್ತದೆ ಎಂದು ಅವರು ವಿವರಿಸಿದರು. ಸಾಹಿತ್ಯದಲ್ಲಿ ಶೇ.95 ವಿಚಾರ, ಶೇ.5 ವ್ಯವಹಾರವಿದೆ. ಸಿನಿಮಾದಲ್ಲಿ ಶೇ.95 ವ್ಯವಹಾರ, ಶೇ.5 ವಿಚಾರ ಇರುತ್ತದೆ. ಲೇಖಕನಿಗೆ ಒಂದು ಪೆನ್ಸಿಲ್ ದೊರೆತರೆ ಅದ್ಭುತ ಕಾವ್ಯ ರಚಿಸಬಲ್ಲ. ಆದರೆ, ಸಿನಿಮಾಗಳಿಗೆ ದೊಡ್ಡ ಆರ್ಥಿಕ ಭಾರ ಇದೆ. ವ್ಯವಹಾರದ ಜ್ಞಾನ ತಿಳಿದುಕೊಂಡೇ ಹೆಜ್ಜೆ ಇರಿಸಬೇಕು. ಹಣ ಕೊಟ್ಟೆ ನಂತರವೇ ಚಿತ್ರಮಂದಿರಕ್ಕೆ ಪ್ರವೇಶ ನೀಡಲಾಗುತ್ತದೆ. ಈ ವ್ಯಾಕರಣದ ಬಗ್ಗೆ ತಿಳಿದಿರಬೇಕು ಎಂದರು.
ಸಿನಿಮಾ ನಿರ್ದೇಶಕರು ಸಾಹಿತ್ಯ ಕೃತಿ ಆಯ್ಕೆ ಮಾಡಿಕೊಂಡಾಗ ಲೇಖಕರೊಂದಿಗೆ ಮುಕ್ತ ಸಂವಾದ ಮಾಡಬೇಕು. ಬದಲಾವಣೆ ಮಾಡುವ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ಎಲ್ಲಿಲ್ಲಿ ಬದಲಾವಣೆ ಮಾಡುತ್ತೇನೆ ಎಂಬುದನ್ನು ವಿವರಿಸಬೇಕು. ಸಾಹಿತ್ಯ ಮತ್ತು ನಾಟಕಗಳಿಗೆ ಸೆನ್ಸಾರ್ ಇಲ್ಲ. ಸಿನಿಮಾಗಳಿಗೆ ಸೆನ್ಸಾರ್ ಇದೆ. ಸರ್ಕಾರ ಕುಚೇಷ್ಠೆ ಮಾಡುತ್ತಾರೆಂದು ಕಣ್ಣಿಟ್ಟಿರುತ್ತದೆ. ಸೆನ್ಸಾರ್ ಮಂಡಳಿ ಎಷ್ಟೇ ಚಾಪೆ ಹಾಸಿದರೂ ರಂಗೋಲಿ ಕೆಳಗೆ ನುಸುಳುವುದು ಸಿನಿಮಾದವರಿಗೆ ಕರಗತವಾಗಿದೆ ಎಂದು ಅವರು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ. ಸುತ್ತೂರು ಎಸ್. ಮಾಲಿನಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಇದ್ದರು.
ಶ್ರೀಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿ ತಾಣಗಳು ಕಾರ್ಯ ನಿರ್ವಹಿಸಬೇಕು: ನಾಗತಿಹಳ್ಳಿ ಚಂದ್ರಶೇಖರ್
ಸಿನಿಮಾ ದೊಡ್ಡ ಜವಾಬ್ದಾರಿ, ಬರಹಗಾರನ ಕಲ್ಪನೆಯನ್ನು ಅದಷ್ಟು ಸತ್ಯಕ್ಕೆ ಮತ್ತು ವಾಸ್ತವಕ್ಕೆ ಹತ್ತಿರವಾದದ್ದನ್ನ ದೃಶ್ಯರೂಪದಲ್ಲಿ ಹೇಳಬೇಕು. ಚಿತ್ರಕ ಶಕ್ತಿಯಿರುವ ಕತೆ, ಕಾದಂಬರಿಗಳು ಹೆಚ್ಚು ಸಿನಿಮಾಕ್ಕೆ ಅಳವಡಿಸಲ್ಪಡುತ್ತದೆ. ಚಿತ್ರಕಶಕ್ತಿಯಲ್ಲಿ ನಾಟಕೀಯತೆ, ಘಟನೆ, ತಿರುವುಗಳಿರುತ್ತದೆ. ಅನೇಕ ಅತ್ಯುತ್ತಮ ಕಾದಂಬರಿ ಸಿನಿಮಾ ಆಗುವುದಿಲ್ಲ. ಒಳ್ಳೆಯ ಸಾಹಿತ್ಯ ಕೃತಿಗಳು ಸಿನಿಮಾ ಬರಬೇಕೆಂದು ಹಠ ಹಿಡಿಯಲು ಆಗಲ್ಲ.
- ಡಾ. ನಾಗತಿಹಳ್ಳಿ ಚಂದ್ರಶೇಖರ್, ಚಿತ್ರ ನಿರ್ದೇಶಕ
