ಹಿಂದೂ ಸಂಸ್ಕೃತಿ ನಾಶ ಮಾಡುವ ಯತ್ನ ಬಿಜೆಪಿ ಕೈಬಿಡಲಿ: ದಿಂಗಾಲೇಶ್ವರ ಶ್ರೀ

*   ನಂಜನಗೂಡಿನ ದೇವಾಲಯ ಪುನಃ ನಿರ್ಮಿಸಲಿ
*   ಮೈಸೂರಿನ ನಿರಂಜನ ಮಠದ ಪರಂಪರೆ ನಾಶಕ್ಕೆ ಯತ್ನ
*   ಸರ್ಕಾರದಲ್ಲಿ ಮೂರ್ಖ ಅಧಿಕಾರಿಗಳಿದ್ದಾರೆ
 

Dingaleshwara Swamiji Talks Over BJP grg

ಧಾರವಾಡ(ಸೆ.19):  ಹಿಂದೂ ಸಂಸ್ಕೃತಿ ನಾಶ ಮಾಡುವ ಮತ್ತು ವೀರಶೈವ-ಲಿಂಗಾಯತ ದೇವಸ್ಥಾನಗಳನ್ನು ತೆರವುಗೊಳಿಸುವ ಯತ್ನದಿಂದ ಬಿಜೆಪಿ ಹಿಂದೆ ಸರಿಯದೇ ಇದ್ದರೆ ಬರುವ ದಿನಗಳಲ್ಲಿ ಬಿಜೆಪಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ನೆಲಸಮಗೊಳಿಸಿರುವ ನಂಜನಗೂಡಿನ ಪುರಾತನ ದೇವಾಲಯವನ್ನು ಪುನಃ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಮೈಸೂರಿನ ನಿರಂಜನ ಮಠಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ. 1862ರಲ್ಲಿ ಸ್ವಾಮಿ ವಿವೇಕಾನಂದ ಅವರು ಈ ಮಠಕ್ಕೆ ಭೇಟಿ ನೀಡಿದ್ದರು. ಆಗ ಅವರಿಗೆ ನಿರಂಜನ ಮಠದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆ ಮಠದ ಒಂದು ಎಕರೆ ಜಾಗವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ವಿವೇಕ ಸ್ಮಾರಕ ನಿರ್ಮಿಸಲು ಪರಭಾರೆ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅಲ್ಲದೆ . 5 ಕೋಟಿ ಅನುದಾನ ನೀಡಲಾಗಿದೆ. ಸುದೀರ್ಘ ಒಂದು ಇತಿಹಾಸ ಹೊಂದಿರುವ ನಿರಂಜನ ಮಠದ ಪರಂಪರೆಯನ್ನು ನಾಶ ಮಾಡಿ ಹೊಸದೊಂದು ಇತಿಹಾಸ ಸೃಷ್ಟಿಮಾಡಲು ಮುಂದಾಗಿದ್ದು ಖಂಡನೀಯ. ಆಗ ಸದಾನಂದ ಗೌಡ ಅವರ ಆಡಳಿತ ಅವಧಿಯಲ್ಲಿ ನಿರಂಜನ ಮಠಕ್ಕೆ ಹಿನ್ನಡೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಾನು ಮೈಸೂರಿಗೆ ಹೋಗಿ ನಿರಂಜನ ಮಠದ ಸ್ವಾಮೀಜಿ ಭಕ್ತರ ಸಭೆ ಮಾಡಿದ್ದೇನೆ. ಪುರಾತತ್ವ ಇಲಾಖೆಗೆ ಸೇರಿದೆಯೋ ಇಲ್ಲವೋ ಎಂಬುದರ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಮೂರ್ಖ ಅಧಿಕಾರಿಗಳಿದ್ದಾರೆ. ಹಿಂದೂ ಧರ್ಮಕ್ಕೆ ಇದರಿಂದ ಅನ್ಯಾಯ ಆಗುತ್ತಿದೆ ಎಂದು ಸ್ವಾಮೀಜಿ, ಇದೀಗ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ದೇವಸ್ಥಾನಗಳನ್ನು ನ್ಯಾಯಾಲಯದ ಆದೇಶ ಮುಂದಿಟ್ಟುಕೊಂಡು ನೆಲಸಮಗೊಳಿಸಲು ಸರ್ಕಾರ ಹೊರಟಿದೆ. ನ್ಯಾಯಾಲಯದ ಆದೇಶ, ದೇವಸ್ಥಾನದ ಬಗ್ಗೆ ಅಗತ್ಯ ಅಧ್ಯಯನ, ಭಕ್ತರ ಭಾವನೆ ಮತ್ತಿತರ ಅಂಶಗಳನ್ನು ಪರಿಗಣಿಸದೇ ನೆಲಸಮಗೊಳಿಸುತ್ತಿರುವುದು ಇಡೀ ಸಮಾಜದ ಜನರಿಗೆ ನೋವುಂಟು ಮಾಡಿದೆ ಎಂದರು.

ಮೂರುಸಾವಿರ ಮಠದ ವಿರುದ್ಧ ಅಪಪ್ರಚಾರ ಸಹಿಸಲ್ಲ

ಬಿಜೆಪಿ ಆಡಳಿತದ ಅವಧಿಯಲ್ಲಿ ಹಿಂದೂ ಧರ್ಮದ ಮತ್ತು ವೀರಶೈವ-ಲಿಂಗಾಯತ ಸಮಾಜದ ದೇವಾಲಯಗಳಿಗೆ ರಕ್ಷಣೆ ಇಲ್ಲದಾಗಿದೆ. ಸಮಾಜದ ಜನಪ್ರತಿನಿಧಿಗಳು ಕೂಡ ಗಮನಹರಿಸದಿರುವುದು ಸರಿಯಲ್ಲ. ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ನಾವು ನಮ್ಮ ಮುಂದಿನ ನಡೆಯನ್ನು ಸಮಾಜದ ಸ್ವಾಮೀಜಿಗಳ ಜತೆ ಚರ್ಚಿಸಿ ಸ್ಪಷ್ಟಪಡಿಸುತ್ತೇವೆ. ಇದೇ ವೇಳೆ ಸರ್ಕಾರ ತನ್ನ ತಪ್ಪು ತಿದ್ದಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದರು.

ಬೊಮ್ಮನಹಳ್ಳಿ-ಮುಳ್ಳಳ್ಳಿಯ ಶಿವಯೋಗೀಶ್ವರ ಸ್ವಾಮೀಜಿ, ಹಿರೇ ನಾಗಾಂವ ಶಾಂತಲಿಂಗ ಸ್ವಾಮೀಜಿ, ಮಂಟೂರನ ಶಿವಲಿಂಗ ಸ್ವಾಮೀಜಿ, ಗಡಿಗೌಡಗಾವದ ಶಾಂತವೀರ ಶಿವಾಚಾರ್ಯರು, ತಾಳಿಕೋಟಿಯ ಶಿವಯೋಗಿ ಶಿವಾಚಾರ್ಯರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಶಿಮರದ, ಕೋಶಾಧ್ಯಕ್ಷ ಎಸ್‌.ಬಿ. ಗೋಲಪ್ಪನವರ, ಕಾರ್ಯದರ್ಶಿ ಸಿದ್ದಣ್ಣ ಕಂಬಾರ, ಗಣ್ಯರಾದ ಎಲ್ಲಪ್ಪ ಕಲಿವಾಳ, ಎಂ.ಎಫ್‌. ಹಿರೇಮಠ, ಎನ್‌.ಎಸ್‌. ಬಿರಾದಾರ, ಮಂಜುನಾಥ ಮುಗ್ಗನವರ ಇದ್ದರು.

ಅನ್ಯಧರ್ಮದ ಪ್ರಾರ್ಥನಾ ಮಂದಿರ ತೆರವುಗೊಳಿಸಿ...

ಹಿಂದೂ ದೇವಸ್ಥಾನ ತೆರವಿನ ಸರ್ಕಾರದ ನಡೆ ಹುತ್ತಿನೊಳಗೆ ಕೈ ಹಾಕಿದಂತೆ ಆಗುತ್ತದೆ. ಅಂತಹ ಮೂರ್ಖತನ ಮಾಡಲು ಹೋಗಬೇಡಿ. ರಾಷ್ಟ್ರೀಯ ಹೆದ್ದಾರಿ-4ರ ಮಧ್ಯೆ ಬಂಕಾಪುರ ಬಳಿ ಅನ್ಯ ಧರ್ಮದ ಪ್ರಾರ್ಥನಾ ಮಂದಿರ ಇದೆ. ತಮ್ಮ ಕ್ಷೇತ್ರದಲ್ಲಿಯೇ ಇರುವ ಈ ಪ್ರಾರ್ಥನಾ ಮಂದಿರವನ್ನು ತಾಕತ್ತಿದ್ದರೆ ತೆರವುಗೊಳಿಸಲಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು.

ಪಂಚಮಸಾಲಿ ಮೀಸಲಾತಿಗೆ ಬೆಂಬಲ...

ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲಾತಿ ವಿಚಾರದಲ್ಲಿ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ಒಂದು ಸಮುದಾಯಕ್ಕೆ ಸರ್ಕಾರಿ ಸೌಲಭ್ಯ ಸಿಗಬೇಕು ಎಂಬುದು ಅವರ ಆಶಯ. ನಾನೂ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಸೇರಿದವರೆಲ್ಲರಿಗೂ ಸೌಲಭ್ಯಗಳು ಸಿಗಬೇಕು ಎಂದು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಜತೆ ಸೇರಿ ಕೆಲಸ ಮಾಡುತ್ತೇನೆ ಎಂದ ದಿಂಗಾಲೇಶ್ವರ ಸ್ವಾಮೀಜಿ, ಈಗ ಸಮಾಜದ ಮುಂದಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದೇನೆ. ಹೀಗಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ಪ್ರಕರಣ ಕುರಿತು ಮಾತನಾಡುವುದಿಲ್ಲ ಎನ್ನುವ ಮೂಲಕ ಸ್ವಾಮೀಜಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
 

Latest Videos
Follow Us:
Download App:
  • android
  • ios